ಭಾರತ ಲಾಕ್ ಡೌನ್ ಗೊಂಡ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ಜನಸಾಮಾನ್ಯರು ವಿವಿಧ ಸಮಸ್ಯೆಗಳನ್ನು ಎದುರಿಸಿ ಯಥಾಸ್ಥಿತಿಗೆ ಬರಲು ಹರಸಾಹಸ ಪಡುತ್ತಿದ್ದಾರೆ. ಪ್ರಥಮ ಹಂತದ ಲಾಕ್ಡೌನ್ ನಿಂದ ಹಿಡಿದು ನಾಲ್ಕನೆಯ ಹಂತದವರೆಗೆ ಬಂದು ಜೀವನೋಪಾಯದ ಸಾಮಾನ್ಯ ಮಾರ್ಗವನ್ನು ಕಂಡುಕೊಳ್ಳಲು ತೊಡಗಿಕೊಂಡಿದ್ದಾನೆ.ಆದರೆ ಕೇರಳ ಹಾಗೂ ಕರ್ನಾಟಕದ ಗಡಿಭಾಗಗಳ ದ್ವಾರಗಳು ತೆರೆಯದೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಹಲವಾರು ಜನರು ,ವ್ಯಾಪಾರಸ್ಥರು, ಇಂದಿಗೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಸುಳ್ಯದ ಹಲವಾರು ಉದ್ಯಮ ಕ್ಷೇತ್ರಗಳು ಸ್ಥಳೀಯ ಜಿಲ್ಲೆಯಾದ ಕಾಸರಗೋಡು ,ಕಣ್ಣೂರು ಮುಂತಾದ ಕಡೆಗಳಿಂದ ತಮ್ಮ ತಮ್ಮ ವ್ಯಾಪಾರವನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಅಂತರ್ ರಾಜ್ಯಗಡಿ ಭಾಗಗಳಲ್ಲಿ ಸಂಚಾರಕ್ಕೆ ವ್ಯಾಪಾರ ವಹಿವಾಟುಗಳಿಗೆ ಮುಕ್ತವಾಗಿದ್ದರೂ , ನಮ್ಮ ಜಿಲ್ಲೆಗೆ ಕೇರಳದ ಸಂಪರ್ಕ ಅತಿ ಮುಖ್ಯವಾಗಿದೆ. ಕೇವಲ ಉದ್ಯಮ ಕ್ಷೇತ್ರಕ್ಕೆ ಮಾತ್ರವಲ್ಲದೆ ಹಲವಾರು ಕುಟುಂಬಗಳ ಬಾಂಧವ್ಯಗಳು ನೆರೆ ರಾಜ್ಯವಾದ ಕೇರಳದ ಸ್ಥಳೀಯ ಜಿಲ್ಲೆಗಳಲ್ಲಿ ಸಂಪರ್ಕವನ್ನು ಹೊಂದಿದೆ. ವೈದ್ಯಕೀಯ ಚಿಕಿತ್ಸೆಗಳಿಗೆ ಜಿಲ್ಲೆಗಳು ಬಹುಮುಖ್ಯವಾಗಿ ಪರಸ್ಪರ ಅವಲಂಬಿಸಿಕೊಂಡಿದೆ.
ಪ್ರಾರಂಭದಿಂದಲೇ ಗಡಿಪ್ರದೇಶಗಳ ವಿಷಯದಲ್ಲಿ ಭಾರಿ ಸದ್ದು ಮಾಡಿಕೊಂಡು ಬಂದಿದ್ದು ಹಲವಾರು ರಾಜಕೀಯ ನೇತಾರರ ಅಧಿಕಾರಿ ವರ್ಗದವರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು,ಸಮಾಜದ ಆರೋಗ್ಯದ ದೃಷ್ಟಿಯಿಂದ ಗಡಿಪ್ರದೇಶಗಳ ಬಂದ್ ಪ್ರಸ್ತುತ ಹಿನ್ನೆಲೆಯಲ್ಲಿ ಅತ್ಯವಶ್ಯಕ ಮತ್ತು ಫಲಪ್ರದವಾಗಿದ್ದರೂ ವ್ಯಾಪಾರ, ಉದ್ದಿಮೆ, ಬಾಂಧವ್ಯದ, ದೃಷ್ಟಿಯಲ್ಲಿ ಅಷ್ಟೇ ತೊಂದರೆಯನ್ನು ಸ್ಥಳೀಯ ಎರಡು ರಾಜ್ಯಗಳ ಜನತೆ ಸಂಕಷ್ಟವನ್ನು ಅನುಭವಿಸುತ್ತಿರುವುದು ವಾಸ್ತವದ ವಿಷಯವಾಗಿದೆ. ಒಟ್ಟಿನಲ್ಲಿ
ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಆದಷ್ಟು ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಂಗಳೂರು ತಲಪಾಡಿ ಭಾಗದಿಂದ ಕೇವಲ ಒಂದು ಭಾಗದಿಂದ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರೂ ಸುಳ್ಯ ದಂತಹ ಪ್ರದೇಶಕ್ಕೆ ಸುತ್ತಿಬಳಸಿ ಕೇರಳ ಭಾಗಗಳ ವ್ಯವಹಾರ ಮಾಡುವುದು ಕಷ್ಟಸಾಧ್ಯ. ಸ್ಥಳೀಯ ಗಡಿಭಾಗದ ಪ್ರದೇಶಗಳ ಜನತೆಯ ಸಮಸ್ಯೆಗಳನ್ನು ಅರಿತು ಎರಡು ರಾಜ್ಯ ಸರಕಾರಗಳು ಅತಿ ಶೀಘ್ರದಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.
ವರದಿ : ಹಸೈನಾರ್ ಜಯನಗರ