Ad Widget

ಬಿಜೆಪಿ ರೈತ ಮೋರ್ಚಾ ಪ್ರಯತ್ನದ ಫಲವಾಗಿ ಎಲ್ಲಾ ರೈತರಿಗೆ ಮತ್ತೆ ಶೂನ್ಯ ಬಡ್ಡಿ ದರ ಸಾಲ ಸಿಗುವಂತಾಗಿದೆ – ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು

ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರಿಗೆ ನೀಡಲಾಗುವ ರೈತರಿಗೆ ಶೂನ್ಯ ಬಡ್ಡಿದರ ಸಾಲದ ಮೇಲೆ ಸರಕಾರ ಜಾರಿಗೆ ತಂದ ಷರತ್ತನ್ನು ಸರಕಾರ ಸಡಿಲಿಕೆ ಮಾಡಿದೆ ಇದರಿಂದ ರೈತರಿಗೆ ಅನುಕೂಲವಾಗಿದೆ. ಷರತ್ತನ್ನು ಸಡಿಸಲು ದ.ಕ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಮಿತಿ,ರಾಜ್ಯ ರೈತ ಮೋರ್ಚಾ ಸಮಿತಿ, ಕರಾವಳಿ ಭಾಗದ ಸಚಿವರು ಹಾಗೂ ಶಾಸಕರು ನಡೆಸಿದ ಪ್ರಯತ್ನ‌ ಫಲ ನೀಡಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಮಿತಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುವ ಅಲ್ಪಾವಧಿ ಬೆಳೆ ಸಾಲ, ದೀರ್ಘಾವಧಿ ಮತ್ತು ಮಧ್ಯಮಾವಧಿ ಹಾಗು ಕೃಷಿ ಸಂಬಂಧಿಸಿದ ಬೆಳೆ ಸಾಲದಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 3 ಲಕ್ಷದವರಿಗೆ ಮಾತ್ರ ಬಡ್ಡಿ ರಿಯಾಯಿತಿ ನೀಡಲಾಗುವುದು. ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಮೊದಲ 3 ಲಕ್ಷದವರೆಗೆ ಸಾಲ ಬಡ್ಡಿ ರಿಯಾಯಿತಿ ಸಾಲ ಅನ್ವಯವಾಗುವುದು. ಉಳಿದ ಸದಸ್ಯರಿಗೆ ಸಹಾಯ ಧನ ಲಭ್ಯವಿರುವುದಿಲ್ಲ. ದೀರ್ಘಾವಧಿ‌ ಮತ್ತು ಮಧ್ಯಾಮಾವಧಿ ಕೃಷಿ ಹಾಗು ಕೃಷಿ ಸಂಬಂಧಿ ಸಾಲಗಳಿಗೆ ಕುಟುಂಬಕ್ಕೆ 10 ಲಕ್ಷ ಸಾಲ ಅಥವಾ 2004 ರಿಂದ ಈ ವರೆಗೆ 4 ಲಕ್ಷ ಬಡ್ಡಿ ರಿಯಾಯಿತಿ ಪಡೆದಿದ್ದರೆ ಅಂತಹಾ ರೈತರು ಶೇ.3 ಬಡ್ಡಿಯ ರಿಯಾಯಿತಿ ಪಡೆಯಲು ಅರ್ಹರಾಗುವುದಿಲ್ಲ ಎಂದು ಸರಕಾರ ಆದೇಶ ನೀಡಿತ್ತು. ರೈತ ಮೋರ್ಚಾದ ಪ್ರಯತ್ನದ ಫಲವಾಗಿ ಈ ಕಾನೂನನ್ನು ಸರಕಾರ ಈಗ ಪರಿಷ್ಕರಿಸಿದ್ದು ಇಡೀ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಒಂದು ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ರೂ 3ಲಕ್ಷ ಶೂನ್ಯ ಬಡ್ಡಿದರದ ಸಾಲ ನೀಡಬೇಕು ಎಂಬ ಕಾನೂನಿನ ಅಡಿಯಲ್ಲಿ ಸಾಲ ಪಡೆದ ಹಲವಾರು ಮಂದಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಆ ಕುಟುಂಬದ ಉಳಿದ ಸದಸ್ಯರು ಸಾಲ ಪಡೆದಿದ್ದರೆ ಅವರು ಶೇ.7 ರಂತೆ ಬಡ್ಡಿಯನ್ನು ಪಾವತಿಸಬೇಕು ಎಂಬ ಕಾನೂನನ್ನು ಹಿಂದಿನ ಮೈತ್ರಿ ಸರಕಾರ ಆದೇಶ ಮಾಡಿದ್ದು, ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರೈತ ಮೋರ್ಚಾ ಜಿಲ್ಲಾ ಸಮಿತಿಯು, ರಾಜ್ಯ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮತ್ತು ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಅವರ ಮೂಲಕ ಸರಕಾರದ ಗಮನಕ್ಕೆ ತರಲಾಯಿತು. ಅಲ್ಲದೆ ಸಚಿವರಾಗಿದ್ದ ಎಸ್.ಅಂಗಾರ, ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಹ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಗಮನಕ್ಕೆ ತರಲಾಗಿದ್ದು ಕಾನೂನನ್ನು ಪರಿಷ್ಕರಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಶೂನ್ಯ ಬಡ್ಡಿ ಸೌಲಭ್ಯ ದೊರೆಯುವಂತೆ ಮರು ಆದೇಶ ನೀಡಲಾಗಿದೆ. ಇದರಿಂದ ಎಲ್ಲಾ ರೈತರಿಗೂ ಸಾಲದ ಮೇಲಿನ ಷರತ್ತು ಸಡಿಲಿಕೆ ಪ್ರಯೋಜನವಾಗಲಿದೆ ಎಂದು ಹೇಳಿದರು. ಸರಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮಾಸಿಕ 20 ಸಾವಿರ ರೂ ವೇತನ, ಪಿಂಚಣಿ ಪಡೆಯುವ ಮತ್ತು ಕಳೆದ ಮೂರು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದರೂ ಅಂತಹ ರೈತರು ಶೂನ್ಯ ಬಡ್ಡಿಯ ಪ್ರಯೋಜನ ಪಡೆಯುವಂತಾಗಿದೆ. ಈಗಿನ ಮುಖ್ಯಮಂತ್ರಿ ಬಜವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡ ಕೂಡಲೇ ರೈತರ ಮಕ್ಕಳಿಗೆ ಸ್ಕಾಲರ್ ಶಿಫ್ ಯೋಜನೆಯನ್ನು ತಂದಿರುವುದು ಅಭಿನಂದನಾರ್ಹವಾಗಿದೆ. ಮುಂದೆ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದವರಿಗೂ ಸಾಲಮನ್ನಾ ಒದಗಿಸುವಂತೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದರು.

ಕಾನ, ಬಾಣೆ, ಕುಮ್ಕಿಯ ಹಕ್ಕು ಒದಗಿಸಲು ಪ್ರಯತ್ನ: ಎ.ವಿ.ತೀರ್ಥರಾಮ

ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿ, ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿದರ ಸಾಲದ ಮೇಲಿನ ಷರತ್ತು ಸಡಿಲಿಸುವಂತೆ ದ.ಕ.ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರು ರಾಜ್ಯ ಮಟ್ಟದ ನಾಯಕರುಗಳ ಮೂಲಕ ಸರಕಾರಕ್ಕೆ ಒತ್ತಾಯಿಸಿದ ಫಲವಾಗಿ ಇಂದು ಸಡಿಲಿಕೆಯಿಂದ ರೈತರಿಗೆ ಅನುಕೂಲವಾಗಿದೆ. ಮುಂದೆ ಪ್ರತಿ ಮನೆಯ ರೈತರ ಮಕ್ಕಳಿಗೂ ಸರಕಾರಿ ಉದ್ಯೋಗದಲ್ಲಿ ಅವಕಾಶ ದೊರೆಯುವಂತೆ, ಕಾನ, ಬಾಣೆ, ಕುಮ್ಕಿಯ ಹಕ್ಕನ್ನು ರೈತರಿಗೆ ಒದಗಿಸುವಂತೆಯೂ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ ರೈ ಮೇನಾಲ ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!