ಅಕ್ರಮ ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ವಿಚಾರಣೆಗಾಗಿ
ಕೊಲ್ಲಮೊಗ್ರು ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಸುಬ್ರಹ್ಮಣ್ಯದ ಅರಣ್ಯಾಧಿಕಾರಿಗಳು ಕರೆದೊಯ್ದು ಓರ್ವ ಯುವಕನಿಗೆ ತೀವ್ರ ಹಲ್ಲೆ ನಡೆಸಿದ್ದರೆಂಬ ಆರೋಪ ಕೇಳಿಬಂದಿದ್ದು, ಆ ಯುವಕ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಹಲ್ಲೆ ಆರೋಪವನ್ನು ಅರಣ್ಯಾಧಿಕಾರಿಗಳು ನಿರಾಕರಿಸಿದ್ದಾರೆ.
ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ
ಕೊಲ್ಲಮೊಗ್ರು ಗ್ರಾಮದ ಮೋಹನ ಕೊಳಗೆ ಎಂಬವರನ್ನು ಏ.27 ರಂದು ಅರಣ್ಯಾಧಿಕಾರಿಗಳು ಕೊಲ್ಲಮೊಗ್ರದಿಂದ ಬಂಧಿಸಿ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಅವರು ಹಲ್ಲೆ ನಡೆಸಿದ್ದರಿಂದ ಮೋಹನ್ ರವರ ಭುಜಕ್ಕೆ ಏಟಾಗಿದ್ದು ಕಾಲು ಊದಿಗೊಂಡು ನಡೆಯಲಾಗದ ಸ್ಥಿತಿಗೆ ತಲುಪಿದ್ದಾರೆ. ಹರಳು ಕಲ್ಲು ತೆಗೆಯಲು ಯಾರೆಲ್ಲ ಹೋಗಿದ್ದಾರೆ ಎಂದು ಒತ್ತಾಯ ಪೂರ್ವಕವಾಗಿ ಕೆಲವರ ಹೆಸರು ಹೇಳಿಸಿ, ಖಾಲಿ ಹಾಳೆಗೆ ಸಹಿ ಹಾಕಿಸಿರುವುದಾಗಿ ಮೋಹನ್ ಕೊಳಗೆ ಆರೋಪಿಸಿದ್ದಾರೆ.
ಈ ಆರೋಪದ ಬಗ್ಗೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿ, ನಾವು ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಿಯೇ ಬಂಧಿಸಿದ್ದೇವೆ. ಅವರ ಹೇಳಿಕೆ ಆಧರಿಸಿ ಮತ್ತೆ 12 ಜನರ ಮೇಲೆ ಕೇಸು ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ ” ಎಂದು ತಿಳಿಸಿದ್ದಾರೆ.