ಮಹಶೀರ್ ಮತ್ಸ್ಯ ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್ ಸುಳ್ಯ ಮತ್ತು ಮೀನುಗಾರಿಕಾ ಇಲಾಖೆ ಮಂಗಳೂರು ಹಾಗು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಕಾರದಲ್ಲಿ ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗು ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಾಗಾರ ನ.27ರಂದು ಮಂಡೆಕೋಲು ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ನಡೆಯಲಿದೆ ಎಂದು ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ತಿಳಿಸಿದ್ದಾರೆ.ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಕಾರ್ಯಾಗಾರ ಉದ್ಘಾಟಿಸುವರು. ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ಅಧ್ಯಕ್ಷತೆ ವಹಿಸುವರು. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪುತ್ತೂರ ಮುತ್ತು ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಮಂಗಳೂರು ಮೀನುಗಾರಿಕಾ ವಿದ್ಯಾಲಯದ ಡೀನ್ ಡಾ.ಶಿವಕುಮಾರ್ ಮಗದ, ಮೀನುಗಾರಿಕಾ ಉಪನಿರ್ದೇಶಕರಾದ ಡಾ.ಸುಶ್ಮಿತಾ ರಾವ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಟಿ.ಜೆ. ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಂ.ವಿಶ್ವನಾಥ ರೆಡ್ಡಿ, ಗೌತಮ್ ಭಾಗವಹಿಸಲಿದ್ದಾರೆ. ಮೀನು ಸಾಕಣೆಯ ವಿಧಾನ, ಮೀನು ಮರಿಗಳ ಆಹಾರ ಮತ್ತಿತರ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು. ಮಹಶೀರ್ ಕಂಪೆನಿ ವತಿಯಿಂದ ಈಗಾಗಲೇ 60 ಸಾವಿರ ಮೀನು ಮರಿಗಳನ್ನು ವಿತರಿಸಲಾಗಿದೆ. ಇನ್ನೂ ಒಂದು ಲಕ್ಷ ಮೀನು ಮರಿಗಳ ಬೇಡಿಕೆ ಇದೆ. ಒಟ್ಟು 2 ಲಕ್ಷ ಮೀನು ಮರಿಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಮಹೇಶ್ ಕುಮಾರ್ ಮೇನಾಲ ತಿಳಿಸಿದ್ದಾರೆ. ಮೀನು ಸಾಕಣೆಗೆ ಮೂಲಭೂತ ಸೌಕರ್ಯ ಒದಗಿಸಲು ಸಹಾಯ ಧನ ನೀಡಲಾಗುತ್ತದೆ. ಕೆರೆಗಳ ನಿರ್ಮಾಣ, ಕೆರೆಗಳ ಹೂಳೆತ್ತುವಿಕೆ ಮತ್ತಿತರ ಕಾರ್ಯಗಳಿಗೆ ನೆರವು ನೀಡಲಾಗುವುದು. ಸಾಕುವ ಮೀನುಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸಲಾಗುವುದು. ರಾಜ್ಯದಲ್ಲಿ 62 ಮತ್ಸ್ಯ ರೈತ ಉತ್ಪಾದಕ ಸಂಸ್ಥೆಗಳು ಇದೆ. ಮುಂದೆ ಈ ಸಂಸ್ಥೆಗಳ ಫೆಡರೇಷನ್ ರಚಿಸಿ ಮೀನುಗಳ ರಫ್ತು ಮಾಡುವ ಯೋಜನೆ ಇದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಶೀರ್ ಮತ್ಸ್ಯ ರೈತ ಉತ್ಪಾದಕರ ಕಂಪೆನಿಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕ, ನವೀನ್ ಚಾತುಬಾಯಿ, ಪ್ರಶಾಂತ್ ಅಂಬೆಕಲ್ಲು, ವಿಜೇತ್ ಅಡ್ಯಡ್ಕ, ಕಾರ್ಯನಿರ್ವಹಣಾಧಿಕಾರಿ ಧನುಷ್ ಪೆರುಂಬಾರು ಉಪಸ್ಥಿತರಿದ್ದರು.