Ad Widget

ಕೆಎಫ್ ಡಿಸಿ ನಲ್ಲಿ ಭಾರೀ ಅಕ್ರಮ-ಮಾಧ್ಯಮ ವರದಿ ಬೆನ್ನಲ್ಲೇ ನಿಗಮದ ಬಡ ಕಾರ್ಮಿಕರ ತಲೆದಂಡ


ಸುಬ್ರಹ್ಮಣ್ಯ ರಬ್ಬರ್ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅವ್ಯವಹಾರವನ್ನು ಮಾಧ್ಯಮಗಳು ಬಯಲಿಗೆಳೆದ ತರುವಾಯ ನಿಗಮದ ಕಾರ್ಮಿಕರನ್ನು ಅಮಾನತು ಮಾಡಿದ ಪ್ರಕರಣ ನಡೆದಿದೆ.
ರಬ್ಬರ್ ನಿಗಮದಲ್ಲಿ ಅಧಿಕಾರಿಗಳು ಔಷದಿ ಸಿಂಪಡಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಬಾಕಿ ಮಾಡಿದ ರಬ್ಬರ್ ಮರಗಳಿಗೆ ಪುನಃ ಔಷಧಿಯನ್ನು ಸಿಂಪಡಿಸಿ ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಆದರೆ, ಇದೀಗ ಸುಬ್ರಹ್ಮಣ್ಯ ರಬ್ಬರ್ ವಿಭಾಗದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆಂಬ ಕಾರಣ ಹೇಳಿ ಬಡ ರಬ್ಬರ್ ಪ್ಲಾಂಟೇಷನ್ ಕಾರ್ಮಿಕರನ್ನು ಅಮಾನತು ಮಾಡುವ ಮೂಲಕ ಹಗೆ ತೀರಿಸಿಕೊಂಡಿದ್ದಾರೆ. ಈಗಾಗಲೇ ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಕುಮಾರಧಾರ ಘಟಕದ ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸಲು ಕೇರಳದ ಗುತ್ತಿಗೆದಾರರೋರ್ವರಿಗೆ ನಿಗಮದ ಅಧಿಕಾರಿಗಳು ಗುತ್ತಿಗೆ ನೀಡಿದ್ದು, ಅವರು ಕೆಲವೇ ಪ್ರದೇಶಗಳಲ್ಲಿ ಔಷಧಿ ಸಿಂಪಡಿಸಿ ತೆರಳಿದ್ದರು. ಈ ವಿಷಯದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ವರದಿ ಮಾಡಿದ್ದರು. ಕೂಡಲೇ ಈ ಬಗ್ಗೆ ಎಚ್ಚೆತ್ತ ಇಲಾಖೆ ತನ್ನ ತಪ್ಪನ್ನು ಒಪ್ಪಿಕೊಂಡು ಪುನಃ ಕೇರಳದಿಂದ ಗುತ್ತಿಗೆದಾರರನ್ನು ಕರೆಯಿಸಿ ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸಿದ್ದಾರೆ. ಕಾರ್ಮಿಕರು ಸಸ್ಪೆಂಡ್ ಆದರೆ, ಇದೀಗ ತಮ್ಮ ತಪ್ಪನ್ನು ಮರೆಮಾಚುವ ಸಲುವಾಗಿ ಮೂವರು ಮೇಸ್ತ್ರಿಗಳು, ಓರ್ವ ಕಾರ್ಮಿಕ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಓರ್ವರು ಸೇರಿದಂತೆ ಒಟ್ಟು ಐವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಈ ಹಿಂದಿನಿಂದಲೂ ಬ್ರಹ್ಮಾಂಡ ಭ್ರಷ್ಟಚಾರಗಳು ನಡೆಯುತ್ತಿದ್ದು, ಇದರಲ್ಲಿ ಕಿರಿಯ ಅಧಿಕಾರಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪವಿತ್ತು.
ರಬ್ಬರ್ ನಿಗಮದಲ್ಲಿ ನಡೆದ ಈ ಅವ್ಯವಹಾರ ಬಯಲಿಗೆ ತರಲು ಮುಂದಾದ ಬಡ ಕಾರ್ಮಿಕರನ್ನು ಬಲಿಪಶು ಮಾಡಿ ನುಣುಚಿಕೊಳ್ಳುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳ ಈ ದುರ್ವರ್ತನೆ ವಿರುದ್ಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಕೆಎಫ್ ಡಿಸಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ರಬ್ಬರ್ ತೋಟಕ್ಕೆ ಮದ್ದು ಸಿಂಪಡಣೆ ವೇಳೆ ಅದನ್ನು ನೋಡಿಕೊಳ್ಳಲು ನೇಮಿಸಿದ್ದ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಹಿನ್ನೆಲೆಯಲ್ಲಿ ಮೂವರು ಮೇಸ್ತ್ರಿ ಮತ್ತು ಒರ್ವ ಕಾರ್ಮಿಕ ನನ್ನು ಕೆಲಸದಿಂದ ತೆಗೆಯಲಾಗಿದೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸೂಪರಿಂಟೆಂಡೆಂಟ್ ವಿಶ್ವನಾಥ್ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!