ಕೊರೊನಾದಿಂದ ಇಡೀ ದೇಶವೇ ತತ್ತರಿಸಿದ್ದು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಾವಿನ ಸಂಖ್ಯೆ ಎಲ್ಲೆ ಮೀರಿದೆ. ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ಎಷ್ಟಿದ್ದಾರೆ. ಸುಳ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಥಳಿಯ ಆಡಳಿತಕ್ಕೆ ಅಧಿಕಾರಿಗಳು ಮಾಹಿತಿಯೇ ನೀಡಿಲ್ಲ. ಆರಿಸಿದ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದ ಅಽಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿರ್ಣಯ ಮಾಡಬೇಕು ಎಂದು ನ.ಪಂ. ಸದಸ್ಯ ವೆಂಕಪ್ಪ ಗೌಡ ಆಗ್ರಹಿಸಿದರು.
ನ.ಪಂ. ಸಭಾಂಗಣದಲ್ಲಿ ಅದ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಒತ್ತಾಯಿಸಿದರು. ವೈದ್ಯರು ಇತರ ಕಾಯಿಲೆಗಳ ಬಗ್ಗೆ ಪರೀಕ್ಷಿಸದೇ ಲಸಿಕೆ ನೀಡುತ್ತಿದ್ದು ಕೆಲವರಿಗೆ ಸಮಸ್ಯೆಯಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ವರದಿ ಬರುತ್ತಿದೆ. ಕೊರೊನಾ ನಿಯಮಗಳ ಹಾಗೂ ಸ್ಥಿತಿಗತಿಗಳ ಕುರಿತ ವರದಿ ಪಡೆಯಲು ಸಾಮಾನ್ಯ ಸಭೆಗೆ ಪೊಲೀಸ್, ಕಂದಾಯ ಹಾಗೂ ಆರೋಗ್ಯ ಅಧಿಕಾರಿಗಳು ಬರಬೇಕಿತ್ತು. ಆದರೆ ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಮಾತನಾಡಿ ಅಧಿಕಾರಿಗಳು ತುರ್ತು ಸಂದರ್ಭ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಜನರು ನಿಯಮ ಪಾಲನೆ ಹಾಗೂ ಅನುಮತಿಯನ್ನು ಪಡೆಯುವ, ಕೊರೊನಾ ಕುರಿತ ಎಲ್ಲಾ ಮಾಹಿತಿ ಹಾಗೂ ನಿಯಮಗಳ ಕುರಿತು ನ.ಪಂ. ಆಡಳಿತದ ಗಮನಕ್ಕೆ ತರಬೇಕು. ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರಾಗಿರುವ ಕ್ರಮ ಸರಿಯಲ್ಲ ಎಂದರು.
ಸರ್ಕಲ್ ಪೊಲೀಸ್ ಠಾಣೆಯ ಮುಂಭಾಗ ಸೇರಿದಂತೆ ಹಲವೆಡೆ ಚರಂಡಿ ಸ್ಲಾಬ್‌ಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಮಳೆ ಬಂದಾಗ ಕೊಳಚೆ ನೀರು ರಸ್ತೆಯಲ್ಲಿರುತ್ತದೆ ಅದನ್ನು ಶೀಘ್ರ ದುರಸ್ತಿ ಮಾಡಲೇ ಬೇಕು. ೭೦೦೦ ಮೊತ್ತ ಚರಂಡಿ ದುರಸ್ತಿ ಹಾಗೂ ಕಾಡು ತೆಗೆಯಲು ಸಾಕಾಗುವುದಿಲ್ಲ.ಅನುದಾನ ಜಾಸ್ತಿ ಮಾಡಬೇಕು ಎಂದು ಸದಸ್ಯ ಬಾಲಕೃಷ್ಣ ಭಟ್ ಆಗ್ರಹಿಸಿದರು. ಮುಖ್ಯಾಧಿಕಾರಿಯಾದವರು ೨೦ ವಾರ್ಡ್‌ಗಳಿಗೂ ಒಮ್ಮೆಯಾದರೂ ಭೇಟಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಕಳೆದ ಬಾರಿ ತೆರಿಗೆ ಸಂಗ್ರಹದ ಕುರಿತು ಸುದೀರ್ಘ ಚರ್ಚೆಯಾಗಿ ಗೊಂದಲವಿದ್ದು ತಜ್ಞರು ಆಸ್ತಿ ತೆರಿಗೆಯ ಪೂರ್ತಿ ವಿಶ್ಲೇಷಣೆ ಮಾಡದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ತಜ್ಞರನ್ನು ಕರೆಸಿಲ್ಲ ಎಂದು ವೆಂಕಪ್ಪ ಗೌಡ ಆಕ್ರೋಶ ವ್ಯಕ್ತಪಡಿಸಿದರು. ತೆರಿಗೆ ಅಽಕಾರಿ ಶಶಿಕಲಾ ಉತ್ತರಿಸಿ ನಾವು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೆವು ಆದರೆ ಅವರು ಬರಲಿಲ್ಲ. ನಾವೇನು ಮಾಡುವುದು ಎಂದು ಪ್ರಶ್ನಿಸಿದರು. ಅಧ್ಯಕ್ಷರು ಮಾತನಾಡಿ ನಮಗೆ ತೆರಿಗೆ ಕುರಿತು ಸ್ಪಷ್ಟೀಕರಣ ದೊರೆತ ಬಳಿಕವೇ ನಿರ್ಣಯ ಮಾಡಲಾಗುವುದು ಎಂದರು. ಕಸ ವಿಲೇವಾರಿ ೩ ತಿಂಗಳಲ್ಲಿ ಆಗುತ್ತದೆ ಎಂದು ತಿಂಗಳು ೬ ಕಳೆದರೂ ಕಸ ವಿಲೇವಾರಿಯಾಗಿಲ್ಲ ಆಡಳಿತ ಏನು ಮಾಡುತ್ತಿದೆ ಎಂದು ಸದಸ್ಯರು ಟೀಕಿಸಿದರು. ಕಾರ್ಮಿಕರನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಡ್ರೈವರ್ ಅನ್ನು ಸೂಪರ್ ವೈಸರ್ ಮಾಡಿದ್ದು ಅವರು ಸರಿಯಾಗಿ ನಿರ್ವಹಿಸುತ್ತಲ್ಲ ಎಂದು ಎಂಜಿನಿಯರ್ ಶಿವ ಕುಮಾರ್ ತಿಳಿಸಿದರು. ಹಾಗಾದರೆ ಡ್ರೈವರ್ ಅವರ ಕೆಲಸ ಮಾತ್ರ ಮಾಡಲಿ. ನೀವು ನಿಮ್ಮ ಕೆಲಸ ಮಾಡಿ. ಹಾಗೆ ಮಾಡದಿದ್ದರೆ ನಾವು ನಿರ್ಣಯ ಕೈಗೊಂಡು ಕ್ರಮ ಕೈಗೊಳ್ಳುವ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನುಳಿದಂತೆ ಬಾಡಿಗೆ ವಸೂಲಾತಿ, ಕುಡಿಯುವ ನೀರು, ಖಾಸಗಿ ಬಸ್ ನಿಲ್ದಾಣದಲ್ಲಿ ಶುಲ್ಕ ಪಾವತಿ ಮಾಡುವ ವಿಷಯದ ಕುರಿತು ಚರ್ಚೆಗಳು ನಡೆದವು.
ಅಧ್ಯಕ್ಷ-ಮುಖ್ಯಾಧಿಕಾರಿ ನಡುವೆ ಭಿನ್ನಮತ ಸ್ಪೋಟ
ಅಧ್ಯಕ್ಷರು ಇತರ ಅಽಕಾರಿಗಳ ಚಾಡಿ ಮಾತಿಗೆ ಓಗೊಟ್ಟು ತಮ್ಮ ಅಧಿಕಾರದ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಆರೋಪಿಸಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದರು. ಬಳಿಕ ಅಧ್ಯಕ್ಷರ ಹಾಗೂ ಸದಸ್ಯರ ಮನವೊಲಿಕೆಯ ಬಳಿಕ ವೇದಿಕೆಯೇರಿದರು. ಅಧ್ಯಕ್ಷರು ಮಾತನಾಡಿ ಅಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳ ನಡುವೆ ಹೊಂದಾಣಿಕೆಯಿಲ್ಲದ ಕಾರಣ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಆರೋಪಿಸಿದರು. ಆರೋಪ ಪ್ರತ್ಯಾರೋಪಗಳಿಂದ ಬೇಸತ್ತ ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ನಿಮ್ಮ ಆಡಳಿತದ ನಡುವಿನ ಜಗಳವನ್ನು ನೋಡಲು ನಾವು ಬಂದದ್ದಲ್ಲ. ನಮಗೆ ಜನರ ಸಮಸ್ಯೆಗಳ ಅಭಿವೃದ್ಧಿಗಳ ಕುರಿತ ಚರ್ಚೆಯಾಗಬೇಕು. ಅದಕ್ಕೆ ಸಹಕರಿಸಿ ನಿಮ್ಮ ಹೊಂದಾಣಿಕೆ ಸರಿಯಿಲ್ಲದಿದ್ದದರೆ ಆಡಳಿತ ವೈಫಲ್ಯ ಎಂದಾಗುತ್ತದೆ. ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ ಅಷ್ಟೇ ಎಂದರು. ಬಳಿಕ ವೆಂಕಪ್ಪ ಗೌಡ ಮಧ್ಯ ಪ್ರವೇಶಿಸಿ ಅಧಿಕಾರಿಗಳ ಹಾಗೂ ಆಡಳಿತದ ಸಭೆ ಕರೆಯಿರಿ ಎಂದು ಸಲಹೆ ನೀಡಿದರು. ಎ.೨೭ರಂದು ಸಭೆ ಕರೆಯುವುದಾಗಿ ಅಧ್ಯಕ್ಷರು ತಿಳಿಸಿದ ಬಳಿಕ ವಾಗ್ವಾದ ತಣ್ಣಗಾಯಿತು. ಆದರೆ ಸಭೆಯುದ್ದಕ್ಕೂ ಮುಖ್ಯಾಧಿಕಾರಿ, ಎಂಜಿನಿಯರ್,ಹಾಗೂ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಲೇ ಇತ್ತು.