ಕಡಬ ತಾಲೂಕಿನ ಹಲವು ಗ್ರಾಮಗಳು ಕಳೆದ 40-50 ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿರುವ ರೈತರ ಜಮೀನುಗಳನ್ನು ಅಕ್ರಮ-ಸಕ್ರಮದ ಅಡಿಯಲ್ಲಿ ಅರ್ಜಿ ಕೊಟ್ಟರೂ ಈವರೆಗೆ ಮಂಜೂರು ಆಗದೇ ಇರುವುದರಿಂದ ಅವರ ಜಮೀನುಗಳನ್ನು ಯಾವುದೇ ನಿಭಂದನೆ ಇಲ್ಲದೇ ಮಂಜೂರುಗೊಳಿಸಬೇಕು. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಿದ್ದರೂ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡದೇ ಇರುವುದರಿಂದ ಅರ್ಹರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು. ಕಡಬ ತಾಲೂಕಿನಲ್ಲಿ ಪ್ರಮುಖ ನದಿಗಳು ಮತ್ತು ಹಲವಾರು ಚಿಕ್ಕ ಚಿಕ್ಕ ನದಿಗಳು ಇದ್ದರೂ ಸಹ ಆ ಭಾಗದ ರೈತರಿಗೆ ಬೇಸಿಗೆ ಕಾಲದಲ್ಲಿ ಕೃಷಿಗೆ ನೀರಿನ ಅಭಾವ ಉಂಟಾಗಿ ಪ್ರತೀವರ್ಷ ರೈತರ ಕೃಷಿ ಭೂಮಿ ಒಣಗಿ ಹೋಗುತ್ತಿದ್ದು, ಸರಕಾರ ಕೃಷಿಕರಿಗೆ ಸಮಗ್ರ ಕೃಷಿ ನೀರಾವರಿ ವ್ಯವಸ್ಥೆಯನ್ನು ಮಾಡಬೇಕು. ಕಡಬ ಪಟ್ಟಣ ಪಂಚಾಯತ್ ಘೋಷಣೆ ಆಗುವ ಮೊದಲು ಅಕ್ರಮ-ಸಕ್ರಮಕ್ಕೆ ಅರ್ಜಿ ಕೊಟ್ಟ ರೈತರ ಹಾಗೂ ನಿವೇಶನಕ್ಕಾಗಿ 94ಸಿ ಅರ್ಜಿ ಕೊಟ್ಟವರ ಅರ್ಜಿಗಳನ್ನು ಮಾನ್ಯ ಮಾಡಿ ಅವರಿಗೆ ಹಕ್ಕು ಪತ್ರ ನೀಡಬೇಕು. ರೈತರು ಕಷ್ಟ ಪಟ್ಟು ಬೆಳೆದ ಫಸಲನ್ನು ಅತೀ ಹೆಚ್ಚು ಹಾನಿ ಮಾಡುತ್ತಿರುವ ಮಂಗಗಳಿಗೆ ಮಂಕಿ ಪಾರ್ಕ್ ನಿರ್ಮಿಸಿ ಕೃಷಿ ಹಾನಿ ತಪ್ಪಿಸಬೇಕು. ಹಕ್ಕು ಪತ್ರ ವಂಚಿತ ರೈತರಿಗೆ ಸರ್ಕಾರ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕು. ಮತ್ತು ಕಡಬ ತಾಲೂಕಿನ ಹಲವು ಗ್ರಾಮಗಳಲ್ಲಿ ಕರ್ನಾಟಕ ಅರಣ್ಯ ಅಬಿವೃದ್ಧಿ ನಿಗಮದ ಸಾವಿರಾರು ಹೆಕ್ಟೇರ್ ರಬ್ಬರ್ ತೋಟ ಹಾಗೂ ಕರ್ನಾಟಕ ಗೇರು ಅಬಿವೃದ್ಧಿ ನಿಗಮದ ಗೇರು ತೋಟವಿದ್ದು, ಇದರ ಪಹಣಿ ಪತ್ರದಲ್ಲಿ ಸುರಕ್ಷಿತ ಕಾಡು, ರಕ್ಷಿತಾರಣ್ಯ, ಭಾಗಶಃ ಅರಣ್ಯ ಎಂದು ನಮೂದಾಗಿಸಿದ್ದನ್ನು ತೆಗೆದು ಹಾಕಬೇಕು(ಇಲ್ಲಿ ಯಾವುದೇ ಕಾಡುಗಳು ಇಲ್ಲ ಇಂತಹ ಪ್ರದೇಶದಲ್ಲಿ ಕೇವಲ ರಬ್ಬರ್ ಮರ ಹಾಗೂ ಗೇರು ತೋಟ ಇರುವುದರಿಂದ).
ಈ ಪ್ರಮುಖ 7 ಬೇಡಿಕೆಗಳ ಬಗ್ಗೆ ಅ.25 ನೇ ಸೋಮವಾರ ಬೆಳಿಗ್ಗೆ 10:30 ಕ್ಕೆ ಕಡಬ ತಾಲೂಕು ಕಛೇರಿ ಮುಂದೆ ಆ ಭಾಗದ ಹಲವು ಗ್ರಾಮಪಂಚಾಯತ್ ಅದ್ಯಕ್ಷ/ಉಪಾಧ್ಯಕ್ಷರ ಹಾಗೂ ಸದಸ್ಯರ ಮತ್ತು ಹಲವು ಸಂಘಟನೆಗಳ ಬೆಂಬಲದೊಂದಿಗೆ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಕಡಬ ಕಂದಾಯ ಇಲಾಖೆ ಮತ್ತು ಕಂದಾಯ ನಿರೀಕ್ಷಕರು ಅಕ್ರಮ ಸಕ್ರಮ, 94ಸಿ ಹಕ್ಕು ಪತ್ರ ಮಂಜೂರುಗೊಳಿಸಲು ಜಾಗದ ಬೆಲೆಯ 10% ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದು, ಕಡಬ ತಾಲೂಕು ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಹೇಳುತ್ತಿಲ್ಲ, ಜಿಲ್ಲಾಧಿಕಾರಿಗಳು ಕೇಳುವುದಾದರೆ ಸಾಕ್ಷಿ ಸಹಿತ ಲಂಚ ನೀಡಿದವರ ಹೆಸರನ್ನು ಹೇಳಬಲ್ಲೆ ಎಂದರು. ಇಂದು ದಾಖಲೆ ಪತ್ರ ಸರಿಯಾಗಿದ್ದವನ ಕಡತ ಮಂಜೂರಾಹಗುವುದಿಲ್ಲ ಅಂತ ಕಛೇರಿಗೆ ಮಧ್ಯವರ್ತಿಗಳನ್ನು ಬಿಟ್ಟು ನೇರವಾಗಿ ಬಂದರೆ ಕಛೇರಿಗೆ ಅಲೆದು ಅಲೆದು ಸಾಕಾಗುತ್ತದೆ. ಕೊನೆಗೆ ದಲ್ಲಾಳಿಗಳ ಮೂಲಕವೇ ಕೆಲಸ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ ವರ್ಗೀಸ್ ಮಾತನಾಡಿ ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಅಕ್ರಮ ಸಕ್ರಮದ ಅಡಿಯಲ್ಲಿ ಎಷ್ಟೋ ಬಡವರಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಇದೀಗ ರೈತರನ್ನು ಭಾಗಶಃ ಅರಣ್ಯದ ಹೆಸರಿನಲ್ಲಿ ಶೋಷಿಸಲಾಗುತ್ತಿದೆ. ಇಲ್ಲಿನ ಶಾಸಕರು ಇದೀಗ ಸಚಿವರಾಗಿದ್ದು, ಕೆಳಗಿನಿಂದ ಮೇಲಿನ ತನಕವೂ ಬಿಜೆಪಿ ಸರ್ಕಾರದ ಪ್ರತಿನಿಧಿಗಳು ಇದ್ದಾರೆ. ಸಚಿವರು ಮನಸ್ಸು ಮಾಡಿದರೆ ಕಂದಾಯ ಹಾಗೂ ಅರಣ್ಯ ಇಲಾಖೆಯವರನ್ನು ಸೇರಿಸಿಕೊಂಡು ಜಂಟಿ ಸರ್ವೇಗೆ ಅದೇಶ ನೀಡಬಹುದು ಎಂದು ಹೇಳಿದರು. ಕೂಡಲೇ ಕಡಬ ಪಟ್ಟಣ ಪಂಚಾಯತ್ ಆಗುವ ಮೊದಲು ಅರ್ಜಿ ನೀಡಿದವರಿಗಾದರೂ ಹಕ್ಕುಪತ್ರ ನೀಡಲಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾಧಾಕೃಷ್ಣ ಬಳ್ಳೇರಿ, ಮರ್ದಾಳ ಗ್ರಾಮಪಂಚಾಯತ್ ಅದ್ಯಕ್ಷ ಹರೀಶ್ ಕೊಡಂದೂರು ಮಾತನಾಡಿದರು.
ವೇದಿಕೆಯಲ್ಲಿ ಸುಬ್ರಹ್ಮಣ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ನಿರ್ದೇಶಕ ರವೀಂದ್ರ ಕುಮಾರ್ ರುದ್ರಪಾದ, ಕಡಬ ಸಿ.ಎ ಬ್ಯಾಂಕ್ ನಿರ್ದೇಶಕ ಸತೀಶ್ ನಾಯಕ್, ಭೂಮಿಕಾ, ಕಡಬ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್.ಪಿ.ಕೆ, ಐತ್ತೂರು ಗ್ರಾಮಪಂಚಾಯತ್ ಸದಸ್ಯ ಈರೇಶ್, ಮರ್ದಾಳ ಗ್ರಾಮಪಂಚಾಯತ್ ಸದಸ್ಯ ಗಂಗಾಧರ ರೈ, ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ರಾಮಕೃಷ್ಣ ಕಡಮ್ಮಾಜೆ, ವಾಸುದೇವ ನೇಲಡ್ಕ, ದುಗ್ಗಪ್ಪ ಮಾಸ್ಟರ್ ಅಂತಿಬೆಟ್ಟು, ಸತೀಶ್ಚಂದ್ರ ಶೆಟ್ಟಿ ಬಿರುಕ್ಕು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ