ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಂಡಿರುವ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ನ.19 ರಂದು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸುಳ್ಯದಿಂದ 10 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಚಂದ್ರ ಕೋಲ್ಚಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಯನ್ನು ಆದಿಚುಂಚನಗಿರಿ ಮಠದ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ಹಾಗೂ ದ.ಕ. ಉಸ್ತುವಾರಿ ಸಚಿವ ಸುನಿಲ್ ಕುಮಾರ್,ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ತೆರಳಲು ಪ್ರತಿ ಗ್ರಾಮ ಮಟ್ಟದಿಂದ ವಾಹನ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಳ್ಯದಿಂದ ಸುಮಾರು 10 ಸಾವಿರ ಜನ ಬರುವ ನಿರೀಕ್ಷೆ ಇದೆ ಎಂದರು. ಮಂಗಳೂರಿನಲ್ಲಿ ಒಟ್ಟು 50 ಸಾವಿರ ಜನ ಸೇರುವ ನಿರೀಕ್ಷೆ ಹೊಂದಿದ್ದು, ಶಾಸಕ ವೇದವ್ಯಾಸ್ ಕಾಮತ್ ಮುತುವರ್ಜಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಒಟ್ಟು ರೂ.40 ಲಕ್ಷ ವೆಚ್ಚದಲ್ಲಿ ಕಂಚಿನ ಪ್ರತಿಮೆ ನಿರ್ಮಾಣವಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 10 ಲಕ್ಷ, ಮಂಗಳೂರು ಮಹಾನಗರ ಪಾಲಿಕೆ 30 ಲಕ್ಷ ಅನುದಾನ ಒದಗಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಮಡಪ್ಪಾಡಿ, ಪಿ.ಎಸ್.ಗಂಗಾಧರ, ದಾಮೋದರ ನಾರ್ಕೊಡು, ರಾಕೇಶ್ ಕುಂಟಿಕಾನ, ರಜತ್ ಅಡ್ಕಾರ್, ಬೆಳ್ಯಪ್ಪ ಬಳ್ಳಡ್ಕ, ಪುರುಷೋತ್ತಮ ಜಿ. ಉಪಸ್ಥಿತರಿದ್ದರು.