ಸುಳ್ಯ ತಾಲೂಕು 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅರಂತೋಡು ನೆಹರೂ ಸ್ಮಾರಕ ಪ.ಪೂ ಕಾಲೇಜಿನಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕನ್ನಡ, ನಾಡು- ನುಡಿ ಉಳಿಸುವ ಕೆಲಸ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಆಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಕಾಲೇಜಿನ ಸಂಚಾಲಕ ಕೆ.ಆರ್.ಗಂಗಾಧರ ಮಾತನಾಡಿ, ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳು ಗೆದ್ದರೂ, ಸೋತರು ಅದನ್ನು ಸವಾಲಾಗಿ ಸ್ವೀಕರಿಸಿ ಬದುಕಿನ ಪಾಠವನ್ನು ಕಲಿಯಬೇಕಿದೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಕಾಲೇಜಿನ ಪ್ರಿನ್ಸಿಪಾಲ್ ರಮೇಶ, ಪ್ರೌಢ ಶಾಲಾ ಮುಖ್ಯಶಿಕ್ಷಕ ಸೀತಾರಾಮ ಎಂ.ಕೆ, ಕನ್ನಡ ಸಾಹಿತ್ಯ ಪರಿಷತ್ ಗೌರ ಕಾರ್ಯದರ್ಶಿ ತೇಜಸ್ವಿ ಕಡಪಳ, ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕಿ ಚಂದ್ರಮತಿ ಉಪಸ್ಥಿತರಿದ್ದರು. ಸ್ಪರ್ಧಾಸಮಿತಿ ಸಂಚಾಲಕ ಹನುಮಂತಪ್ಪ .ಜಿ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕೇಶವ ಸಿ.ಎ ಪ್ರಾಸ್ತಾವಿಕ ಮಾತನಾಡಿದರು. ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಾನಾ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
- Friday
- November 1st, 2024