Ad Widget

ಅ.17 : ತಲಕಾವೇರಿಯಲ್ಲಿ ಮಧ್ಯಾಹ್ನ 1.11 ಕ್ಕೆ ತೀರ್ಥೋದ್ಭವ

. . . . .

ಮಡಿಕೇರಿ:-ನಾಡಿನ ಜೀವನದಿ ‘ಕಾವೇರಿ’ಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ 1.11 ಕ್ಕೆ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.
ಪವಿತ್ರ ತೀರ್ಥೋದ್ಭವಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಕಾವೇರಿ ತುಲಾಸಂಕ್ರಮಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೊರೋನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಪವಿತ್ರ ತೀರ್ಥೋದ್ಭವದ ವೀಕ್ಷಣೆಗೆ ತೆರಳುವ ಭಕ್ತರಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತಾದರೂ, ಭಕ್ತಾದಿಗಳ ಒತ್ತಡಕ್ಕೆ ಮಣಿದ ಸರಕಾರ ಬಳಿಕ ಷರತ್ತುಗಳನ್ನು ಸಡಿಲಗೊಳಿಸಿ ಮುಕ್ತ ಅವಕಾಸ ಕಲ್ಪಿಸಿದೆ.ಆದರೆ ಪ್ರತಿಯೊಬ್ಬರೂ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ತೀರ್ಥಸ್ನಾನಕ್ಕೆ ಅವಕಾಶವಿಲ್ಲ:
ಭಕ್ತಾದಿಗಳು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮಾತ್ರ ತೀರ್ಥಸ್ನಾನ‌ ಮಾಡಲು ಅವಕಾಶ ನೀಡಲಾಗಿದ್ದು, ತಲಕಾವೇರಿಯ ಕೊಳದಲ್ಲಿ ಸ್ನಾನಕ್ಕೆ ಅವಕಾಶವಿರುವುದಿಲ್ಲ. ಆದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸ್ವಯಂಸೇವಕರ ಮೂಲಕ ತೀರ್ಥ ವಿತರಣೆಗೆ ಕ್ರಮವಹಿಸಲಾಗಿದೆ.
ಈ‌ ಹಗಲು ವೇಳೆ ತೀರ್ಥೋದ್ಭವವಾಗಲಿರುವುದರಿಂದ ಹಾಗೂ ದಸರಾ ಸೇರಿದಂತೆ ಸಾಲುಸಾಲು ರಜೆಗಳು ಒಟ್ಟಾಗಿ ಬಂದಿರುವಿದರಿಂದ ತೀರ್ಥೋದ್ಭವದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಕಾಟಕೇರಿ ಬಳಿ ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಾಗಮಂಡಲದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಜನದಟ್ಟಣೆ ನಿಯಂತ್ರಿಸುವುದು ಮತ್ತು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮವಹಿಸಲಿದೆ. ಅಗತ್ಯ ಹೋಂಗಾಡ್೯ಗಳ ನಿಯೋಜನೆ ಜೊತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ತಲಕಾವೇರಿ ಪ್ರದೇಶದಲ್ಲಿ 150 ವಾಹನಗಳ ನಿಲುಗಡೆಗೆ ಮಾತ್ರ ಅವಕಾಶವಿದ್ದು, ಭಕ್ತರು ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮನವಿ ಮಾಡಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಗ್ರಾ.ಪಂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ,‌ಆರೋಗ್ಯ ಇಲಾಖೆಯು ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ.
ತಲಕಾವೇರಿಯಲ್ಲಿ ಸಂಜೆ 6 ಗಂಟೆಯ ನಂತರ ಪೂಜಾ ಕಾರ್ಯಗಳು ಇರುವುದಿಲ್ಲವೆಂದು ಆಡಳಿತ ಮಂಡಳಿ ತಿಳಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!