ವಿಶ್ವ ಆರೋಗ್ಯ ದಿನವಾದ ಎ.7ರಂದು ಕಳಂಜ ಗ್ರಾಮ ಪಂಚಾಯತ್ ಕೊರೊನಾ ಕಾರ್ಯಪಡೆ ಸಮಿತಿ ಮತ್ತು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ಶಿಬಿರವನ್ನು ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯವರೆಗೂ ಹಮ್ಮಿಕೊಳ್ಳಲಾಗಿತ್ತು.
ಕಳಂಜ ಗ್ರಾಮ ಪಂಚಾಯತ್ ಕೊರೊನಾ ಕಾರ್ಯಪಡೆ ಸಮಿತಿಯ ಪ್ರಾಥಮಿಕ ಸಮೀಕ್ಷಾ ಅಂಕಿ ಅಂಶಗಳ ಪ್ರಕಾರ ಕಳಂಜ ಗ್ರಾಮದ 45 ವರ್ಷ ಮೇಲ್ಪಟ್ಟ 590 ಗ್ರಾಮಸ್ಥರ ಪೈಕಿ 130 ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು 130 ಗ್ರಾಮಸ್ಥರು ಲಸಿಕಾ ಶಿಬಿರದಲ್ಲಿ ಒಟ್ಟು 260 ಗ್ರಾಮಸ್ಥರು ಕುಟುಂಬ ಸಮೇತವಾಗಿ ಬಂದು ಮೊದಲ ಹಂತದ ಲಸಿಕೆಯನ್ನು ಪಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಜನವಸತಿ ಪ್ರದೇಶಗಳಿಂದ ಮತ್ತು ಸೂಚಿಸಿದ ಸಮಯದಲ್ಲಿ ಲಸಿಕೆಯನ್ನು ಪಡೆಯಲು ಪಂಚಾಯತಿಗೆ ಬರಲು ಕಳಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ವತಿಯಿಂದ ವಾಹನದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಎರಡನೇ ಹಂತದ ಲಸಿಕಾ ಶಿಬಿರವನ್ನು 6-8 ವಾರಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.