ಮಂಥನ ವೇದಿಕೆ ಸುಳ್ಯ, ಸೇವಾಭಾರತಿ ಹೆಲ್ಪ್‌ಲೈನ್ ಟ್ರಸ್ಟ್ ವತಿಯಿಂದ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು, ಹೋರಾಟಗಾರರಿಗೆ ಗೌರವಾರ್ಪಣೆ ಹಾಗೂ “ಸಂಕೋಲೆ -ಸಂಗ್ರಾಮ-ಸ್ವಾತಂತ್ರ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ. 25ರಂದು ಸುಳ್ಯದ ಶ್ರೀ ಕುರುಂಜಿ ಜಾನಕಿ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಪ್ರದ್ಯುಮ್ನ ಉಬರಡ್ಕ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುರ್ತು ಪರಿಸ್ಥಿತಿಯ ಸಂದರ್ಭ ಜನರ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇಲ್ಲದಾಗಿತ್ತು. ಜನ 20 ತಿಂಗಳ ಕಾಲ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ದೇಶದ ಗ್ರಾಮ ಗ್ರಾಮಗಳಲ್ಲಿಯೂ ಹೋರಾಟ ನಡೆದಿತ್ತು. ಇದನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಿಂಬಿಸಲಾಗಿತ್ತು. ಹಲವಾರು ಜನ ಹೋರಾಟ ನಡೆಸಿ ಪೋಲೀಸ್ ದೌರ್ಜನ್ಯ ಹಾಗೂ ಬಂಧನಕ್ಕೆ ಒಳಗಾಗಿದ್ದರು. ಈ ಹೋರಾಟದ ನೆನಪನ್ನು 47 ವರ್ಷಗಳ ಬಳಿಕ ಜನರಿಗೆ ನೆನಪಿಸುವ ಉದ್ದೇಶದಿಂದ ಈ ಪುಟಗಳ ಈ ಪುಸ್ತಕವನ್ನು ಹೊರತರುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎಸ್.ಅಂಗಾರ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಲೇಖಕರಾದ ನಿವೃತ್ತ ಅಧ್ಯಾಪಕ ಕುಂಞಟ್ಟಿ ಶಿವರಾಮ ಗೌಡ ಉಪಸ್ಥಿತರಿರಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಸುಳ್ಯ ತಾಲೂಕಿನಲ್ಲಿ ಹೋರಾಟ ಮಾಡಿದ ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ. ಭವ್ಯಶ್ರೀ ಮಂಡೆಕೋಲ ಅವರಿಂದ ದೇಶಭಕ್ತಿಗೀತೆ ಗಾಯನ ನಡೆಯಲಿದೆ. ಅಪರಾಹ್ನ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಕ್ರಾಂತಿಸೂರ್ಯ ಭಗತ್‌ಸಿಂಗ್ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.
ಲೇಖಕ ಕುಂಞಂಟ್ಟಿ ಶಿವರಾಮ ಗೌಡ ಮಾತನಾಡಿ ಪುಸ್ತಕದ ಕಿರು ಪರಿಚಯ ನೀಡಿದರು. ಅಧ್ಯಾಪಕ ವೃತ್ತಿ ಮಾಡುತ್ತಿದ್ದ ಸಂದರ್ಭದಲ್ಲಿನ ಸ್ವತಃ ಅನುಭವ ಹಾಗೂ ತಾಲೂಕಿನ ನೂರಾರು ಜನರನ್ನು ಸಂದರ್ಶಿಸಿ ಒಟ್ಟು 245 ಪುಟಗಳ ಪುಸ್ತಕ ರಚನೆ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಹ ಸಂಚಾಲಕ ರಾಜೇಶ್ ಮೇನಾಲ, ಸಂಘಟನಾ ಸಮಿತಿಯ ಅವಿನಾಶ್ ಡಿ.ಕೆ. ಉಪಸ್ಥಿತರಿದ್ದರು.