ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರಿಗೆ ಧೈರ್ಯ ತುಂಬುವ ಸಲುವಾಗಿ ಮೇ.13 ಹಾಗೂ ಮೇ.14 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಐದು ಕೊರೋನಾ ಬಾಧಿತರ ಮನೆಗಳಿಗೆ ಬೇಟಿ ನೀಡಿ ಕೊರೋನಾ ಬಾಧಿತರಿಗೆ ಹಾಗೂ ಕೊರೋನಾ ಬಾಧಿತರ ಮನೆಯವರಿಗೆ ಧೈರ್ಯ ತುಂಬುವ ಕೆಲಸ ಮಾಡುವುದರ ಜೊತೆಗೆ ಕ್ವಾರೆಂಟೈನ್ ನಲ್ಲಿರುವ ಮನೆಯವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು. ಕೊರೋನಾ ಸೋಂಕಿತರೊಬ್ಬರ ಮನೆಯಲ್ಲಿ ಕರು ಹಾಕಿದ ಹಸುವೊಂದು ಎದ್ದು ನಿಲ್ಲಲಾರದೆ ನರಕಯಾತನೆ ಅನುಭವಿಸುತ್ತಿತ್ತು. ಆ ಮನೆಯವರು ನೆರೆಮನೆಯವರ ಸಹಾಯದಿಂದ ಹಸುವನ್ನು ಹಗ್ಗದ ಸಹಾಯದಿಂದ ಎದ್ದು ನಿಲ್ಲಿಸಿದ್ದರು. ಆದರೆ ತದನಂತರ ಆ ಮನೆಯವರಿಗೆ ಆನಾರೋಗ್ಯದ ಅನುಭವವಾಗಿ ಕೊರೋನಾ ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದ್ದರಿಂದಾಗಿ ಮನೆಯವರು ಕ್ವಾರೆಂಟೈನ್ ಆಗುವ ಪರಿಸ್ಥಿತಿ ಬಂದಿತು. ಇವರ ನೆರವಿಗೆ ಬೇರೆಯವರು ಬರದಂತಾಯಿತು. ಸೀರೆ ಹಾಗೂ ಶೇಡ್ ನೆಟ್ ಸಹಾಯದಿಂದ ಕಟ್ಟಿದ ಹಸು ಹಾಗೆಯೇ ನರಕಯಾತನೆ ಅನುಭವಿಸುತ್ತಿತ್ತು. ಮೇ.13 ರಂದು ಮನೆಭೇಟಿ ಮಾಡಿದ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಸುವನ್ನು ಮೇಲೆತ್ತಿ ಚಿಕಿತ್ಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ ಹಾಗೂ ಸದಸ್ಯರುಗಳಾದ ಕುಶಾಲಪ್ಪ ಜಾಲುಮನೆ, ಜಯಪ್ರಕಾಶ್ ಕಲ್ಲೇರಿಕಟ್ಟ, ಅಶೋಕ ಮಿತ್ತೋಡಿ, ಲಕ್ಷ್ಮಣ ಐನೆಕಿದು, ಯಶವಂತ ಕಾಜಿಮಡ್ಕ, ಬಾಲಸುಬ್ರಹ್ಮಣ್ಯ ಹಸುವನ್ನು ಮೇಲೆತ್ತುವಲ್ಲಿ ಸಹಕರಿಸಿದರು. ಪುರುಷೋತ್ತಮ ಗಡಿಕಲ್ಲು ಹಸುವನ್ನು ಮೇಲೆತ್ತಲು ಅಗತ್ಯ ಸಾಮಾಗ್ರಿಗಳನ್ನು ಒದಗಿಸಿದರು. ಸುರೇಶ್ ಕಲ್ಮಕಾರು, ಗಣೇಶ್ ಭಟ್ ಪನ್ನೆ ಹಸುವಿನ ಔಷಧೋಪಚಾರಕ್ಕೆ ಸಹಕರಿಸಿದರು.
*✍ವರದಿ :- ಉಲ್ಲಾಸ್ ಕಜ್ಜೋಡಿ*