ಸುಳ್ಯ, ಜ.23: ಪಂಜದ ಚಿಂಗಾಣಿಗುಡ್ಡೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ, ಪೈಪ್ ಅಳವಡಿಸಿ ಟ್ಯಾಂಕ್ ಗೆ ನೀರು ಸರಬರಾಜು ಮಾಡದೇ ಇರುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಒತ್ತಾಯಿಸಲಾದ ಘಟನೆ ನಡೆಯಿತು.
ಸುಳ್ಯದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಅಧಿಕಾರಿಗಳ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಸೋಮವಾರ ನಡೆಯಿತು. ಲೋಕಾಯುಕ್ತ ಎಸ್ಪಿ ಸೈಮನ್ ನೇತೃತ್ವದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು. ಪಂಜದ ಚಿಂಗಾಣಿ ಗುಡ್ಡೆಯಲ್ಲಿ 2011-12ರಲ್ಲಿ ಜಿ.ಪಂ. ಅನುದಾನದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್ ಅಳವಡಿಸಿ ಟ್ಯಾಂಕ್ ಗೆ ನೀರು ಸರಬರಾಜು ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದೀಗ ಇಲ್ಲಿಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಪ್ರತ್ಯೇಕ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಆದ್ದರಿಂದ ಮೊದಲಿಗೆ ಪೈಪ್ ಲೈನ್ ಕಾಮಗಾರಿಗೆ ಖರ್ಚು ಮಾಡಲಾಗಿ ಉಪಯೋಗವಿಲ್ಲದಂತೆ ಮಾಡಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿನ್ನಪ್ಪ ಗೌಡ ಮನವಿ ಸಲ್ಲಿಸಿದರು. ಈ ಬಗ್ಗೆ ಅಧಿಕಾರಿಗಳು ಸಂಬಂಧಿಸಿದವರಿಂದ ಮಾಹಿತಿ ಬಗ್ಗೆ ವಿಚಾರಿಸಿದರು. ಹಾಗೂ ಇಂಜಿನಿಯರಿಂಗ್ ಅವರಿಂದ ವರದಿ ಪಡೆದುಕೊಂಡು ಮುಂದಿನ ಕ್ರಮ ವಹಿಸುವ ಬಗ್ಗೆ ತಿಳಿಸಿದರು.
ಮನೆ ನಿವೇಶನ ಜಾಗದಲ್ಲಿ ಸುಮಾರು 0.02ಎಕ್ರೆ ಜಾಗ ಅತಿಕ್ರಮಣ ಮಾಡಿ ಮನೆ ನಿರ್ಮಿಸಿಕೊಂಡಿರುವ ಬಗ್ಗೆ ದೂರು ನೀಡಲಾಯಿತು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರ್ವೆ ನಡೆಸುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.
ನಗರ ಪಂಚಾಯತ್ ವಠಾರದಲ್ಲಿರುವ ಕಸ ತೆರವಾಗದೇ ಇರುವ ಬಗ್ಗೆ, ನ.ಪಂ. ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆಯಲ್ಲಿ ಚರಂಡಿ ಯನ್ನು ಅವೈಜ್ಞಾನಿಕ ವಾಗಿ ನಿರ್ಮಿಸಿದ್ದಾರೆಂದು, ವಿವಿಧ ವಿಚಾರಗಳ ಬಗ್ಗೆ ಈ ಹಿಂದೆ ಸಲ್ಲಿಸಿದ ದೂರುಗಳ ಬಗ್ಗೆ ಶಾರೀಕ್ ಡಿ.ಎಂ. ಅವರು ಮಾಹಿತಿ ಪಡೆದುಕೊಂಡರು ಪಂಜ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ, ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗೆ ಕಾದಿರಿಸಲಾದ ಜಾಗಗಳಿಗೆ ಸೂಕ್ತ ಗಡಿಗುರುತು ಮಾಡಿ ರಕ್ಷಣೆ ಕಲ್ಪಿಸಿ, ಆಯಾ ಇಲಾಖೆಗಳ ಕಟ್ಟಡ ನಿರ್ಮಿಸುವಂತೆ ಜಿನ್ನಪ್ಪ ಗೌಡ ಮನವಿ ಸಲ್ಲಿಸಿದರು.
5 ದೂರು ಸ್ವೀಕಾರ:
ಸುಳ್ಯದಲ್ಲಿ ಸೋಮವಾರ ನಡೆದ ಲೋಕಾಯುಕ್ತ ಅಹವಾಲು ಸ್ವೀಕಾರದಲ್ಲಿ 5 ಅಹವಾಲು ಸ್ವೀಕರಿಸಲಾಯಿತು. ಸರ್ವೆ ಇಲಾಖೆಯ 1, ಕಂದಾಯ ಇಲಾಖೆಯ 1, ನಗರ ಪಂಚಾಯತ್ 1, ಗಣಿ ಇಲಾಖೆ 1 ಅಹವಾಲು ಸಲ್ಲಿಕೆಯಾಯಿತು.
ಮುಂದಿನ ಕ್ರಮ:
ಇಂದಿನ ಕಾರ್ಯಕ್ರಮದಲ್ಲಿ 5 ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಆಯಾ ಅಹವಾಲನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸೈಮನ್ ತಿಳಿಸಿದರು. ಸರಕಾರ ನಮಗೆ ನೀಡಿದ ಅಧಿಕಾರಿಗಳು, ಸಿಬ್ಬಂದಿಗಳನ್ನು ಬಳಸಿಕೊಂಡು ಇಲಾಖೆ ಪೂರಕ ಕರ್ತವ್ಯ ನಿರ್ವಹಿಸಲಿದೆ. ಸಾರ್ವಜನಿಕರು ಸಹಕಾರ ನೀಡಬೇಕಿದೆ ಎಂದು ಎಸ್ಪಿ ತಿಳಿಸಿದರು.
ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಲೋಕಾಯುಕ್ತ ಡಿವೈಎಸ್ಪಿಗಳಾದ ಚೆಲುವರಾಜ್, ಕಲಾವತಿ, ಪೊಲೀಸ್ ಇನ್ಸ್ಪೆಕ್ಟರ್ ಅಮಾನುಲ್ಲಾ, ವಿನಾಯಕ ಬಿಲ್ಲವ, ಸಿಬ್ಬಂದಿಗಳಾದ ರಾಜಪ್ಪ, ವಿನಾಯಕ, ಮಹೇಶ್, ತಾ.ಪಂ. ವ್ಯವಸ್ಥಾಪಕ ಹರೀಶ್, ವಲಯ ಅರಣ್ಯಾಧಿಕಾರಿ ಗಿರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಎಡಿಸಿಆರ್ ಆರ್.ವೆಂಕಟೇಶ್, ಮೆಸ್ಕಾಂ ಎಇಇ ಸುಪ್ರೀತ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.