ಸುಳ್ಯದ ಜೀವನದಿಯಾಗಿರುವ ಪಯಸ್ವಿನಿಯ ಒಡಲು ಬರಿದಾಗಿದ್ದು, ನದಿಯಲ್ಲಿದ್ದ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ. ನದಿ ತಟದಲ್ಲಿ ಎಲ್ಲೆಂದರಲ್ಲಿ ಸಾವಿರಾರು ಮೀನುಗಳು ತನ್ನ ಪ್ರಾಣ ಕಳೆದುಕೊಂಡು ಸುಡು ಬಿಸಿಲಿನಲ್ಲಿ ಒಣಗಿ ಹೋಗುತ್ತಿದೆ. ಪರಿಸರವಿಡೀ ದುರ್ನಾತದಿಂದ ಕೂಡಿದೆ.
ಸುಳ್ಯ ತಾಲೂಕಿನೆಲ್ಲೆಡೆ ಜಲಕ್ಷಾಮದ ಭೀತಿ ಎದುರಾಗಿದ್ದು, ಜನರು ಮಳೆಗಾಗಿ ದೇವರ ಮೊರೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ತುರ್ತು ಪರಿಸ್ಥಿತಿಗಳು ಮನುಷ್ಯನ ಜೀವನದಲ್ಲಿ ಉಂಟಾದರೆ ಪರ್ಯಾಯ ಯೋಜನೆಗಳು ಮತ್ತು ಅನುದಾನಗಳನ್ನು ತರಿಸಲು ಅವೆಷ್ಟು ಪ್ರತಿಭಟನೆಗಳು ನಡೆಯುತ್ತಿದ್ದವು. ಎಷ್ಟು ಗಲಾಟೆಗಳು ಮಾಡುತ್ತಿದ್ದರು. ಆದರೆ ಈ ಮೂಕ ಪ್ರಾಣಿಗಳ ರೋಧನೆ ಮತ್ತು ವೇದನೆ ಕಾಣುವವರು ಇಂದು ಯಾರೊಬ್ಬರೂ ಇಲ್ಲದಂತಾಗಿದೆ.
ಇನ್ನು ತಾಲೂಕಿನ ನಾಲ್ಕೂರು ಗ್ರಾಮದ ಮರಕತ ದುರ್ಗಾಪರಮೇಶ್ವರಿ ದೇಗುಲದ ಸಮೀಪ ದೇವರ ಮೀನುಗಳೂ ಸಾಯಲು ಆರಂಭಿಸಿವೆ. ನದಿಮೂಲಗಳ ಯಥೇಚ್ಛ ಬಳಕೆಯಿಂದ ನೀರು ಬರಿದಾಗುತ್ತಿದ್ದು, ಇನ್ನೊಂದು ವಾರ ಮಳೆ ಬರದಿದ್ದಲ್ಲಿ, ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಂಭವವಿದೆ.