ನಮ್ಮ ಬದುಕು ರೂಪಿಸಲು ಈ ಸಮಾಜ ಅನೇಕ ಕೊಡುಗೆಗಳನ್ನು ನೀಡಿದೆ. ಈ ಸಮಾಜದ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೂ ಕಿಂಚಿತ್ತಾದರೂ ಋಣ ತೀರಿಸಬೇಕೆಂದು ಪ್ರಯತ್ನ ನಡೆಸುವ ಅನೇಕರು ನಮ್ಮ ಮುಂದೆ ಇದ್ದಾರೆ. ಅವರು ನಮಗೆ ಆದರ್ಶ ಪ್ರಾಯರು ಎಂದು ಎಂದು ಹಿಂದೂ ಸಂಘಟನೆಯ ಮುಂದಾಳು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಶುಕ್ರವಾರ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿದ ನಿವೃತ್ತಿ ವಾಯುಸೇನಾ ಯೋಧ ಹಾಗೂ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಡ್ಡಂತಡ್ಕ ದೇರಣ್ಣ ಗೌಡರ ಸಹಸ್ರಚಂದ್ರ ದರ್ಶನ ಕಾರ್ಯಕ್ರಮದಲ್ಲಿ ಮಂಗಳನಿಧಿ ಸಮರ್ಪಣೆ ನೆರವೇರಿಸಿ ಮಾತನಾಡಿದರು. ಹಿಂದೂ ಸಂಘಟನೆಗಳ ಹಿರಿಯ ನೇತಾರ ಕಲ್ಲಡ್ಕ ಪ್ರಭಾಕರ ಭಟ್, ಶ್ರೀಮತಿ ಕಮಲಾ ಪ್ರಭಾಕರ ಭಟ್, ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಣ್ಣು ಕಾಂತಪ್ಪ ಶೆಟ್ಟಿ, ಸುಳ್ಯ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು, ಬೆಂಗಳೂರಿನ ಸಂಘಟಕ ಅ.ಸಾ. ನಿರ್ಮಲ್ ಕುಮಾರ್ ಅಡ್ಪಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಡ್ಡಂತಡ್ಕ ದೇರಣ್ಣ ಗೌಡ ಹಾಗೂ ಶ್ರೀಮತಿ ಚಂದ್ರಲೇಖ ದೇರಣ್ಣ ಗೌಡ ಮಂಗಳನಿಧಿ ಸಮರ್ಪಿಸಿದರು. ಸುಭಾಶ್ಚಂದ್ರ ಕಳಂಜ ನಿರೂಪಿಸಿದರು.
ಇಂಡೋ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ವಾಯುಸೇನೆಯಲ್ಲಿ ಯುದ್ಧಭೂಮಿಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಪಮ ದೇಶಪ್ರೇಮಿ ಅಡ್ಡಂತಡ್ಕ ದೇರಣ್ಣ ಗೌಡರು ನಿವೃತ್ತಿಯ ಬಳಿಕ ಪಂಚಾಯತ್ ಸದಸ್ಯರಾಗಿ, ಎ.ಪಿ.ಎಂ ಸಿ. ಅಧ್ಯಕ್ಷರಾಗಿ, ಪಯಸ್ವಿನಿ ಪ್ರೌಢಶಾಲೆಯ ಸ್ಥಾಪಕ ಸದಸ್ಯರಾಗಿ, ಹಾಲಿ ಅಧ್ಯಕ್ಷರಾಗಿ ಅಡ್ಕಾರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಇವರ ಸಮಾಜಮುಖಿ ಆದರ್ಶಗಳನ್ನು ಗುರುತಿಸಿ ಸಹಸ್ರಾರು ಅಭಿಮಾನಿಗಳು ಆಗಮಿಸಿ ದೇರಣ್ಣಗೌಡ ದಂಪತಿಗಳಿಗೆ ಶುಭ ಹಾರೈಸಿದರು.
ಅವರ ಪುತ್ರರಾದ ಶ್ಯಾಮ್ ಪ್ರಸಾದ್, ಡಾ.ಮನೋಜ್ ಕುಮಾರ್, ಸೊಸೆಯಂದಿರಾದ ಡಾ. ಸೌಮ್ಯ, ಡಾ. ರಜನಿ ಎ.ಜೆ. ಹಾಗೂ ಮನೆಯವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.