Ad Widget

ಮರ್ಕಂಜದ ಪ್ರಭಾತ್ ಬಲ್ನಾಡುಪೇಟೆ ಅವರಿಗೆ ಪಿ.ಎಚ್.ಡಿ. ಪದವಿ


ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜಿನಲ್ಲಿ ೧೯ ವ಼ರ್ಷಗಳಿಂದ ಇತಿಹಾಸ ಉಪನ್ಯಾಸಕ ರಾಗಿರುವ ಪ್ರಭಾತ್ ಬಲ್ನಾಡು ಅವರು, ಉಜಿರೆ ಡಾ.ಹಾಮಾನಾ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿರುವ *ಕೆಳದಿ ಆಳ್ವಿಕೆಯ  ತುಳುನಾಡಿನ  ಸಮಾಜೋ-  ಆರ್ಥಿಕ ಅಧ್ಯಯನ* ಎಂಬ ಪ್ರೌಢ ಸಂಪ್ರಬಂಧಕ್ಕೆ, ಹಂಪಿ ಕನ್ನಡ ವಿಶ್ವವಿದ್ಯಾಲಯವು  ಪಿಎಚ್.ಡಿ. ಪದವಿಯನ್ನು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಏಕೈಕ ಜೈನ ಕೇಂದ್ರ ಬಲ್ನಾಡುಪೇಟೆಯಲ್ಲಿ  ಹಿರಿಯ ಯಕ್ಷಗಾನ ಕಲಾವಿದ,ಯಕ್ಷಗಾನ ಮೇಳದ ಯಜಮಾನ, ಗ್ರಾಮದ ೩ ದೇವಾಲಯ ಸಹಿತ ಪಂಚಸ್ಥಾಪನೆಯ ಆಡಳಿತ ಮೊಕ್ತೇಸರರಾಗಿ ಸುದೀರ್ಘ ೩೫ ವರ್ಷ ಮುನ್ನಡೆಸಿದ, ಪ್ರಸ್ತುತ ಬಲ್ನಾಡುಪೇಟೆ ಬಸದಿ ಆದೀಶ್ವರ ಸ್ವಾಮಿ ಬಸದಿಯ ಆಡಳಿತ ಮೊಕ್ತೇಸರ, ಯುವರಾಜ ಜೈನ್ ಮತ್ತು  ಶ್ರೀಮತಿ ಪ್ರಸನ್ನ ದಂಪತಿಗಳ ೪ ಜನ ಮಕ್ಕಳಲ್ಲಿ ೩ನೆಯವರಾಗಿ ೮.೧೦.೧೯೭೬ ರಲ್ಲಿ ಜನನ.
ಸುಳ್ಯದಲ್ಲಿ ಪದವಿ, ಮಂಗಳ ಗಂಗೋತ್ರಿಯಲ್ಲಿ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ೧೯೯೯ರಲ್ಲಿ ಯು.ಜಿ.ಸಿ(ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ )ಪೂರೈಸಿದ ಪ್ರತಿಭಾವಂತ. ಕಾಲೇಜು ಹಂತದಲ್ಲಿ ಭಾಷಣ,ರಸಪ್ರಶ್ನೆ, ಪ್ರಹಸನ, ಏಕಪಾತ್ರಾಭಿನಯ, ಯಕ್ಷಗಾನ,ಎನ್.ಎಸ್.ಎಸ್ ಮೊದಲಾದ ಕ್ಷೇತ್ರಗಳಲ್ಲಿ ಹತ್ತು ಹಲವು ಬಹುಮಾನ ಸಂದಿವೆ.

. . . . . .


೧೯೯೯ರಲ್ಲಿ ಸರಕಾರಿ ಪದವಿ ಕಾಲೇಜು ಬೆಳ್ಳಾರೆಯಲ್ಲಿ ಇತಿಹಾಸ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ೨೦೦೧ ರಿಂದ ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದಾರೆ. ಕಳೆದ ೧೯ ವ಼ರ್ಷಗಳಿಂದ ಮೂಡುಬಿದಿರೆಯ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಸೈ ಎಣಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
೨೦೧೨ ರಲ್ಲಿ ಮೂಡುಬಿದಿರೆ ಜೂನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಅಧ್ಷಕ್ಷರಾಗಿ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿರುವ ಇವರು, ಜೇಸಿಐನ ಲೀಡರ್ ಏಂಡ್ ಪಾರ್ಲಿಮೆಂಟೇರಿಯನ್  ಮೊದಲಾದ ತರಬೇತಿಗಳಲ್ಲಿ” ಬೆಸ್ಟ್ ಪಾರ್ಟಿಸಿಪೆಂಟ್” ಅವಾರ್ಡ್ ಪಡೆದುದಲ್ಲದೇ ಸ್ಪೀಚ್ ಕ್ರಾಪ್ಟ್ ಮೊದಲಾದ ತರಬೇತಿಗಳಲ್ಲಿ ಭಾಗವಹಿಸಿ ಪ್ರಸುತ ಜೇಸಿಐ ನ ವಲಯ ತರಬೇತುದಾರರಾಗಿ ನೂರಾರು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ.
ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ತಂದೆಯವರ ಮೂಲಕ ಪ್ರವೇಶ ಪಡೆದ ಡಾ.ಪ್ರಭಾತ್ ಬಲ್ನಾಡುಪೇಟೆಯವರ ಯಕ್ಷಗಾನದ ಕೊಡುಗೆ ಗುರುತಿಸುವಂತದ್ದು. ತಂದೆಯವರ ಮಕ್ಕಳ ಮೇಳದಲ್ಲಿ ೩ನೇ ತರಗತಿಯಲ್ಲಿರುವಾಗ ಗೆಜ್ಜೆ ಕಟ್ಟಿದ ಇವರ ದಿಗ್ವಿಜಯ ಇಂದಿಗೂ ಮುಂದುವರೆದಿದೆ. ಶಾಲಾ ಕಾಲೇಜು ಜೀವನದಲ್ಲಿ ಕಲಾವಿದನಾಗಿ ಬೆಳೆದ ಇವರು ನಿರ್ವಹಿಸಿದ ನೂರಾರು ಪಾತ್ರಗಳು ವೃತ್ತಿಪರ ಕಲಾವಿದರಿಂದ ಪ್ರಶಂಸೆಗೊಳಗಾಗಿವೆ. ಲಾ ಕಾಲೇಜಿನ ಯಕ್ಷೋತ್ಸವ ಪ್ರಶಸ್ತಿ ಸ್ವೀಕರಿಸಿದ ಇವರು ಕಳೆದ ೨೦ ವ಼ರ್ಷಗಳಲ್ಲಿ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ಹಲವು ವಿದ್ಯಾರ್ಥಿಗಳು ಇಂದು ಮೇಳದ ವೃತ್ತಿಪರ ಕಲಾವಿದರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಮೂಡುಬಿದಿರೆ ಜೈನ ಮಠದ ಪ.ಪೂ.ಸ್ವಸ್ತಿಶ್ರೀ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರ ಪ್ರೋತ್ಸಾಹದಿಂದ  ಮೂಡಿಬಂದ ಆದ್ಯಶ್ರೀ ಚಾರುಕೀರ್ತಿ ಯಕ್ಷ ಕಲಾ ಬಳಗದ ಕಾರ್ಯಕ್ರಮ ಸಂಯೋಜಕರಾಗಿ, ಹಿರಿಯ ತಾಳಮದ್ದಲೆ ಕಲಾವಿದರೊಂದಿಗೆ ಅರ್ಥದಾರಿ ಯಾಗಿಯೂ ಭಾಗವಹಿಸಿದ್ದಾರೆ. ದಿವಂಗತ ಶ್ರೀಧರ ಪಾಂಡಿ ಸಾಣೂರು ಅವರು ಬರೆದ ಸುಮಾರು ೨೩ ಜೈನ ಪ್ರಸಂಗಗಳನ್ನು ಗುರುಗಳಾದ ಮುನಿರಾಜ ರೆಂಜಾಳರ ಮುಂದಾಳತ್ವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ಪ್ರದರ್ಶಿಸಿ ಮನ್ನಣೆಯನ್ನು ಪಡೆದಿದ್ದಾರೆ.
೧೯೯೦ ರ ದಶಕದ ಸಾಕ್ಷರತಾ ಆಂದೋಲನದ ಯಕ್ಷಗಾನಗಳಲ್ಲಿ ತಂದೆಯ ಜೊತೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಡಾ.ಪ್ರಭಾತ್ ಅವರು ನುರಿತ ಕಲಾವಿದರಾಗಿದ್ದು, ವಿಷ್ಣು, ಕೃಷ್ಣ, ದೇವೇಂದ್ರ, ಬಬ್ರುವಾಹನ, ಅರ್ಜುನ, ಸುದರ್ಶನ, ಲಕ್ಷ್ಮಣ, ರಾಮ, ಲವ ಕುಶ, ಶತ್ರುಘ್ನ, ಚಂಡ ಮುಂಡ, ಚೆನ್ನಯ, ಷಣ್ಮುಖ ಮುಂತಾದ ನೂರಾರು ಯಕ್ಷಗಾನದ ಪಾತ್ರಗಳಿಗೆ ಜೀವ ನೀಡಿದ್ದಾರೆ.
ಜೈನ ಧರ್ಮದ ಇತಿಹಾಸ ಮತ್ತು ಪರಂಪರೆಯ ಕುರಿತಾಗಿ ಸಂಶೋಧನೆ ನಡೆಸುತ್ತಿರುವ ಇವರು, ಸುಳ್ಯ ಭಾಗದಲ್ಲಿ ಆಡಳಿತ ನಡೆಸಿದ್ದ ಬಲ್ಲಾಳರ ಕುರಿತು ಅಧ್ಯಯನ ನಡೆಸಿ ಸುಳ್ಯ ತಾಲೂಕಿನಾದ್ಯಂತ ಇರುವ ಬಸದಿಗಳನ್ನು ಸಂರಕ್ಷಿಸುವ ಕೆಲಸದಲ್ಲಿ  ತೊಡಗಿಸಿಕೊಂಡಿದ್ದಾರೆ. ಕೇವಲ ೮ ಮನೆಗಳಿರುವ ಬಲ್ನಾಡಿನ ಬಸದಿ ಕೇವಲ ೧ ವರ್ಷ ೪ ತಿಂಗಳಲ್ಲಿ ರೂ ೭೫ ಲಕ್ಷ ವೆಚ್ಚದಲ್ಲಿ ಸಂಪೂರ್ಣ ಮರು ನಿರ್ಮಾಣಗೊಳ್ಳುವಲ್ಲಿ ಬಲ್ನಾಡಿನ ಶ್ರಾವಕರೊಂದಿಗೆ ಮುಂಚೂಣಿಯಲ್ಲಿದ್ದು ಕೆಲಸ ನಿರ್ವಹಿಸಿದ್ದಾರೆ.
ತಮ್ಮ ಪಿಎಚ್.ಡಿ ಅಧ್ಯಯನದ ಮೂಲಕ ತುಳುನಾಡಿನ ಇತಿಹಾಸ ರಚನೆಯಲ್ಲಿ ಕ್ರಿ.ಶ.೧೬ನೇ ಶತಮಾನದಿಂದ ೧೮ನೇ ಶತಮಾನದ ಮಧ್ಯಭಾಗದವರೆಗಿನ ಚಾರಿತ್ರಿಕ ಸಂಗತಿಗಳನ್ನು ಶಾಸನಗಳು, ಪೋರ್ಚುಗೀಸ್ ದಾಖಲೆಗಳು, ಮೌಖಿಕ ಆಕರಗಳು, ಕಡತಗಳು ಮತ್ತು ಕ್ಷೇತ್ರಕಾರ್ಯಗಳ ಮೂಲಕ ಸಂಗ್ರಹಿಸಿ  ವಿಮರ್ಶಾತ್ಮಕ ಫಲಿತಗಳನ್ನು ನೀಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಗಣಪತಿ ಗೌಡ.ಎಸ್ ಇವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ರಚನೆಯಾಗಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಸ್ಮರಣಸಂಚಿಕೆಗಳ ಸಂಪಾದಕರಾಗಿ, ಲೇಖಕರಾಗಿ, ಧಾರ್ಮಿಕ ಉಪನ್ಯಾಸಕರಾಗಿ, ಕಾರ್ಯಕ್ರಮ ನಿರ್ವಾಹಕರಾಗಿ , ಜೇಸೀ ತರಬೇತುದಾರರಾಗಿ,  ಕೃಷಿಕರಾಗಿ, ಮಂಗಳೂರು ಆಕಾಶವಾಣಿಯಲ್ಲಿ ಹಾಗೂ ಸ್ಥಳೀಯ ಟಿವಿ ಚಾನೆಲ್ ಗಳಲ್ಲಿ, ಉಪನ್ಯಾಸಕರ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.


ಹಾವೇರಿ ಜಾನಪದ ವಿಶ್ವವಿದ್ಯಾಲಯದ ಗ್ರಾಮ ಚರಿತೆ ಕೋಶದ ಕ್ಷೇತ್ರ ತಜ್ನರಾಗಿ ಕೆಲಸ ನಿರ್ವಹಿಸಿದ್ದಾರೆ. ೧೯೯೪ರಲ್ಲಿ, ಮಣಿಪಾಲ ಡಾ.ಟಿ.ಎಂ.ಎ.ಪೈ ಸ್ಮಾರಕ ಉದಯವಾಣಿ ದತ್ತಿ ಪ್ರಶಸ್ತಿ, ೧೯೯೬ ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಎನ್.ಎಸ್.ಎಸ್ ಮೆರಿಟ್ ಸರ್ಟಿಫಿಕೆಟ್, ೧೯೯೭ರಲ್ಲಿ  ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಲಾ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಯಕ್ಷೋತ್ಸವ ಪುರಸ್ಕಾರ ೨೦೧೭ರಲ್ಲಿ ಮೂಡುಬಿದಿರೆ ಜೈನ ಮಠದ ಪೂಜ್ಯ ಶ್ರೀಗಳ ಸನ್ಮಾನ ಸಹಿತ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.
ಡಾ. ಪ್ರಭಾತ ಅವರ ಪತ್ನಿ ಶ್ರೀಮತಿ ಸಹನಾ ಉತ್ತಮ ಹಾಡುಗಾರ್ತಿಯಾಗಿದ್ದು, ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಇವರಿಗೆ ಧನುಷ್ ಮತ್ತು ವರ್ಧನ್ ಇಬ್ಬರು ಮಕ್ಕಳು. 

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!