ವೇದ ಯೋಗ ಮತ್ತು ಕಲೆಗಳ ಉಳಿವಿಗಾಗಿ ತನ್ನದೇ ಕೊಡುಗೆಯನ್ನು ಕೊಡುತ್ತಿರುವ ಸುಳ್ಯದ ಶ್ರೀಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಸರಿ ಸುಮಾರು ಒಂದು ತಿಂಗಳ ವೇದ ಯೋಗ ಕಲಾ ಶಿಬಿರವನ್ನು ಆಯೋಜಿಸುತ್ತಿದ್ದು, ಈ ವರ್ಷದ ಶಿಬಿರವು ಏಪ್ರಿಲ್ ೧೬ ರಿಂದ ಆರಂಭಗೊಂಡಿದ್ದು ಮೇ 14ರಂದು ಸಮಾಪನಗೊಳ್ಳಲಿದೆ.
ರಾಜ್ಯ ಮತ್ತು ಹೊರರಾಜ್ಯದ 150 ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದು ಅಶನ, ವಸನ, ವಸ್ತ್ರ, ಪುಸ್ತಕಗಳು, ವ್ಯಾಸಪೀಠವೂ ಸೇರಿದಂತೆ ಸಂಪೂರ್ಣ ಉಚಿತ ಶಿಬಿರ ಇದಾಗಿರುತ್ತದೆ. ವೇದಾಧ್ಯಯನ, ಯೋಗಾಭ್ಯಾಸ, ಕ್ರೀಡೆ, ಈಜು ತರಬೇತಿ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಜಾದೂ, ಮಿಮಿಕ್ರಿ, ಭಜನೆ ಇನ್ನಿತರ ಬೌದ್ಧಿಕ-ಭೌತಿಕ ವಿಕಾಸ ಪ್ರಕ್ರಿಯೆಗೆ ಸಂಬಂಧಿಸಿದ ಕಲಿಕೆಯ ಜೊತೆ ಮನೋರಂಜನಾ ಚಟುವಟಿಕೆಗಳು ಈ ಶಿಬಿರದಲ್ಲಿ ಒಳಗೊಂಡಿತ್ತು.
ಮೇ 14 ರಂದು ಈ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಮತ್ತು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ನಿವೃತ್ತರಾದ ಶ್ರೀ ಎಂ.ಎಸ್. ನಾಗರಾಜ ರಾವ್ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಶಾರದಾ ವಿದ್ಯಾಸಂಸ್ಥೆಗಳು, ಮಂಗಳೂರು ಹಾಗೂ ವಿಶ್ವ ಹಿಂದೂ ಪರಿಷತ್ ಪ್ರಾಂತ ವಿಭಾಗದ ಅಧ್ಯಕ್ಷರಾದ ಶ್ರೀ ಎಂ. ಬಿ. ಪುರಾಣಿಕ್ ಇವರು ಸಾಧಕರನ್ನು ಸನ್ಮಾನಿಸಲಿದ್ದು ಸಾಧಕರ ಬಗ್ಗೆ ಅಭಿನಂದನ ಭಾಷಣವನ್ನು ಬೆಳ್ತಂಗಡಿಯ ಬೆಳಾಲಿನ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಕೃಷ್ಣ ಭಟ್, ಚೂಂತಾರು- ಇವರು ಮಾಡಲಿದ್ದಾರೆ. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಹಾರೈಸಲಿದ್ದಾರೆ.
ಪ್ರತಿವರ್ಷ ಪ್ರತಿಷ್ಠಾನದ ವತಿಯಿಂದ ವೇದ, ಯೋಗ ಮತ್ತು ಕಲಾ ಕ್ಷೇತ್ರದಿಂದ ಆರಿಸಿದ ಮೂವರು ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದ್ದು ಈ ಬಾರಿ ವೇದ ಕ್ಷೇತ್ರದಿಂದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ), ಯೋಗ ಕ್ಷೇತ್ರದಿಂದ ಆರ್. ವಿ. ಭಂಡಾರಿ ಬೆಂಗಳೂರು, ಕಲಾ ಕ್ಷೇತ್ರದಿಂದ ವಯಲಿನ್ ಕಲಾವಿದ ವಿದ್ವಾನ್ ಶ್ರೀ ರಾಜೇಶ್ ಕುಂಭಕ್ಕೋಡು, ಇವರನ್ನು ಶ್ರೀಕೇಶವ ಸ್ಮೃತಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಕೇಶವಸ್ಮೃತಿ ಸಾಧಕರ ಪರಿಚಯ:
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ):
ಭಾರತೀಯ ಐತಿಹಾಸಿಕ ಪರಂಪರೆ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ವೈದಿಕ, ಸಂಸ್ಕೃತ ಮತ್ತು ಧರ್ಮ ಸಂಬಂಧಿಯಾದ ಹಲವು ಕೆಲಸಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಸಂಸ್ಥೆ.
ಎಳೆಯ ಮಕ್ಕಳಿಗೆ ಸಂಸ್ಕಾರ-ಸಂಜೀವಿನಿ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ನೈತಿಕ ಶಿಕ್ಷಣ. ಭಾರತೀಯ ಪರಂಪರೆ ಉಳಿಸಲು ಪ್ರಯತ್ನ ಪಟ್ಟ ಹಲವಾರು ವಿದ್ವಾಂಸರನ್ನು ಸೂಕ್ತವಾಗಿ ಗುರುತಿಸಿದ ಹೆಗ್ಗಳಿಕೆ.
ವೇದ, ಶಾಸ್ತ್ರ, ಪುರಾಣಗಳಿಗೆ ಸಂಬಂಧಿಸಿದ ಹಲವಾರು ಗ್ರಂಥಗಳ ಪ್ರಕಟಣೆಗಳ ಮೂಲಕ ಸದ್ಗ್ರಂಥಗಳ ಲೋಕಾರ್ಪಣೆ.
ಇವರಿಗೆ ಈ ವರ್ಷದ ಶ್ರೀ ಕೇಶವ ವೇದಸ್ಮೃತಿ ಪ್ರಶಸ್ತಿ – 2023 ನೀಡಿ ಗೌರವಿಸಲಾಗುತ್ತಿದೆ.
ಶ್ರೀ ಆರ್ ವಿ ಭಂಡಾರಿ:
ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊಳೆಗದ್ದೆಯವರಾದ, ಭಾರತ್ ಸೇವಾದಲದಲ್ಲಿ ರಾಜ್ಯ ಮಟ್ಟದ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದುಕೊಂಡ ಮೇಲೂ ರಾಜ್ಯದಾದ್ಯಂತ ಪ್ರವಾಸ ಮಡುತ್ತಾ ಯೋಗ ಕೈಂಕರ್ಯದಲ್ಲಿ ತೊಡಗಿಸಿಕೊಂಡು, ಧರ್ಮಸ್ಥಳದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸಹಿತ ವಿವಿಧೆಡೆಗಳಲ್ಲಿ ಸೇವಾ ತತ್ಪರರಾಗಿರುವ, ಯೋಗಕ್ಕೆ ಪೂರಕವಾದ ಗಾನ-ವಾದನಗಳಾದ ಮುರಳಿ-ಮೃದಂಗ, ಚಂಡೆ-ಬ್ಯಾಂಡ್ ಹೀಗೆ ಚತುರ್ವಾದನ ಚತುರರಾದ, ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಆರ್. ವಿ. ಭಂಡಾರಿ ಇವರಿಗೆ ಈ ಬಾರಿಯ ಶ್ರೀ ಕೇಶವ ಯೋಗಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ವಿದ್ವಾನ್ ರಾಜೇಶ್ ಕುಂಭಕ್ಕೋಡು:
ಎಂ. ಎ. ಪದವೀಧರ
ಕಲಾಲೋಕದ ಯುವ ಸಾಧಕರ ತಾರಸ್ಥಾಯಿಯಲ್ಲಿ ನಿಲ್ಲುವ ಸಾಧಕರು
ಶ್ರೀಮತಿ ವಿಜಯ ಹಾಗೂ ಶ್ರೀ ಗೋಪಾಲಕೃಷ್ಣ ನಾಯಕ್ ದಂಪತಿಗಳ ಮಗನಾಗಿ ಸುಳ್ಯ ತಾಲೂಕಿನ ಕುಂಭಕ್ಕೋಡುವಿನಲ್ಲಿ ಜನನ.
ಸಂಗೀತದ ಪ್ರಾಥಮಿಕ ಪಾಠವನ್ನು ಸುಳ್ಯದ ರಾಮಮಂದಿರದಲ್ಲಿ ಕಾಸರಗೋಡಿನ ವಿದ್ವಾನ್ ವಾಸುದೇವ ಆಚಾರ್ಯರಲ್ಲಿ ಪಡೆದು, ಹೆಚ್ಚಿನ ವ್ಯಾಸಂಗ ಚೆನ್ನೈಯ ಸಂಗೀತ ಕಲಾನಿಧಿ ಪದ್ಮಶ್ರೀ ಎ. ಕನ್ಯಾಕುಮಾರಿ ಅವರಲ್ಲಿ
ಪಿಟೀಲು ವಾದನದ ನಿರಂತರ 17 ವರ್ಷದ ಅಭ್ಯಾಸದೊಂದಿಗೆ ಗುರುಗಳ ಹಾಗೂ ಹಲವಾರು ಖ್ಯಾತನಾಮರ ಜೊತೆಗೆ ಅಸಂಖ್ಯ ಸಂಗೀತ ಕಛೇರಿಗಳಲ್ಲಿ ಯಶಸ್ವೀ ಅನುಸರಣೆ
ವಿದ್ವಾನ್ ರಾಜೇಶ್ ಕುಂಭಕ್ಕೋಡು ಇವರಿಗೆ ಈ ಬಾರಿಯ ಶ್ರೀ ಕೇಶವ ಕಲಾಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ ಭಟ್, ಶಿಬಿರ ಸಂಚಾಲಕ ವೇ| ಮೂ| ಅಭಿರಾಮ ಶರ್ಮಾ, ವೇ| ಮೂ| ಸುದರ್ಶನ ಭಟ್ ಉಜಿರೆ ಹಾಗೂ ಹಿರಿಯ ವಿದ್ಯಾರ್ಥಿ ಬಲರಾಮ ಭಟ್, ಶಿವನಿವಾಸ ಉಪಸ್ಥಿತರಿದ್ದರು.