ಬಹು ದಿನಗಳ ಬೇಡಿಕೆಯಾದ ಅಜ್ಜಾವರ, ಕರ್ಲಪ್ಪಾಡಿ ನರಂದಗುಳಿ, ಪೈಂಬೆಚ್ಚಾಲು ಮಾರ್ಗವಾಗಿ ಆಲೆಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರಾದ ಯೋಗೀಶ್ ಹೇಳಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ರಸ್ತೆಯಾಗಿದ್ದು, ಆಲೆಟ್ಟಿ ಗ್ರಾಮದ ಗ್ರಾಮಸ್ಥರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಶಾಲಾ ಮಕ್ಕಳಿಗೂ, ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಗಳಿಂದ ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಗುರುವಾಯೂರು, ಪರಶಿನಕಡವು, ಬೇಕಲಕೋಟೆ ಮತ್ತು ಕಾನತ್ತೂರು ದೇವಸ್ಥಾನಗಳಿಗೆ ತೆರಳುವ ಪ್ರವಾಸಿಗರಿಗೂ ಬಹಳ ಹತ್ತಿರದ ಅನುಕೂಲಕರ ರಸ್ತೆಯಾಗಿರುತ್ತದೆ. ಗ್ರಾಮಗಳಲ್ಲಿನ ಶಾಲಾ ಮಕ್ಕಳಿಗೆ, ಉದ್ಯೋಗಕ್ಕೆ ತೆರಳುವ ಉದ್ಯೋಗಿಗಳಿಗೆ, ವ್ಯಾಪಾರ ವಹಿವಾಟುಗಳಿಗೆ ಬಹಳ ಅಗತ್ಯ ರಸ್ತೆಯಾಗಿರುತ್ತದೆ. ಕರ್ಲಪಾಡಿ ದ್ವಾರದಿಂದ ನಂದಗುಳಿಯವರೆಗೆ ಅಂದಾಜು 3 ಕಿ.ಮೀ ಅಭಿವೃದ್ಧಿಗಾಗಿ ಹಲವು ಬಾರಿ ಚುನಾಯಿತ ಪ್ರತಿನಿಧಿಗಳಿಗೆ, ಸಚಿವರಾದ ಎಸ್.ಅಂಗಾರರಿಗೆ, ದ.ಕ. ಜಿಲ್ಲಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸರಕಾರ ಆದಷ್ಟೂ ಶೀಘ್ರ ಅನುದಾನ ಒದಗಿಸಿಕೊಟ್ಟು ಅಭಿವೃದ್ಧಿಪಡಿಸಿಕೊಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೂತ್ ಅಧ್ಯಕ್ಷ ಬಾಲಕೃಷ್ಣ ಆಚಾರಿ ಹಾಸ್ಪಾರೆ, ಮಣಿಕಂಠ ಹಾಸ್ಪಾರೆ ಉಪಸ್ಥಿತರಿದ್ದರು.