ಸೂರ್ಯನು ತನ್ನ ಹೊಂಗಿರಣಗಳನ್ನು ಚಾಚಿಕೊಂಡು ಪೂರ್ವ ದಿಕ್ಕಿನಲ್ಲಿ ಹುಟ್ಟಿ ಬರುತ್ತಿರುವುದನ್ನು ನೋಡುವುದೇ ಕಣ್ಣಿಗೆ ತಂಪು. ಹಕ್ಕಿಗಳ ಚಿಲಿಪಿಲಿ ನಾದವು ಕಿವಿಗೆ ಇಂಪು ನೀಡುತ್ತಿದೆ. ಪ್ರಕೃತಿಯು ರಮಣೀಯ ಸೌಂದರ್ಯ ರಾಶಿಯನ್ನು ಹೊದ್ದು ಮಲಗಿದೆ. ಈ ಪ್ರಕೃತಿ ಸೌಂದರ್ಯವನ್ನು ನೋಡಲು ನಮ್ಮ ಕಣ್ಣುಗಳು ಎಷ್ಟು ಪುಣ್ಯ ಮಾಡಿದ್ದವು ಎಂದೆನಿಸುತ್ತದೆ. ಈ ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ ನಮ್ಮ ಮನಸ್ಸಿನಲ್ಲಿರುವ ನೂರಾರು ನೋವುಗಳನ್ನು ಮರೆತು ಒಂದು ಕ್ಷಣ ಪ್ರಶಾಂತವಾಗಿ ಯೋಚಿಸಿದಾಗ ಈ ಭೂಮಿಯಲ್ಲಿ ಹುಟ್ಟಲು ನಾವು ಎಷ್ಟು ಪುಣ್ಯವಂತರು ಎಂದೆನಿಸುತ್ತಿದೆ. ಈ ಸುಂದರ ಪ್ರಕೃತಿಯ ಮಡಿಲಲ್ಲಿ ಕುಳಿತರೆ ಮನಸ್ಸಿಗೆ ಮುದ ನೀಡುತ್ತದೆ. ಯಾವುದೇ ಕಿರಿಕಿರಿಯಿಲ್ಲದೇ ಸಂತೋಷದಿಂದ ನಮ್ಮ ಮನಸ್ಸು ಕುಣಿದು-ಕುಪ್ಪಳಿಸುತ್ತದೆ. ಪೇಟೆ-ಪಟ್ಟಣಗಳಂತೆ ದಿನದ 24 ಗಂಟೆಯೂ ವಾಹನಗಳ ಗಿಜಿಗುಡುವ ಶಬ್ದವಿಲ್ಲ. ದಿನನಿತ್ಯ ಕಂಪ್ಯೂಟರ್-ಲ್ಯಾಪ್ ಟಾಪ್ ಗಳನ್ನೇ ನೋಡಿದ ಕಣ್ಣುಗಳು ಸುಂದರವಾದ ಪರಿಸರವನ್ನು ನೋಡಿ ಆನಂದಪಡುತ್ತವೆ. ದಿನನಿತ್ಯ ಹತ್ತಾರು ನೋವುಗಳನ್ನು ಅನುಭವಿಸಿದ ಹೃದಯಗಳು ಸ್ವಚ್ಛಂದವಾಗಿ ಹಾರಾಡುತ್ತವೆ. ದಿನವಿಡಿ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದವರಿಗೆ ಪ್ರಕೃತಿಯ ಮಡಿಲಲ್ಲಿ ಕುಳಿತಾಗ ಒಂದು ಕ್ಷಣ ನೆಮ್ಮದಿ ದೊರಕುತ್ತದೆ. ಕನಸುಗಳೆಲ್ಲಾ ರೆಕ್ಕೆ ಬಿಚ್ಚಿ ಕುಣಿದಾಡುತ್ತವೆ.
ಹಾಗೆಯೇ ನೋಡು ನೋಡುತ್ತಿದ್ದಂತೆ ಮದ್ಯಾಹ್ನ ಬಂದೇ ಬಿಟ್ಟಿತು. ಸೂರ್ಯನ ಕಿರಣಗಳು ಪ್ರಖರವಾಗತೊಡಗಿತು. ಈ ಸಮಯದಲ್ಲಿ ಒಂದು ಸ್ವಲ್ಪ ಹೊತ್ತು ನಿದ್ರೆ ಮಾಡಿ ಎದ್ದಾಗ ಸಂಜೆಯಾಗಿತ್ತು. ಸೂರ್ಯನು ಹಗಲಿಡೀ ನಮಗೆ ಬೆಳಕನ್ನು ಕೊಟ್ಟು ತಾನು ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಾನೆ. ಪಕ್ಷಿಗಳೆಲ್ಲಾ ತಮ್ಮ ಗೂಡುಗಳನ್ನು ಸೇರಿಕೊಳ್ಳುವ ತವಕದಲ್ಲಿ ಆದಷ್ಟು ವೇಗವಾಗಿ ಹಾರಾಡುತ್ತಿವೆ. ಆಗ ನಿಧಾನವಾಗಿ ದೂರದಿಂದ ಗುಡುಗಿನ ಶಬ್ದ ಕೇಳಿಸಿತು. ನೋಡು ನೋಡುತ್ತಿದ್ದಂತೆ ಗುಡುಗು-ಸಿಡಿಲುಗಳ ಆರ್ಭಟ. ಜೋರಾಗಿ ಮಳೆ ಸುರಿಯಲಾರಂಬಿಸಿತು. ಆ ತಂಪಾದ ಇಳಿ ಸಂಜೆಯ ಹೊತ್ತಿನಲ್ಲಿ ಮಳೆ ಸುರಿದಾಗ ಆಗುವ ಖುಷಿಯೇ ಬೇರೆ. ಈ ಮಳೆ ಬರುವ ಸಂದರ್ಭದಲ್ಲಿ ಒಂದು ಕಪ್ ಕಾಫಿ ಕುಡಿಯುತ್ತಾ ಮಳೆಯನ್ನು ನೋಡಲು ತುಂಬಾ ಚೆನ್ನಾಗಿರುತ್ತದೆ. ಹಾಗೆಯೇ ಹೊತ್ತು ಕಳೆದಂತೆ ರಾತ್ರಿಯಾಯಿತು. ಸೂರ್ಯನು ಸಂಪೂರ್ಣವಾಗಿ ಮುಳುಗಿ ಚಂದ್ರನು ಮೇಲೆದ್ದು ಬಂದನು. ಹಾಗೆಯೇ ನಮ್ಮ ಕಣ್ಣುಗಳು ತೂಕಡಿಸತೊಡಗಿದವು. ಒಂದು ಅರೆಕ್ಷಣದಲ್ಲಿ ನಿದ್ರೆ ಬಂದೇ ಬಿಟ್ಟಿತು. ಆ ನಿದ್ರೆಯಲ್ಲಿ ಸುಂದರವಾದ ಕನಸೊಂದು ಬಂದಿತು. ಆ ಕನಸು ಏನೆಂದು ನಿದ್ರೆಯಿಂದ ಎಚ್ಚರವಾದಾಗ ಮರೆತೇ ಹೋಗಿತ್ತು.
✍ಉಲ್ಲಾಸ್ ಕಜ್ಜೋಡಿ