ಎಪಿಎಂಸಿ ಅಧ್ಯಕ್ಷರಾಗಿ ಐದು ವರ್ಷಗಳ ಸಾಧನೆ ತೃಪ್ತಿ ತಂದಿದೆ. ಸರಕಾರ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಹೇಳಿದರು.
ಎಪಿಎಂಸಿ ಅಧಿಕಾರ ಅವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 8 ರಂದು ಎಪಿಎಂಸಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಐದು ವರ್ಷದಲ್ಲಿ ಮಾಡಿದಂತ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯದ ಕೃಷಿ ಉತ್ಪನ್ನ ಸಮಿತಿಯು 2018-19 ರ ಸಾಲಿನಲ್ಲಿ ಅತಿ ಹೆಚ್ಚು ಮಾರುಕಟ್ಟೆ ಶುಲ್ಕ ರೂ. 3.80 ಕೋಟಿ ಸಂಗ್ರಹಿಸಿದ್ದು ಸರಕಾರ ನಿಗದಿಪಡಿಸಿದ ಗುರಿಗಿಂತ ಸುಮಾರು ರೂ.50.00 ಲಕ್ಷ ಹೆಚ್ಚು ಸಂಗ್ರಹಿಸಲಾಗಿದೆ. 2020ರಲ್ಲಿ ಬಂದ ಎಪಿಎಂಸಿ ಕಾಯ್ದೆಯಡಿಯಲ್ಲಿ ಶುಲ್ಕ ವಸೂಲಾತಿ ನಿಯಂತ್ರಣ ಮಾಡಿ ರೈತರ ಬೆಳೆಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ರೈತರಿಗೆ ಪ್ರಯೋಜನವಾಗಿದೆ.
2018-19ನೇ ಸಾಲಿನಲ್ಲಿ 1.17 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಯಲ್ಲಿ ಮಾರುಕಟ್ಟೆ ಪ್ರಾಂಗಣ ಅಭಿವೃದ್ಧಿ ಮತ್ತು ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿರುತ್ತದೆ. ಅಲ್ಲದೆ ಎಪಿಎಂಸಿ ಹೊರಾಂಗಣ ಭದ್ರವಾದ ಆವರಣ ಗೋಡೆ, ಆಡಳಿತ ಕಛೇರಿ ಹಾಗೂ ಮೀಟಿಂಗ್ ಹಾಲ್ ನ ನವೀಕರಣ ಮಾಡಿ ಎ.ಸಿ ಅಳವಡಿಸಲಾಗಿದೆ.ಗೋದಾಮು ಕಟ್ಟಡ ವನ್ನು ದುರಸ್ತಿ ಪಡಿಸಲಾಗಿದೆ, ಬಾವಿಯಿಂದ ನೀರು ಸರಬರಾಜು ಮಾಡಲು ತುಕ್ಕು ಹಿಡಿದ ಕಬ್ಬಿಣ ಪೈಪ್ ತೆಗೆದು ಹೊಸ ಪಿವಿಸಿ ಪೈಪ್ ಅಳವಡಿಸಲಾಗಿದೆ. ಕೊಡಗು ಸಂತ್ರಸ್ತರಿಗೆ 2 ಲಕ್ಷ ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ 25 ಲಕ್ಷ ಪರಿಹಾರ ನಿಧಿಯನ್ನು ಎಪಿಎಂಸಿ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ರೈತ ಕುಟುಂಬದಲ್ಲಿ ಅಪಘಾತದಲ್ಲಿ ಮೃತಪಟ್ಟ ಹಾಗೂ ಅಂಗವಿಕಲತೆಗೆ ರೈತ ಸಂಜೀವಿನಿ ಅಪಘಾತ ವಿಮಾ ಪರಿಹಾರ ಯೋಜನೆಯಡಿ 4 ಜನರಿಗೆ ಪರಿಹಾರ ನಿಧಿ ನೀಡಲಾಗಿದೆ. ರೈತರಿಗೆ ಅಡಮಾನ ಸಾಲ ಯೋಜನೆಯಡಿ 3 ತಿಂಗಳ ಅವಧಿಗೆ ಬಡ್ಡಿ ರಹಿತ ಹಾಗೂ 6 ತಿಂಗಳ ಅವಧಿಗೆ ಕನಿಷ್ಠ ಬಡ್ಡಿಯೊಂದಿಗೆ ಸಾಲ ಕೊಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅಡಿಕೆ ವ್ಯಾಪಾರಸ್ಥರಿಗೆ ಪ್ರಾಂಗಣದಲ್ಲಿ ವ್ಯವಹರಿಸಲು ತಾತ್ಕಾಲಿಕವಾಗಿ ಗೋದಾಮುಗಳ ವ್ಯವಸ್ಥೆ ಮಾಡಿಕೊಡಲಾಗಿದೆ. ರೈತರಿಗೆ ಬೇಕಾದ ತರಬೇತಿ, ಕೃಷಿ ತರಬೇತಿ, ತೋಟಗಾರಿಕೆ ವಿಚಾರವಾಗಿ ಹಲವು ತರಬೇತಿಗಳಿಗೆ ಉಚಿತವಾಗಿ ಎಪಿಎಂಸಿ ಸಂಬಂಗಣ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ನವಿನ್ ಸಾರಕೆರೆ, ಕಾರ್ಯದರ್ಶಿ ಎಸ್ ಎಸ್ ರೇವಣ್ಣ ಉಪಸ್ಥಿತರಿದ್ದರು.