Ad Widget

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ -ಗ್ರಾಮೀಣರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆಗೆ ಕ್ರಮ


ಈ ಹಿಂದೆ ಲಸಿಕೆಗಳು ಅಧಿಕವಿರುವಾಗ ಜನತೆ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದರು.ಇದೀಗ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಪೂರೈಕೆ ಮಾಡುವುದು ಕಷ್ಟವಾಗಿದೆ. ಮುಂದಿನ ಒಂದು ವಾರದ ಒಳಗೆ ಅಧಿಕ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆ ವಿತರಣೆಯಾಗಲಿದೆ. ಈ ಮೂಲಕ ಸರ್ವರಿಗೂ ಲಸಿಕೆ ದೊರಕುವಂತೆ ಮಾಡಲು ಸರಕಾರ ಕಾರ್ಯಪ್ರವೃತ್ತವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರವು ಗ್ರಾಮೀಣ ಪ್ರದೇಶಗಳಿಂದ ಕೂಡಿರುವ ಕಾರಣ ಗ್ರಾಮೀಣರಿಗೆ ತಾಲೂಕು ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವುದು ಕಷ್ಟವಾಗುತ್ತದೆ.ಆದುದರಿಂದ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಬೇಕಾದ ಕ್ರಮ ಜರುಗಿಸಲಾಗುವುದು ಎಂದು ಕುಕ್ಕೆಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

. . . . . .


ಶೀಘ್ರ ಅಧಿಕ ಪ್ರಮಾಣದಲ್ಲಿ ಲಸಿಕೆ ಲಭ್ಯ:
ಇದೀಗ 45 ವರ್ಷ ಮೇಲ್ಪಟ್ಟವರಿಗೆ ಒಂದನೇ ಮತ್ತು ಎರಡನೇ ಹಂತದ ಲಸಿಕೆ ವಿತರಣೆಯಾಗುತ್ತಿದೆ.ಇದರೊಂದಿಗೆ ಪ್ರಂಟ್ ಲೈನ್ ಕಾರ್ಯಕರ್ತರಿಗೆ ತಾಲೂಕು ಕೇಂದ್ರದಲ್ಲಿ ಲಸಿಕೆ ವಿತರಣೆಯಾಗುತ್ತಿದೆ. ದ.ಕ ಜಿಲ್ಲೆಗೆ ೫೦ ಸಾವಿರದಿಂದ ೧ಲಕ್ಷ ದಷ್ಟು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ನೀಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರವೇ ಅಧಿಕ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅಧಿಕ ಪ್ರಮಾಣದಲ್ಲಿ ಲಸಿಕೆಗಳು ರಾಜ್ಯಕ್ಕೆ ಶೀಘ್ರವೇ ಬರಲಿದೆ.ಆ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಹಂತ ಹಂತವಾಗಿ ಲಸಿಕೆ ಪೂರೈಕೆಯಾಗಲಿದೆ. ಜೂನ್ ಅಂತ್ಯದ ಒಳಗೆ ಅಧಿಕ ಪ್ರಮಾಣದಲ್ಲಿ ಲಸಿಕೆಯು ಸಾರ್ವಜನಿಕರ ಉಪಯೋಗಕ್ಕೆ ದೊರಕಲಿದೆ. ಆದರೆ ಎರಡನೇ ಡೋಸ್ ಲಸಿಕೆ ಪಡೆಯುವವರಿಗೆ ನಿರಂತರವಾಗಿ ಅಡಚಣೆಯಿಲ್ಲದೆ ಲಸಿಕೆ ವಿತರಣೆಯಾಗುತ್ತಿದೆ ಎಂದು ಸಚಿವರು ನುಡಿದರು.


10 ಕಾನ್ಸನ್‌ಟ್ರೇಟರ್ ವಿತರಣೆ:
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದರಂತೆ ಆಂಬುಲೆನ್ಸ್ ಅನ್ನು ನೀಡಲಾಗಿದೆ. ಅದೇ ರೀತಿ ಸುಮಾರು 10 ಆಮ್ಲಜನಕ ಕಾನ್ಸನ್‌ಟ್ರೇಟರ್ ಅನ್ನು ವೈಯಕ್ತಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಿದ್ದೇನೆ.ಶೀಘ್ರವೇ ಸರಕಾರದಿಂದ ತಾಲೂಕು ಆಸ್ಪತ್ರೆಗೆ ಆಮ್ಲಜನಕ ಕಾನ್ಸನ್‌ಟ್ರೇಟರ್ ಬರಲಿದೆ.ಬಳಿಕ ಅದನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವೀಕ್ಷಿಸಿ, ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.ಅಲ್ಲದೆ ಡೆಂಗ್ಯೂ ಜ್ವರ ಬಾಧಿತ ಪ್ರದೇಶಗಳು ಮತ್ತು ಅದರ ನಿರ್ಮೂಲನೆ ಕೈಗೊಂಡ ಕ್ರಮದ ಬಗ್ಗೆ ವಿವರ ಪಡೆದುಕೊಂಡರು.ನಂತರ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಸ್ತೃತ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಹಸೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಶ್ರೀಕುಮಾರ್ ಬಿಲದ್ವಾರ, ವೆಂಕಟೇಶ್ ಎಚ್.ಎಲ್, ಶಿವರಾಮ ನೆಕ್ರಾಜೆ, ಭಾರತಿ ದಿನೇಶ್, ಶೋಭಾ ಗಿರಿಧರ್, ಕೋವಿಡ್-೧೯ ಕಾರ್ಯಪಡೆಯ ಹೇಮಂತ್‌ಕುಮಾರ್.ಎನ್, ಉಮ್ಮರ್ ಖಾನ್, ಹೇಮ ಕರುಣಾಕರ್, ಸುಮಾ, ಬಸವರಾಜ್, ಭಾಗ್ಯ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!