ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ವಿಜೃಂಭಣೆಯಿಂದ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ರಾತ್ರಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಸುಬ್ರಹ್ಮಣ್ಯ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಭಾಗವಹಿಸಿದ್ದರು. ಅಭ್ಯಾಗತರಾಗಿ ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತಾ ಚಾಕೋಟೆಡ್ಕ, ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೂಸಪ್ಪ ಗೌಡ ಮುಗುಪ್ಪು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರು, ಸೇವಾಕರ್ತರಾದ ಶ್ರೀ ಮಲಯಾಳ ಗೋವಿಂದ ಭಟ್, ಹಿರಿಯ ಆರೋಗ್ಯ ಕಾರ್ಯಕರ್ತರಾದ ಶ್ರೀಮತಿ ವಸಂತಿ ಎಸ್ ಭಟ್ ಹಾಗೂ ಶ್ರೀಮತಿ ಬೇಬಿ ಸಿ.ಸಿ, ಮೆಸ್ಕಾಂ ಸಿಬ್ಬಂದಿ ಶ್ರೀ ವಿಕ್ರಂ ಶಿರೂರು, ಹಿರಿಯ ದೈವ ಸೇವಕರಾದ ಕೊಳೆಂಜಿಕೋಡಿ ಸೂರಪ್ಪ ಗೌಡ, ನಿವೃತ್ತ ಅಂಚೆ ಪಾಲಕ ರಾಧಾಕೃಷ್ಣ ಕಾಯಾರ ಹಾಗೂ ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಬಾಳಿಲ – ಮುಪ್ಪೇರ್ಯ ಇವರುಗಳಿಗೆ ಗೌರವಾರ್ಪಣೆ ನಡೆಯಿತು. ವೇದಿಕೆಯಲ್ಲಿ ದೇವಾಲಯದ ಧರ್ಮದರ್ಶಿಗಳು, ಆಡಳಿತ ಮಂಡಳಿ ಪ್ರಮುಖರು, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ ಬಾಳಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ರೈ ಟಪಾಲುಕಟ್ಟೆ ವಂದಿಸಿದರು. ರಾತ್ರಿ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ತಂಡದ ಸದಸ್ಯರಿಂದ ಚೆಂಡೆ ವಾದನ ಸೇವೆ ನಡೆಯಲಿದೆ. ರಾತ್ರಿ ಗಂಟೆ 10.00ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಕಾಣಿಕೆ, ಪ್ರಸಾದ ವಿತರಣೆ, ಬಲಿ ನಡೆಯಲಿದೆ.