ಫೇಸ್ ಬುಕ್ ನಕಲಿ ಖಾತೆ ತೆರೆದು ವಂಚಿಸುವ ಜಾಲವೊಂದು ಸಕ್ರೀಯವಾಗಿದ್ದು ಸುಳ್ಯದಲ್ಲಿ ಹಲವರ ಹೆಸರಿನಲ್ಲಿ ವಂಚನೆ ನಡೆಸಿದ ಘಟನೆ ವರದಿಯಾಗಿದೆ.
ಫೇಸ್ ಬುಕ್ ನಕಲಿ ಖಾತೆ ತೆರೆದು ಅವರದೇ ಫೋಟೋ ಡಿಪಿ ಹಾಕಿ, ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಎಕ್ಸೆಪ್ಟ್ ಮಾಡಿದವರಿಗೆ ಫೇಸ್‌ಬುಕ್ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಲು ಆರಂಭಿಸುತ್ತಾರೆ. ಬಳಿಕ ನಾನು ಸಂಕಷ್ಟದಲ್ಲಿದ್ದೇನೆ ನನಗೆ ತುರ್ತಾಗಿ ಹಣದ ನೆರವು ಅಗತ್ಯವಿದೆ. ಆದಷ್ಟೂ ಬೇಗ ಸಾಲದ ರೂಪದಲ್ಲಿ ಆನ್ ಲೈನ್ ಗೂಗಲ್ ಪೇ, ಪೋನ್ ಪೇ ಗೆ ಹಣ ಹಾಕಿ ಸಹಕರಿಸುವಂತೆ ಮತ್ತೆ ಪುನಃ ನಾನು ಹಣ ಹಿಂತಿರುಗಿ ನೀಡುತ್ತೇನೆ ಎಂದು ಮೆಸೇಜ್ ಹಾಕುತ್ತಾರೆ. ಇದೇ ತರಹದ ಮೆಸೇಜ್ ಗಳನ್ನು ಹತ್ತಾರು ಜನರಿಗೆ ಕಳುಹಿಸುತ್ತಾರೆ. ಇದನ್ನು ಕೆಲವರಾದರೂ ನಂಬಿ ಹಣ ಹಾಕಿ ಮೋಸ ಹೋದ ಘಟನೆ ಸುಳ್ಯದಲ್ಲಿ ನಡೆದಿದೆ. ಈ ಬಗ್ಗೆ ಯಾರು ಪೋಲೀಸ್ ದೂರು ನೀಡಿಲ್ಲ.
ಇತ್ತೀಚೆಗೆ ಸುಳ್ಯದ ಪತ್ರಕರ್ತರ ಹೆಸರಲ್ಲಿ, ಉಪನ್ಯಾಸಕರ ಹೆಸರಲ್ಲಿ ನಕಲಿ ಖಾತೆಯಿಂದ ಮೆಸೇಜ್ ಗಳು ಬಂದಿವೆ. ಹೀಗೆ ಉಪನ್ಯಾಸಕರ ಹೆಸರಲ್ಲಿ ಬಂದ ಮೆಸೇಜ್ ಗೆ ವಿದ್ಯಾರ್ಥಿಯೊಬ್ಬ 5000 ಹಣ ಕಳುಹಿಸಿ ವಂಚನೆಗೊಳಗಾದ ಘಟನೆ ನಡೆದಿದೆ.
ಜನರು ಇನ್ನಾದರೂ ಎಚ್ಚೆತ್ತು ಇಂತಹ ನಕಲಿ ಮೆಸೇಜ್ ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಯಾರದೇ ಹೆಸರಲ್ಲಿ ಸಂದೇಶ ಬಂದರೂ ಅವರನ್ನು ನೇರವಾಗಿ ಪೋನ್ ಮುಖಾಂತರ ಸಂಪರ್ಕಿಸಿ ವಿಚಾರಿಸುವುದು ಒಳಿತು.