ಕರ್ನಾಟಕ ರಾಜ್ಯದಾದ್ಯಂತ ರೈತ ಸಂಘ ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯ ಅಂಗವಾಗಿ ಸೆಪ್ಟೆಂಬರ್ 21 ರಂದು ಸುಳ್ಯದ ತಾಲೂಕು ಕಛೇರಿ ವಠಾರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ವತಿಯಿಂದ ನಡೆಯಿತು. ಜೂನ್ 3 ರಂದು ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ರೈತ, ಕಾರ್ಮಿಕ, ದಲಿತ ವಿರೋಧಿಯಾದ ಭೂಸುದಾರಣೆ – ಎಪಿ.ಎಂ.ಸಿ ಕಾಯಿದೆ – ಕಾರ್ಮಿಕ ಕಾಯ್ದೆ – ಅಗತ್ಯ ಸರಕು ಕಾಯ್ದೆಗಳ ತಿದ್ದುಪಡಿ – ಮತ್ತು ವಿಧ್ಯತ್ ಕಾಸಾಗೀಕರಣ ಕಾಯ್ದೆಗಳನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ಸುಳ್ಯ ತಾಲೂಕಿನ ವಿವಿಧ ಸಂಘಟನೆಗಳು ಜಂಟಿಯಾಗಿ ನಡೆಸಿದರು. ಸುಳ್ಯ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಪ್ರಾಸ್ತಾವಿಕ ಮಾತನಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಏಕಾಏಕಿ ಜನಪರವಾಗಿ ಇರುವಂತಹ ಯೋಜನೆಗಳನ್ನು ಕೈಬಿಟ್ಟು ತಮಗೆ ಇಷ್ಟ ಬಂದಂತೆ ಯಾವುದೇ ಚರ್ಚೆಗಳಿಗೆ ಅವಕಾಶ ನೀಡದೆ ರೈತ ಪರ ಇರುವ ವಿವಿಧ ಯೋಜನೆಗಳನ್ನು ಕೈಬಿಟ್ಟು ಹಲವು ಮಸೂದೆಗಳನ್ನು ತಿದ್ದುಪಡಿ ಮಾಡಲು ಹೊರಟಿರುವುದು ನಮ್ಮ ದೇಶದ ದುರಂತವೇ ಸರಿ. ನಮ್ಮ ತಾಲೂಕಿನ ಶಾಸಕರು ಕೇವಲ ರಸ್ತೆಗಳಿಗೆ ಡಾಂಬರೀಕರಣ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ರೈತರ ಬಗೆಗಿನ ಕಾಳಜಿ ಅವರಿಗೆ ಇಲ್ಲ. ಕೇವಲ ಅವರ ಪಕ್ಷವನ್ನು ಬೆಳೆಸುವುದು ಬಿಟ್ಟು ಜನಪರವಾದ ಯಾವುದೇ ಯೋಜನೆಗಳನ್ನು ಮಾಡುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ರೀತಿಯಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘಟನೆಗಳು ವಿವಿಧ ಜನಪದ ಸಂಘಟನೆಗಳು ಈ ಸರ್ಕಾರಗಳ ವಿರುದ್ಧ ದಂಗೆ ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ಸುಳ್ಯ ತಾಲೂಕಿನ ಕಾರ್ಮಿಕ ಸಂಘದ ಮುಖಂಡ ಕೆಪಿ ಜಾನಿಕಿ ಸಂದರ್ಭದಲ್ಲಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದರು. ನಾಯಕತ್ವದ ವಿಮರ್ಶೆಯನ್ನು ಮಾಡುವುದು ನಮ್ಮ ಕರ್ತವ್ಯ . ನಿನ್ನೆ ನಡೆದ ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಗಳನ್ನು ಮಾಡದೆ ಮಸೂದೆಗಳನ್ನು ಅಂಗೀಕಾರ ಮಾಡುವ ಮೂಲಕ ನಮ್ಮ ಪೂರ್ವಜರು ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೆ ಅನ್ಯಾಯವನ್ನು ಮಾಡಿದ್ದಾರೆ ಎಂದು ಹೇಳಿದರು . ಮತ್ತೊಮ್ಮೆ ಈ ಸರ್ಕಾರಗಳು ನಮ್ಮನ್ನು ಗುಲಾಮಗಿರಿಗೆ ಅಣಿ ಮಾಡುತ್ತಿದೆ. ಹಿಂದಿನ ಕಾಲದಲ್ಲಿದ್ದ ಗುಲಾಮಗಿರಿ ಪದ್ಧತಿಗೆ ಇವರು ನಮ್ಮನ್ನು ಕೊಂಡೊಯ್ಯಲು ಸಿದ್ಧರಾಗಿದ್ದು ಉಳುವವನೇ ಹೊಲದೊಡೆಯ ಎಂಬ ಪದ್ಧತಿಯನ್ನು ದೇಶದಿಂದ ತೆಗೆದು ಹಾಕಲು ಹೊರಟಿದ್ದಾರೆ ಎಂದರು. ದೇಶದ ಎಲ್ಲ ವ್ಯವಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಬಡ ರೈತಾಪಿ ವರ್ಗದವರನ್ನು ಕಂಪನಿಗಳ ಗುಲಾಮಗಿರಿಗೆ ತಳ್ಳುತ್ತಿದೆ ಎಂದರು. ಇಡೀ ದೇಶವೇ ಕೋವಿಡ್ ಸಮಸ್ಯೆಯಿಂದ ಬಳಲುತ್ತಿದ್ದು , ಆದರೆ ಅಂಬಾನಿ ಅದಾನಿ ರವರಂತಹ ಶ್ರೀಮಂತರಿಗೆ ಯಾವುದೇ ನಷ್ಟ ಈ ಸಂದರ್ಭದಲ್ಲಿ ಉಂಟಾಗಲಿಲ್ಲ. ಅವರ ಆದಾಯದ ಮೊತ್ತವು ಹೆಚ್ಚುತ್ತಾ ಬರುತ್ತಿದೆ. ರೈತರು ಬಡಜನರು ದಲಿತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೀತಿಯ ದೌರ್ಜನ್ಯಗಳನ್ನು ಸಹಿಸುತ್ತ ಎಲ್ಲಿಯವರೆಗೆ ಜೀವನ ಮಾಡಬಹುದು ಎಂದು ಅವರು ಕೇಳಿದರು. ತಮ್ಮ ತಮ್ಮ ಪಕ್ಷದ ಶಾಸಕರನ್ನು ಮತ್ತು ಸಂಸದರನ್ನು ರಾಜ್ಯಸಭೆಯಲ್ಲಿ ಸಂಸತ್ತು ಗಳಲ್ಲಿ ಬೊಬ್ಬೆ ಹೊಡಿಸಿ ಮಸೂದೆಗಳನ್ನು ತಿದ್ದುಪಡಿ ವಿಧೇಯಕ ಮಂಡನೆ ಮಾಡುತ್ತಾ ದೇಶವನ್ನು ಅದಃಪತನಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂಬಿ ಸದಾಶಿವ ಮಾತನಾಡಿ ಪಡಿತರ ಮಸೂದೆ ಅಂತಹ ಉತ್ತಮ ವ್ಯವಸ್ಥೆಗೆ ತಿದ್ದುಪಡಿಗಳನ್ನು ತಂದು ಬಡವರ ಅನ್ನಕ್ಕೆ ಕನ್ನಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಉದ್ಯೋಗ ಗಳಿಲ್ಲದೆ ಜನಸಾಮಾನ್ಯರು ಕಷ್ಟದಲ್ಲಿ ಇದ್ದು ನಮ್ಮ ದೇಶದ ರೈತರು ಸಂಪಾದಿಸಿದ ಸಂಪತ್ತುಗಳನ್ನು ಲೂಟಿ ಮಾಡಿ ಅಂಬಾನಿ ಅದಾನಿ ಗಳಂತಹ ಖಾಸಗಿ ವ್ಯಕ್ತಿಗಳ ಕೈಗೆ ದೇಶವನ್ನು ನೀಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಭಾರತ ದೇಶವನ್ನು ಕಟ್ಟಿದವರು ರೈತರು. ದೇಶವನ್ನು ಕೊಳ್ಳೆ ಹೊಡೆಯುವ ಇಂತಹ ಕೆಲವು ನಾಯಕರು ಗಳಲ್ಲ ಎಂದು ಮಸೂದೆ ತಿದ್ದುಪಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಸೂದೆಗಳ ಬಗ್ಗೆ ಅರಿವೇ ಇಲ್ಲದಂತಹ ನಾಯಕರು ನಮ್ಮಲ್ಲಿ ಈಗಲೂ ಇದ್ದಾರೆ ಎಂದು ಹೇಳಿದರು. ಇನ್ನೋರ್ವ ಕಾರ್ಮಿಕ ಮುಖಂಡ ತೀರ್ಥರಾಮ ಉಳುವಾರು ಮಾತನಾಡಿ ಕೋಟಿ ಕೋಟಿ ಹಣ ಗಳನ್ನು ನೀಡಿ ಶಾಸಕರನ್ನು ಖರೀದಿ ಮಾಡಿ ರಾಜ್ಯಭಾರ ಮಾಡಲು ಇವರಲ್ಲಿದೆ ರೈತರಿಗೆ ಮತ್ತು ಬಡವರಿಗೆ ಸಹಾಯ ಮಾಡಲು ಮತ್ತು ಪರಿಹಾರ ನೀಡಲು ಇವರಲ್ಲಿ ಹಣ ಇಲ್ಲ ಎಂದು ವ್ಯಂಗ್ಯ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸುಳ್ಯ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಮಂಜುನಾಥ ಬಳ್ಳಾರಿ, ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ಹರಿಚಂದ್ರ ದಾಸ್, ಕಾರ್ಮಿಕ ಮುಖಂಡರಾದ ಕೆಕೆ ಶ್ರೀಧರ, ತೀರ್ಥರಾಮ ಕಾಡು ಪಂಜ, ಹನೀಫ್ ಕಡಪಲ, ಗಣೇಶ ಗೋಪಾಲ, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೈತ ಸಂಘದ ಸದಸ್ಯರು ಕಾರ್ಮಿಕ ಸಂಘಟನೆಯ ಸದಸ್ಯರು,ದಲಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪ್ರತಿಭಟನೆಯ ಕೊನೆಯಲ್ಲಿ ಈಗಾಗಲೇ ತಿದ್ದುಪಡಿ ಮಾಡಲು ಹೊರಟಿರುವ ಮಸೂದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಸುಳ್ಯ ತಹಶಿಲ್ದಾರ್ ಅನಂತ ಶಂಕರ್ ರವರ ಮೂಲಕ ಮನವಿಯನ್ನು ನೀಡಲಾಯಿತು.
- Sunday
- November 24th, 2024