ಒಂದು ಊರಿನಲ್ಲಿ ಇಬ್ಬರು ಗಂಡ-ಹೆಂಡತಿ ಇದ್ದರು. ಆ ಗಂಡ-ಹೆಂಡತಿಗೆ ಒಬ್ಬ ಮಗ ಇದ್ದ. ಅವರದು ತುಂಬಾ ಬಡ ಕುಟುಂಬ. ಬಡ ಕುಟುಂಬವಾದರೂ ಪ್ರೀತಿ-ಕಾಳಜಿಗೆ ಏನೂ ಕಡಿಮೆ ಇರಲಿಲ್ಲ. ಅವರ ಕುಟುಂಬ-ಪರಿವಾರದವರಿಗೆ ಈ ಹುಡುಗನೆಂದರೆ ಅಚ್ಚು-ಮೆಚ್ಚು. ಅಂದಹಾಗೆ ಈ ಹುಡುಗನ ಹೆಸರು ರಾಮು ಅಂತ. ರಾಮು ತುಂಬಾ ಬುದ್ದಿವಂತ ಹುಡುಗ. ಆತನಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು ಹಾಗೂ ಈ ಬಡತನವನ್ನು ಮೆಟ್ಟಿ ನಿಲ್ಲಬೇಕು ಎಂಬ ಛಲ ಇತ್ತು. ಹಾಗೂ ಅದಕ್ಕಾಗಿ ಆತ ಹಗಲು ರಾತ್ರಿ ಓದಿ ಎಲ್ಲಾ ಪರಿಕ್ಷೆಗಳಲ್ಲೂ ಒಳ್ಳೆಯ ಅಂಕಗಳನ್ನು ಗಳಿಸಿದ ಹಾಗೂ ಒಂದು ದಿನ ಈತನ ವಿದ್ಯಾಬ್ಯಾಸ ಪೂರ್ತಿಯಾಯಿತು. ಹಾಗೆಯೇ ಅದೃಷ್ಟ ಎಂಬಂತೆ ಒಂದು ದೊಡ್ಡ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಆದರೆ ಅದೇ ಸಮಯದಲ್ಲಿ ದುರಾದೃಷ್ಟ ಎಂಬಂತೆ ಆತನ ತಂದೆ-ತಾಯಿ ತೀರಿಕೊಂಡರು. ರಾಮು ತನ್ನ ತಂದೆ-ತಾಯಿಯರ ಅಂತ್ಯಸಂಸ್ಕಾರ ಮುಗಿಸಿ ತನನ್ನು ಪ್ರೀತಿಸುವ ತನ್ನ ಬಂಧು-ಬಳಗದವರನ್ನೆಲ್ಲಾ ತೊರೆದು ವಿದೇಶಕ್ಕೆ ಹೊರಟುಹೋದನು. ನಂತರ ಆತನು ಶ್ರೀಮಂತನಾಗುತ್ತಾ ಹೋದ. ಹಾಗೂ ಶ್ರೀಮಂತಿಕೆಯ ಜೊತೆಗೆ ಅಹಂಕಾರವೂ ಹೆಚ್ಚಿತು. ಈ ಅಹಂಕಾರದಿಂದಾಗಿ ತನ್ನ ಬಂಧು-ಬಳಗದವರ ಪ್ರೀತಿಯನ್ನು ಕಳೆದುಕೊಂಡನು. ಆದರೆ ರಾಮು ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಸಾಧನೆಯ ಹಾದಿಯಲ್ಲಿ ಮುನ್ನಡೆದನು. ಹಾಗೂ ಕೊನೆಗೆ ಒಂದು ದಿನ ತನ್ನ ಗುರಿಯನ್ನು ತಲುಪಿದನು. ಆದರೆ ಅವನು ತನ್ನ ಗುರಿಯನ್ನು ತಲುಪಿ ಹಿಂದಿರುಗಿ ನೋಡಿದಾಗ ಆತ ಒಬ್ಬಂಟಿಯಾಗಿದ್ದ. ಏಕೆಂದರೆ ಆತನು ತನ್ನ ಅಹಂಕಾರದಿಂದ ತನ್ನವರ ಪ್ರೀತಿಯನ್ನು ಕಳೆದುಕೊಂಡಿದ್ದನು. ಆದರೆ ನಂತರ ಯೋಚಿಸಿದಾಗ ಆತನಿಗೆ ತನ್ನ ತಪ್ಪಿನ ಅರಿವಾಯಿತು ಮತ್ತು ತನ್ನ ಒಂದೇ ಒಂದು ತಪ್ಪಿನಿಂದಾಗಿ ಜೀವನಪರ್ಯಂತ ಒಬ್ಬಂಟಿಯಾಗಿ ಬದುಕುವಂತಾಯಿತು.
“ಅದಕ್ಕೆ ಹೇಳುವುದು ನಾವು ಜೀವನದಲ್ಲಿ ಎಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಎಂಬುವುದು ಮುಖ್ಯವಲ್ಲ… ನಾವು ನಮ್ಮ ಗುರಿಯನ್ನು ತಲುಪಿದ ನಂತರ ನಮ್ಮ ಜೊತೆ ಯಾರೆಲ್ಲಾ ಇದ್ದಾರೆ ಎಂಬುವುದು ಮುಖ್ಯ… ಶ್ರೀಮಂತಿಕೆ ಎಂಬುವುದು ಹಣದಲ್ಲಿ ಮಾತ್ರವಲ್ಲ ಗುಣದಲ್ಲಿ ಸಹ ಇರಬೇಕು… ಶ್ರೀಮಂತಿಕೆಯ ಮದದಿಂದ ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರೆ ಖಂಡಿತವಾಗಿಯೂ ಮುಂದೊಂದು ದಿನ ನಾವು ಪಶ್ಚಾತ್ತಾಪ ಪಡುವ ದಿನ ಬಂದೇ ಬರುತ್ತದೆ. ಆದ್ದರಿಂದ ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಿಮ್ಮ ಪ್ರೀತಿಪಾತ್ರರನ್ನು ಎಂದಿಗೂ ಮರೆಯಬೇಡಿ. ನಿಮ್ಮ ಜೀವನದ ಸ್ವಲ್ಪ ಸಮಯವನ್ನು ಅವರಿಗಾಗಿ ಮೀಸಲಿಡಿ…..”
*✍ಉಲ್ಲಾಸ್ ಕಜ್ಜೋಡಿ*