ಎಲಿಮಲೆ : ಚಳ್ಳ ದೇವಿ ಸನ್ನಿಧಿಯಲ್ಲಿ ಶ್ರಮದಾನ – ಸ್ವಚ್ಚತಾ ಕಾರ್ಯದ ವೇಳೆ ದೈವ ದೇವರುಗಳ ಮೂರ್ತಿ ಹಾಗೂ ಪೂಜಾ ಸಾಮಾಗ್ರಿ ಪತ್ತೆ – ಕಳ್ಳರ ಪಾಲಾಗದೇ ಉಳಿದ ಪಂಚಲೋಹದ ವಿಗ್ರಹಗಳು
ದೇವಚಳ್ಳ ಗ್ರಾಮದ ಎಲಿಮಲೆ ಸಮೀಪದ ಚಳ್ಳ ಎಂಬಲ್ಲಿ ಇದ್ದ ದೇವಸ್ಥಾನ ಸುಮಾರು 45 ವರ್ಷಗಳ ಹಿಂದೆ ಶಿಥಿಲಗೊಂಡ ಬಳಿಕ ಪೂಜಾ ಕಾರ್ಯಕ್ರಮ ನಡೆಯದೇ ಪಾಳುಬಿದ್ದು ಹೋಗಿತ್ತು. ದೇವಸ್ಥಾನವಿದ್ದ ಬಗ್ಗೆ ವಿವಿಧ ಕಡೆ ಪ್ರಶ್ನೆ ಚಿಂತನೆ ವೇಳೆ ಮಾತನಾಡುತ್ತಿದ್ದರೇ ಹೊರತು ಯಾರು ಅದನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ಹೊರಟಿರಲಿಲ್ಲ. ಜೀರ್ಣೋದ್ಧಾರ ಆಗುವ ಸಮಯ ಬಂದಾಗ ತಾವೆಲ್ಲರೂ ಸೇರಿಕೊಳ್ಳಬೇಕೆಂದಷ್ಟೇ ಎಲ್ಲಾ ತಂತ್ರಿಗಳು ಹೇಳುತ್ತಿದ್ದರು. ಇದೀಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿ ಬಂದ ಹಿನ್ನೆಲೆಯಲ್ಲಿ ಪ್ರಮುಖರು ಸೇರಿ ಎ.20 ರಂದು ಊರವರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕ್ಷೇತ್ರ ಸಂಚಾಲನ ಸಮಿತಿ ಅಧ್ಯಕ್ಷ ಚಂದ್ರಶೇಖರ ತಳೂರು, ಜಾಗದ ಮಾಲಕ ಚಳ್ಳ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಕಾರ್ಯದರ್ಶಿ ಕೃಷ್ಣಯ್ಯ ಮೂಲೆತೋಟ, ಕೋಶಾಧಿಕಾರಿ ಕೆ.ಆರ್. ರಾಧಾಕೃಷ್ಣ ಮಾವಿನಕಟ್ಟೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಳ್ಳಿ, ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಗೌಡ ಬಾಳೆತೋಟ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಎಲ್ಲಾ ಭಕ್ತಾದಿಗಳು ದೇವಸ್ಥಾನ ಆಗಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದ್ದರು. ದೇವಸ್ಥಾನವಿದ್ದ ಜಾಗದಲ್ಲಿ ಎ.25 ರಂದು ಶ್ರಮದಾನ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು.
ಇಂದು ನಡೆದ ಶ್ರಮದಾನದಲ್ಲಿ ನೂರಾರು ಭಕ್ತಾಭಿಮಾನಿಗಳು ಆಗಮಿಸಿ ಶ್ರಮಸೇವೆ ನಡೆಸಿ ಆ ಪರಿಸರದಲ್ಲಿ ಬೆಳೆದಿದ್ದ ಕಾಡು ಕಡಿದು ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ದೇವಸ್ಥಾನವಿದ್ದ ಜಾಗದ ಕುರುಹು ಪತ್ತೆಯಾಗಿದೆ. ಅಲ್ಲಿ ಕುಸಿದು ಬಿದ್ದಿರುವ ಗೋಡೆ, ಹಂಚು, ದೈವ ದೇವರುಗಳ ಮೂರ್ತಿ, ಗಂಟೆ, ಜಾಗಟೆ, ಶಂಖ ಹಾಗೂ ಪೂಜಾ ಸಾಮಾಗ್ರಿ ಪತ್ತೆಯಾಗಿದೆ.
ದೇವಸ್ಥಾನದಿಂದಲೇ ಮೂರ್ತಿ ಕಳ್ಳತನ ಮಾಡುವ ಈ ಕಾಲದಲ್ಲಿ ಈ ಮೂರ್ತಿಗಳು ಹಾಗೇಯೇ ಬಿದ್ದಿದ್ದರೂ ಯಾರು ಮುಟ್ಟದಿರುವುದು ದೇವಿಯ
ಲೀಲೆಯೇ ಆಗಿರಬಹುದೆಂದು ಭಕ್ತರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.