ನಮ್ಮ ತುಳುನಾಡು ಅತ್ಯಂತ ಅಮೂಲ್ಯವಾದ ಶ್ರೀಮಂತ ಸಂಸ್ಕೃತಿಗಳ ಆಗರವಾಗಿದೆ. ವೈಶಿಷ್ಟ್ಯವಾದ ಸಂಸ್ಕೃತಿ – ಸಂಸ್ಕಾರವನ್ನು ಹೊಂದಿರುವ ನಮ್ಮ ತುಳುನಾಡಿನಲ್ಲಿ ಹಲವಾರು ಬಗೆಯ ಆಚಾರ – ವಿಚಾರಗಳು ಇವೆ. ಯಕ್ಷಗಾನಕ್ಕೂ ತುಳುನಾಡಿಗೂ ಅವಿನಾಭಾವ ಸಂಬಂಧ. ಯಕ್ಷಗಾನವು ಒಂದು ಸಾಂಪ್ರದಾಯಿಕ ರಂಗ ಮಂದಿರವಾಗಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೇರಳ ಗಡಿಭಾಗಕ್ಕೂ ವ್ಯಾಪಿಸಿದೆ. ಯಕ್ಷಗಾನದಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಎಂಬ ಎರಡು ರೂಪಗಳು ಇವೆ. ನಮ್ಮ ಈ ಸಂಸ್ಕೃತಿಗೆ ಸರಿ ಸುಮಾರು 11ರಿಂದ 16ನೇ ಶತಮಾನದ ಇತಿಹಾಸವಿದೆ. ಯಕ್ಷಗಾನವನ್ನು ಅರಿತು ಪೋಷಿಸಿದವರು ಹಲವಾರು ಸಂಶೋಧಕರು, ಮೇರು ನಟರಿದ್ದಾರೆ.
ಯಕ್ಷಗಾನದಲ್ಲಿ ನಟನೆಯ ವಿಚಾರ ಬಂದಾಗ ನೆನಪಾಗುವುದು ನಮ್ಮ ರೋಹಿತ್ ಎಸ್ ಮರ್ಧಾಳ. ಯಕ್ಷಗಾನ ಎಂದರೆ ಅದೇನೊ ಪ್ರೀತಿ, ಯಕ್ಷಗಾನವೆ ಉಸಿರು, ಅದೇನೊ ಆಸಕ್ತಿ… ಸಣ್ಣ ಪ್ರಾಯದಲ್ಲೆ ಯಕ್ಷಗಾನಕ್ಕೆ ಧುಮುಕಿದ ರೋಹಿತ್ ಅವರು ಯಕ್ಷಗಾನದ ಅಳ – ಅಗಲ ಅರಿತ ದೊಡ್ಡ ದೊಡ್ಡ ಮೇರು ನಟರಿಗಿಂತ ಕಡಿಮೆ ಏನಿಲ್ಲ. ನೃತ್ಯವು ಅಂತರಂಗದ ಅಭಿವ್ಯಕ್ತಿಗೆ ಇರುವಂತದ್ದು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಯಕ್ಷಗಾನದಲ್ಲಿರುವ ಮಾತು , ವೇಷಭೂಷಣ, ಹಾವ ಭಾವ, ಹಸ್ತಾಭಿನಯ ಎಲ್ಲವೂ ಅನುಭವವನ್ನು ತೋಡಿಕೊಳ್ಳುವ ಮಾಧ್ಯಮಗಳು. ತನ್ನ ನಟನೆಯ ಮೂಲಕ ತನ್ನದೆ ಆದ ಛಾಪು ಮೂಡಿಸಿದ್ದಾರೆ. ರೋಹಿತ್ ಅವರು ಹೆಚ್ಚಾಗಿ ಸ್ತ್ರೀ ವೇಷಧಾರಿ ಅದರಲ್ಲೂ ದೇವಿಯ ವೇಷ ಹೆಚ್ಚಾಗಿ ಹಾಕುತ್ತಾರೆ. ದೇವಿಯ ವೇಷ ಭೂಷಣಗಳನ್ನು ತೊಟ್ಟು ರಂಗಸ್ಥಳಕ್ಕೆ ಬಂದರೆ ಸಾಕ್ಷಾತ್ ಶ್ರೀ ದೇವಿ ಬಂದಹಾಗೆ ಭಾಸವಾಗುತ್ತದೆ.ಒಬ್ಬ ಸ್ತ್ರೀ ವೇಷಧಾರಿಗೆ ಇರಬೇಕಾದ ನೃತ್ಯ ಕೌಶಲ್ಯ, ಮಾತುಗಾರಿಕೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಸ್ತ್ರೀ ವೇಷಧಾರಿಯಾಗಿ ರಂಗಸ್ಥಳಕ್ಕೆ ಬಂದರೆ ಎಂತಹ ಕಲ್ಲು ಹೃದಯದವರು ನಾಚಿ ಕೊಂಡಾರು…!! ಸಂದರ್ಭಕ್ಕೆ ತಕ್ಕಂತೆ ಹಾವಭಾವ , ಮುಖದಲ್ಲಿ ಆಗುತ್ತಿರುವ ಬದಲಾವಣೆಗಳು, ಕಣ್ಣಿನ ನೋಟ, ಅಭಿನಯ , ಬಾಗುವ ಭಂಗಿ , ನಯವಾದ ಮಾತುಗಾರಿಕೆ ನೆರೆದ ಪ್ರೇಕ್ಷಕರನ್ನು ಮನಸೊರೆಗೊಳಿಸುತ್ತದೆ. ಯಕ್ಷಗಾನಕ್ಕೆ ರೋಹಿತ್ ಅವರು ಕೊಡುಗೆಯನ್ನು ನೀಡುತ್ತಿದ್ದು , ಯುವ ಸಮದಾಯಕ್ಕೆ ಸ್ಫೂರ್ತಿಯೂ ಹೌದು. ಇವರ ಕೊಡುಗೆ ಯಕ್ಷರಂಗಕ್ಕೆ ಇನ್ನೂಷ್ಟೂ ಮುಂದುವರಿಯಲಿ.
( ಬರಹ : ಭಾಸ್ಕರ ಜೋಗಿಬೆಟ್ಟು)
- Friday
- November 1st, 2024