ಭಜನೆಯಿಂದ ಸಂಸ್ಕಾರ ಬೆಳೆಯುವುದರ ಜೊತೆಗೆ ಧರ್ಮ ಉಳಿಯುತ್ತದೆ, ಭಜಕರ ಒಗ್ಗೂಡುವಿಕೆಯಿಂದ ಮನೆ,ಮನದಲ್ಲಿ ಧರ್ಮದ ಜಾಗೃತಿ ಮೂಡುತ್ತದೆ ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ದ.ಕ ಜಿಲ್ಲೆ-2ರ ಪ್ರವೀಣ್ ಕುಮಾರ್ ಹೇಳಿದರು.
ಅವರು ಸುಳ್ಯ ತಾಲೂಕು ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಜನೋತ್ಸವ ಸಮಿತಿ ವಳಲಂಬೆ ಹಾಗೂ ತಾಲೂಕಿನ ಭಜನಾ ಮಂಡಳಿಗಳ ಸಹಯೋಗದಲ್ಲಿ ಜೂ.26 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಸಭಾಭವನದಲ್ಲಿ ನಡೆದ ಭಜಕರ ಸಂಘಟನೆಗಾಗಿ “ಭಜನೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಭಜನಾ ಪರಿಷತ್ ಅಧ್ಯಕ್ಷ ಶಿವ ಪ್ರಸಾದ್ ಆಲೆಟ್ಟಿ ” ತಾಲೂಕು ಮಟ್ಟದಲ್ಲಿ ಭಜಕರ ಸಂಘಟನೆಗಾಗಿ ಪರಿಷತ್ ಮುಂಬರುವ ದಿನಗಳಲ್ಲಿ ವಲಯ ಮಟ್ಟದ ಭಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ” ಎಂದರು.
ಕಾರ್ಯಕ್ರಮವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಧ.ಗ್ರಾ.ಯೋಜನೆಯ ಹಾಸನ ಜಿಲ್ಲಾ ನಿರ್ದೇಶಕಿ ಶ್ರೀಮತಿ ಮಮತಾ ರಾವ್ ಧರ್ಮಸ್ಥಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ನಿರ್ದೇಶಕಿ ಶ್ರೀಮತಿ ಸರೋಜಿನಿ ಗಂಗಯ್ಯ ಗೌಡ ಮುಳುಗಾಡು, ಭಜನೋತ್ಸವ ಸಮಿತಿ ಅಧ್ಯಕ್ಷ ಕೇಶವ ಹೊಸೊಳಿಕೆ, ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ, ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ , ಕಾರ್ಯದರ್ಶಿ ಯತೀಶ್ ರೈ ದುಗಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಭಜನಾ ಮೆರವಣಿಗೆಗೆ ಶಂಖಪಾಲ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ. ಬೆಳ್ಯಪ್ಪ ಗೌಡರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ವಳಲಂಬೆ ಮುಖ್ಯ ರಸ್ತೆಯ ಮೂಲಕ ಮೆರವಣಿಗೆಯು ಭಜನಾ ನಾಮ ಸಂಕೀರ್ತನೆಯ ಮೂಲಕ ದೇವಳದವರೆಗೆ ಸಾಗಿ ಬಂತು.
ರಮೇಶ್ ಮೆಟ್ಟಿನಡ್ಕ ಪ್ರಾರ್ಥಿಸಿದರು. ಯತೀಶ್ ರೈ ದುಗಲಡ್ಕ ವಂದಿಸಿದರು. ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ವಿವಿಧ ಕಡೆಯಿಂದ ಆಗಮಿಸಿದ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಕುಣಿತ ಭಜನೆಯು ನಡೆಯಿತು. ಭಜನೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಉಪ ಸಮಿತಿ ಸಂಚಾಲಕರು, ವಲಯ ಮೇಲ್ವಿಚಾರಕರು , ಸೇವಾ ಪ್ರತಿನಿಧಿಗಳು ಮತ್ತು ಸಮಿತಿ ಸದಸ್ಯರು ಸಹಕರಿಸಿದರು.