ಸುಳ್ಯ ಕ್ಷೇತ್ರದಲ್ಲಿ 29 ವರ್ಷಗಳಿಂದ ಶಾಸಕರಾಗಿದ್ದ ಸಚಿವ ಎಸ್.ಅಂಗಾರರು ಈ ಬಾರಿ ಸ್ಪರ್ಧೆ ಮಾಡಿದರೆ ಸೋಲುವುದು ಖಚಿತ ಎಂದು ಅರಿತ ಬಿಜೆಪಿಗರು ಹೊಸ ಮುಖವನ್ನು ನೀಡಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಅಭಿವೃದ್ಧಿ, ಇಲ್ಲಿಯ ಸಮಸ್ಯೆಯನ್ನು ವಿಧಾನ ಸೌಧದಲ್ಲಿ ಇಟ್ಟು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಸುಳ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ ಹೇಳಿದರು.
ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ ತಾಲೂಕಿನ ಹಲವು ಗ್ರಾಮದಲ್ಲಿ ಅಡಿಕೆ ಎಲೆ ಹಳದಿ ರೋಗ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಅಂಗಾರರು ಪ್ರಯತ್ನಿಸಿಲ್ಲ. ಅವರು ರೈತರ ಪರ ನಿಲ್ಲಲೇ ಇಲ್ಲ. ಹಲವು ಕಡೆಗಳಲ್ಲಿ ಮತದಾನ ಬಹಿಷ್ಕಾರ ಆಗುತ್ತಿದೆ. ಅಭಿವೃದ್ಧಿ ಕೆಲಸವನ್ನೇ ಶಾಸಕರು ಮಾಡಿಲ್ಲ. ಬಿಜೆಪಿಯವರೇ ಕೆಲವು ಕಡೆ ಪ್ರತಿಭಟನೆಯನ್ನೂ ಮಾಡಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಡಬ್ಬಲ್ ಇಂಜಿನ್ ಸರ್ಕಾರಗಳಿದ್ದರೂ, ಇಲ್ಲಿಯವರೇ ಸಚಿವರಿದ್ದು ಅವರದ್ದೇ ಪಕ್ಷದವರು ರಸ್ತೆ ಅಭಿವೃದ್ಧಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದರು.
ಚುನಾವಣೆ ದೃಷ್ಟಿಯಿಂದ ಸುಳ್ಯಕ್ಕೆ 23 ವರ್ಷಗಳ ಹಿಂದೆಯೇ ಮಂಜೂರಾತಿಯಾದ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಗೆ ಗುದ್ದಲಿಪೂಜೆ ಮಾಡಿದ್ದಾರೆ. ಆದರೆ ಕೆಲಸ ಇನ್ನೂ ಆರಂಭ ಆಗಿಲ್ಲ. ಇದೆಲ್ಲ ಕೆಲಸವನ್ನು ಮಾಡಲು ಬಿಜೆಪಿಯ ಹೊಸ ಅಭ್ಯರ್ಥಿ ಯಿಂದ ಸಾಧ್ಯವೇ? ಹಾಗೇನಾದರೂ ಅಭಿವೃದ್ಧಿ ಆಗಬೇಕೆಂದು ಬಿಜೆಪಿ ಹೊಸ ಮುಖಕ್ಕೆ ಅವಕಾಶ ಕೊಟ್ಟಿದ್ದಾರೆ ಬೇರೆ ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕಿತ್ತು. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಇವರು ಯಾವುದೇ ಪ್ರಯತ್ನ ಪಟ್ಟಿಲ್ಲ. ಕಾಂಗ್ರೆಸ್ ನಲ್ಲಿ ವಿದ್ಯಾವಂತ ಸಮರ್ಥರಾಗಿರುವ ಅಭ್ಯರ್ಥಿ ಕೃಷ್ಣಪ್ಪರು ಇದ್ದಾರೆ. ಅವರನ್ನು ಜನರು ಬೆಂಬಲಿಸುತ್ತಾರೆ ಎಂದು ಹೇಳಿದರು.
ಮತದಾನ ಬಹಿಷ್ಕಾರದ ಕೂಗು ಇರುವ ಎಲ್ಲ ಕ್ಷೇತ್ರಕ್ಕೂ ಹೋಗಿ ಅಲ್ಲಿಯ ಜನರಿಗೆ ಭರವಸೆ ನೀಡುತ್ತೇವೆ. ಮತ್ತು ನಮ್ಮ ಅಭ್ಯರ್ಥಿ ಗೆದ್ದ ತಕ್ಷಣ ಆದ್ಯತೆಯಲ್ಲಿ ಆ ಕೆಲಸವನ್ನು ಮಾಡಿ ತೋರಿಸುತ್ತೇವೆ ಎಂದು ವೆಂಕಪ್ಪ ಗೌಡರು ಹೇಳಿದರು
ನಮ್ಮ ಪಕ್ಷದಲ್ಲಿ ಒಂದಷ್ಟು ಗೊಂದಲವಿದ್ದು ಈಗ ಎಲ್ಲವೂ ಸರಿ ಆಗಿದೆ. ನಂದಕುಮಾರ್ ಅಭಿಮಾನಿ ಬಳಗದವರು ತಟಸ್ಥರಾಗುತ್ತೇವೆ ಎಂದು ಹೇಳಿದ್ದು ನಾವು ಅವರ ಮನೆಗೆ ಹೋಗಿ ಅವರು ಬರಬೇಕೆಂದು ಕೇಳಿಕೊಳ್ಳಲಾಗುವುದು. ಅವರೆಲ್ಲರೂ ಬಂದೇ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸರಸ್ವತಿ ಕಾಮತ್, ಸುರೇಶ್ ಎಂ.ಹೆಚ್., ಅನಿಲ್ ರೈ ಬೆಳ್ಳಾರೆ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಡೇವಿಡ್ ಧೀರಾ ಕ್ರಾಸ್ತ, ಜತ್ತಪ್ಪ ರೈ ಸುಳ್ಯ ಉಪಸ್ಥಿತರಿದ್ದರು.
- Sunday
- November 24th, 2024