ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸ್ವಸಹಾಯ ಸಂಘಗಳು ರಹದಾರಿಯಾಗಿದೆ.ಗುಣ ಮಟ್ಟದ ಆರ್ಥಿಕ ಸೃಷ್ಠಿಯ ಮೂಲಕ ಬದುಕು ಕಟ್ಟಿಕೊಳ್ಳಲು ಸ್ವ-ಉದ್ಯೋಗವು ಅಡಿಗಲ್ಲಾಗಿದೆ.ಆರ್ಥಿಕ ಚಟುವಟಿಕೆಗಳನ್ನು ಮಹಿಳೆಯರು ಹಮ್ಮಿಕೊಳ್ಳವುದರ ಮೂಲಕ ಜೀವನದಲ್ಲಿ ಸದೃಢರಾಗಲು ಸ್ವಸಹಾಯ ಸಂಘಗಳು ಬುನಾದಿಯನ್ನು ಒದಗಿಸುತ್ತದೆ.ಗ್ರಾಮ ಪಂಚಾಯತ್ನ ಸಂಜೀವಿನಿ ಸ್ವಸಾಯ ಸಂಘದ ೨೨ ಮಂದಿ ಸದಸ್ಯೆಯರು ಆಹಾರ ಪದಾರ್ಥಗಳನ್ನು ತಯಾರಿಸುವ ತರಬೇತಿ ಪಡೆದು ಆಹಾರ ತಯಾರಿಸಿ ಅವುಗಳನ್ನು ಮಾರಾಟ ಮಾಡಿ ತಮ್ಮ ಕಾಲಲ್ಲಿ ತಾವು ನಿಂತು ಸ್ವಾವಲಂಬಿಗಳಾಗುವತ್ತ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.ಸಂಜೀವಿನಿ ಸ್ವಸಹಾಯ ಸಂಘವು ಈ ರೀತಿಯ ವಿಭಿನ್ನ ಕಾರ್ಯ ವೈಖರಿ ಮೂಲಕ ಮಾದರಿಯಾಗಿದೆ ಎಂದು ಸುಬ್ರಹ್ಮಣ್ಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಹೇಳಿದರು.
ಗ್ರಾ.ಪಂ.ಸುಬ್ರಹ್ಮಣ್ಯ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿ.ಪಂ. ಮಂಗಳೂರು, ತಾ.ಪಂ.ಕಡಬ, ಮತ್ತು ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಓಂ ಶ್ರೀ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆಯರು ತರಬೇತು ಪಡೆದು ತಯಾರಿಸಿದ ಆಹಾರ ಪದಾರ್ಥಗಳನ್ನು ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಂಘದ ಸದಸ್ಯೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತವಾದ ಮಾರುಕಟ್ಟೆ ಒದಗಿಸಲು ಸರ್ವರ ಸಹಕಾರ ಅತ್ಯಗತ್ಯ.ಕಷ್ಟ ಪರಿಶ್ರಮದ ಮೂಲಕ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳು ದೇಶಾದ್ಯಂತ ಹೆಸರುವಾಸಿಯಾದರೆ ಅದು ನಮಗೆ ಹೆಮ್ಮೆ ಎಂದರು.
ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಸಂಪನ್ಮೂಲ ವ್ಯಕ್ತಿ ತೆಲಂಗಾಣದ ಮಿಲ್ಲೆಟ್ ಮ್ಯಾನ್ ವೀರೇಶ್ ಶೆಟ್ಟಿ ಪಾಟೀಲ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮುಖ್ಯ ಅತಿಥಿಗಳಾಗಿದ್ದರು. ಗ್ರಾ.ಪಂ.ಸದಸ್ಯರು, ಓಂ ಶ್ರೀ ಸಂಜೀವಿನಿ ಸ್ವಸಹಾಯ ಸಂಘದ ಉಪಾಧ್ಯಕ್ಷೆ ರಮಣಿ, ಕಾರ್ಯದರ್ಶಿ ಮೀನಾಕ್ಷಿ, ವೇದಿಕೆಯಲ್ಲಿದ್ದರು. ಸಂಘದ ಸದಸ್ಯೆ ರತ್ನಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ತೆಲಂಗಾಣದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸಿರಿಧಾನ್ಯಗಳಿಂದ ಆಹಾರ ತಯಾರಿಯ ಕುರಿತು ತರಬೇತಿಯನ್ನು ನೀಡಿದ ತೆಲಂಗಾಣದ ಮಿಲ್ಲೆಟ್ ಮ್ಯಾನ್ ವೀರೇಶ್ ಶೆಟ್ಟಿ ಪಾಟೀಲ್ ಮತ್ತು ಅವರ ಪತ್ನಿ ಪಾರ್ವತಿ ಪಾಟೀಲ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ತಯಾರಿಸಿದ ಆಹಾರ ಪದಾರ್ಥಗಳನ್ನು ಬಿಡುಗಡೆಗೊಳಿಸಲಾಯಿತು.ರಾಗಿ ರೊಟ್ಟಿ,ಜೋಳದ ರೊಟ್ಟಿ, ಲಾಡು, ಚಕ್ಕುಲಿ ಸೇರಿದಂತೆ ಅನೇಕ ಖಾದ್ಯಗಳನ್ನು ಮಹಿಳೆಯರು ತಯಾರಿಸಿದ್ದರು.