ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ರವರ ಮನೆಗೆ ಮೇ. 3 ರಂದು ರಾತ್ರಿ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರು ಗೋವಿಂದರಾಜನಗರ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ, ಸಂಶಯಗೊಂಡ ಚಿನ್ನದಂಗಡಿಯವರು ಪೋಲೀಸರಿಗೆ ಮಾಹಿತಿ ನೀಡಿದರೆನ್ನಲಾಗಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಮೈಸೂರಿನ ಇಬ್ಬರು ವ್ಯಕ್ತಿಗಳ ಹೆಸರು ಹೇಳಿದ. ಪೋಲೀಸರು ಆ ಇಬ್ಬರನ್ನು ಪತ್ತೆಹಚ್ಚಿ ಹಿಡಿದು ವಿಚಾರಿಸಿದಾಗ ಸುಳ್ಯದಲ್ಲಿ ಕಳವು ನಡೆಸಿರುವುದನ್ನು ಒಪ್ಪಿಕೊಂಡರೆಂದು ತಿಳಿದು ಬಂದಿದೆ.
ಕದ್ದ ಚಿನ್ನಾಭರಣಗಳಲ್ಲಿ ಕೆಲವನ್ನು ಅವರು ಮಾರಾಟ ಮಾಡಿದ್ದು ಪೋಲೀಸರು ಅದನ್ನು ವಶವಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಘಟನೆಯ ವಿವರ
ಅರಂಬೂರಿನಲ್ಲಿರುವ ಎಸ್.ಸಂಶುದ್ದೀನ್ ರವರ ಮನೆಗೆ ಮೇ 3ರಂದು ರಾತ್ರಿ ಕಳ್ಳರು ನುಗ್ಗಿ ಸುಮಾರು ರೂ. 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಒಂದು ರಿವಾಲ್ವರ್ ಕಳವುಗೈದಿದ್ದರು.
ಸಂಶುದ್ದೀನ್ ಅವರು ತಮ್ಮ ಕುಟುಂಬದೊಂದಿಗೆ ಮಂಗಳೂರಿಗೆ ಹೋಗಿದ್ದಾಗ ಈ ಕೃತ್ಯ ನಡೆದಿತ್ತು. ಅವರು ಸುಳ್ಯ ಪೋಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಅವರ ಮನೆಯಿಂದ ಬೆಲೆಬಾಳುವ 14 ಬ್ರಾಂಡೆಡ್ ವಾಚ್, 20 ಚಿನ್ನದ ಉಂಗುರ, 3 ಪೆಂಡೆಂಡ್, ಡೈಮಂಡ್ ಬ್ರಾಸ್ಲೈಟ್ 2, ಡೈಮಂಡ್ ಸರ 1, ರೂ 55,000 ನಗದು ಹಾಗೂ ಒಂದು ರಿವಾಲ್ವರ್ ಸೇರಿ ಒಟ್ಟು ರೂ. 20 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳ್ಳರು ಕದ್ದಿದ್ದರು. ಇದೀಗ ಕಳ್ಳರು ಪೋಲೀಸರ ಅತಿಥಿಯಾಗಿದ್ದಾರೆ.