ಪಿಯುಸಿ ಪರೀಕ್ಷೆಯಲ್ಲಿ ದ.ಕ ಜಿಲ್ಲೆಯಲ್ಲಿ ಅವಳಿ ಸಹೋದರಿಯರು ವಿಶೇಷ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ. ಅವಳಿ ಹೆಣ್ಣು ಮಕ್ಕಳು ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾರೆ.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿ ಉಮೇಶ್ ಗೌಡ ಪಿ.ಎಚ್. ಮತ್ತು ಗೀತಾ ದಂಪತಿಯ ಪುತ್ರಿಯರಾದ ಸ್ಪಂದನ – ಸ್ಪರ್ಶ ಎಂಬ ಅವಳಿ ಸಹೋದರಿಯರು, ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದು 600ರಲ್ಲಿ 594 ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ಸ್ಪಂದನ ಮತ್ತು ಸ್ಪರ್ಶ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ ಸಮಾನವಾದ ಅಂಕಗಳನ್ನು ಪಡೆದಿದ್ದಾರೆ. ಸ್ಪಂದನ ಇಂಗ್ಲಿಷ್‌ನಲ್ಲಿ 98 ಹಾಗೂ ಸ್ಪರ್ಶ 97 ಅಂಕಗಳನ್ನು ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ಪಂದನ 98 ಅಂಕಗಳನ್ನು ಪಡೆದಿದ್ದರೆ, ಸ್ಪರ್ಶ 99 ಅಂಕಗಳನ್ನು ಪಡೆದಿದ್ದಾರೆ. ಹಿಂದಿಯಲ್ಲಿ ಇಬ್ಬರೂ 98 ಅಂಕಗಳನ್ನು ಪಡೆದು ಉಳಿದೆಲ್ಲಾ ವಿಷಯಗಳಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.