ಸುಳ್ಯ ನಗರ ಪಂಚಾಯತ್ ಅವರಣದಲ್ಲಿ ಕಳೆದ ಒಂದು ವರ್ಷಗಳಿಂದ ಕಸದ ರಾಶಿಯ ಪರ್ವತವೇ ಎದ್ದು ನಿಂತಿದ್ದು ಇದರ ವರ್ಗಾವಣೆಗಾಗಿ ಸಾರ್ವಜನಿಕರಿಂದ ಹಲವಾರು ರೀತಿಯ ಪ್ರತಿಭಟನೆಗಳು ಪತ್ರಿಕೆಗಳಲ್ಲಿ ಬೇಕಾದಷ್ಟು ಲೇಖನಗಳು ಪ್ರಕಟಗೊಳ್ಳುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ಕಣ್ಣು ತೆರೆಸುವಲ್ಲಿ ಇವೆಲ್ಲವೂ ವಿಫಲವಾಗಿದೆ .
ಇದರ ಮಧ್ಯೆ ಜೂನ್ 17ರಂದು ನಗರ ಪಂಚಾಯತಿಯ ಕಾಂಗ್ರೆಸ್ ಮತ್ತು ಸ್ವತಂತ್ರ ಪಕ್ಷದಿಂದ ಆಯ್ಕೆಗೊಂಡ ನ.ಪಂ ಸದಸ್ಯರುಗಳಿಂದ ವಿನೂತನ ರೀತಿಯ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ನ. ಪಂ ಸದಸ್ಯ ಯಂ ವೆಂಕಪ್ಪ ಗೌಡ ತಮ್ಮ ಪಕ್ಷದ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಕೆರಿ, ಧೀರ ಕ್ರಾಸ್ತಬೀರಮಂಗಲ, ಅದೇ ರೀತಿ ಸ್ವತಂತ್ರ ಪಕ್ಷದಿಂದ ಆಯ್ಕೆಗೊಂಡ ನ.ಪಂ ಸದಸ್ಯರು ಗಳಾದ ಕೆ ಎಸ್ ಉಮ್ಮರ್ , ರಿಯಾಜ್ ಕಟ್ಟೆ ಕಾರ್ಸ್, ಇವರೊಂದಿಗೆ ನ ಪಂ ಕಚೇರಿಗೆ ಆಗಮಿಸಿ ಒಡಮಸ್ (ಸೊಳ್ಳೆ ಮದ್ದು) ಕಚೇರಿಯ ಸಿಬ್ಬಂದಿಗಳಿಗೆ ಹಚ್ಚಿ ವಿನೂತನ ರೀತಿಯ ಪ್ರತಿಭಟನೆಯನ್ನು ನಡೆಸಿದರು. ನಂತರ ಪತ್ರಿಕೆಗೆ ಹೇಳಿಕೆ ನೀಡಿದ ವೆಂಕಪ್ಪಗೌಡ ಸುಳ್ಯದ ಹೃದಯ ಭಾಗದಲ್ಲಿರುವ ನಗರ ಪಂಚಾಯತ್ ಕಚೇರಿಯ ಬಳಿ ಈ ರೀತಿಯ ಕಸಗಳನ್ನು ಸುರಿದು ಪಂಚಾಯತ್ ಕಚೇರಿಯನ್ನು ನೂತನ ಕಸದ ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿರುವುದು ಸುಳ್ಯಕ್ಕೆ ನಾಚಿಕೆಗೇಡಿನಸಂಗತಿಯಾಗಿದೆ.ಇದನ್ನು ಇಲ್ಲಿಂದ ತೆರವುಗೊಳಿಸುವಂತೆ ಹಲವಾರು ರೀತಿಯ ಪ್ರತಿಭಟನೆಗಳನ್ನು, ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಡಿದರೆ ಯಾವುದೇ ರೀತಿಯ ಪ್ರಯೋಜನ ಕಂಡುಬರುವುದಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದು ಅದರೊಂದಿಗೆ ಕೊರೋಣ ವೈರಸ್ಸಿನ ಭಯದಿಂದ ಜೀವನ ಸಾಗಿಸುತ್ತಿರುವ ಈ ಸಂದರ್ಭದಲ್ಲಿ ಮಾರಕ ಡೆಂಗ್ಯೂ ಕಾಯಿಲೆಗೆ ತುತ್ತಾಗುವ ಪರಿಸ್ಥಿತಿ ಸುಳ್ಯದ ಜನತೆಗೆ ನಿರ್ಮಾಣವಾಗಿದೆ. ಇದರೊಂದಿಗೆ ನಗರ ಪಂಚಾಯತಿನ ಕೆಲ ಸಿಬ್ಬಂದಿಗಳು ಸೊಳ್ಳೆಗಳ ಕಾಟದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಾವೇ ಪತ್ರಿಕೆಗಳಲ್ಲಿ ಹೇಳಿಕೆಯನ್ನು ನೀಡಿ ಕಚೇರಿಯಲ್ಲಿ ಸೇವೆ ಸಲ್ಲಿಸುವ ಸ್ಥಳವನ್ನು ಬದಲಾಯಿಸಿದ ಘಟನೆಗಳು ನಡೆದಿದೆ .ಒಂದು ವಾರದಲ್ಲಿ ಈ ಕಸಗಳನ್ನು ಇಲ್ಲಿಂದ ಸ್ಥಳಾಂತರಿಸದಿದ್ದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿರುತ್ತಾರೆ. ಈಗ ಬಿಜೆಪಿ ಸರಕಾರ ಸತ್ತಿದೆಯಾ? ಜೀವಂತ ಇಲ್ಲವೇ ? ಈ ಸಮಸ್ಯೆಯು ನಮ್ಮ ಶಾಸಕರಿಗೆ ,ಸಂಸದರಿಗೆ ಈಗ ಕಾಣುತ್ತಿಲ್ಲವೇ? ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದಾಗ ಕಾಂಗ್ರೆಸ್ ಸರ್ಕಾರ ಸತ್ತಿದೆ ಎಂದು ಹೇಳುತ್ತಿದ್ದರು. ಇದೀಗ ನಾವುಗಳು ಅದೇ ಪ್ರಶ್ನೆಯನ್ನು ಅವರಲ್ಲಿ ಕೇಳುತ್ತಿದ್ದೇವೆ ಎಂದು ಹೇಳಿದರು.
ನಗರ ಪಂಚಾಯತ್ ಇನ್ನೊಬ್ಬ ಸದಸ್ಯ ಉಮ್ಮರ್ ಕೆಎಸ್ ಈ ಸಂದರ್ಭದಲ್ಲಿ ಮಾತನಾಡಿ ಸುಳ್ಯ ನಗರ ಪಂಚಾಯತಿಗೆ ತನ್ನದೇ ಆದ ಕಸದ ಡಂಪಿಂಗ್ ಯಾರ್ಡ್ ಇರುವಾಗ ಈ ರೀತಿ ನಗರ ಪಂಚಾಯತಿಯ ಮುಂಭಾಗದಲ್ಲಿ ಕಸವನ್ನು ಸುರಿದಿರುವುದು ಎಷ್ಟು ಸರಿ ಎಂದು ಕೇಳಿದರು. ಮೊದಲಿನಿಂದಲೇ ನಾವುಗಳು ಅಧಿಕಾರಿಗಳಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿರುತ್ತೇವೆ ಆದರೆ ಅಧಿಕಾರಿಗಳು ಇದಕ್ಕೆ ಸ್ಪಂದನೆ ಕೊಡುವುದಿಲ್ಲ ಎಂದು ಆರೋಪಿಸಿದರು. ಕೂಡಲೇ ಕಸವನ್ನು ಇಲ್ಲಿಂದ ಸ್ಥಳಾಂತರಿಸದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ನ.ಪಂ ಮುಖ್ಯ ಅಧಿಕಾರಿ ಮತ್ತಡಿ ಅವರ ಕಚೇರಿಗೆ ತೆರಳಿ ಕಸವನ್ನು ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಉತ್ತರಿಸಿದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಕಸದ ವಿಷಯದಲ್ಲಿ ಹಲವಾರು ರೀತಿಯ ಸಭೆಗಳು ನಡೆದಿದೆ ಕಳೆದ ಏಪ್ರಿಲ್ ತಿಂಗಳಲ್ಲಿ ಈ ಕೆಲಸ ಮುಗಿಯಬೇಕಾಗಿತ್ತು. ಕಾರಣಾಂತರದಿಂದ ತಡೆಯಾಗಿದೆ ನಂತರದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೆ ಅಡ್ಡಿಯಾದ ಕಾರಣದಿಂದ ಮುಂದುವರಿಸಲು ಸಾಧ್ಯವಾಗಲಿಲ್ಲ ,ಆದಷ್ಟು ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತೇವೆ ಅದಕ್ಕೆ ತಮ್ಮೆಲ್ಲರ ಸಹಕಾರ ಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಶಹಿದ್ ಪಾರೆ, ಬ್ಲಾಕ್ ಕಾಂಗ್ರೆಸ್ ನಾಯಕರಾದ ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಉಪಸ್ಥಿತರಿದ್ದರು.