ನನ್ನ ಅನುಮತಿಯಿಲ್ಲದೆ ಆಸ್ತಿ ದಾಖಲೆಗಳ ದುರುಪಯೋಗ |ರಾಜಕೀಯ ಪ್ರಭಾವದಿಂದ ನನಗೆ ಮತ್ತು ಮಕ್ಕಳಿಗೆ  ಅನ್ಯಾಯ ಮಾಡಿದ್ದಾರೆ | ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ  ಟಿ.ಎಂ. ಶಹೀದ್ ತೆಕ್ಕಿಲ್ ವಿರುದ್ಧ ಪತ್ನಿ ಶಮಾ ಆರೋಪ

ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅವರು ತನ್ನ ಅನುಮತಿಯಿಲ್ಲದೆ ಆಸ್ತಿ ಹಾಗೂ ದಾಖಲೆ ಪತ್ರಗಳಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ಇದೀಗ ತಲಾಕ್ ನೀಡಿ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅವರ ಪತ್ನಿ ಶಮಾ ಅವರು ಆರೋಪಿಸಿದ್ದಾರೆ.

. . . . . . . . .

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಜು. 8ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಮಾ ಅವರು, ಟಿ.ಎಂ‌. ಶಹೀದ್ ಅವರೊಂದಿಗೆ ತಮ್ಮ ವಿವಾಹವಾಗಿ ಸುಮಾರು 25 ವರ್ಷಗಳಾಗಿದ್ದು, ಕಳೆದ 9 ವರ್ಷಗಳಿಂದ ನಾನು ನನ್ನ  ತಾಯಿಯ ಮನೆಯಾದ ಕಾಸರಗೋಡಿನಲ್ಲಿ  ವಾಸಿಸುತ್ತಿದ್ದೇನೆ ಎಂದರು.

. . . . . . .

ತಮ್ಮ ತಂದೆ ಕಾಸರಗೋಡಿನಲ್ಲಿದ್ದ ಜಮೀನು ಮಾರಾಟ ಮಾಡಿ ಸುಳ್ಯದ ಅರಂತೋಡಿನಲ್ಲಿ ಜಾಗ ಖರೀದಿಸಿ ನೀಡಿದ್ದರು. ಆದರೆ ಆ ಆಸ್ತಿಯಲ್ಲಿರುವ ಕಟ್ಟಡಗಳ ಬಾಡಿಗೆಯನ್ನೂ ಸೇರಿದಂತೆ ಎಲ್ಲ ಆದಾಯವನ್ನು ಟಿ.ಎಂ. ಶಹೀದ್ ತೆಕ್ಕಿಲ್ ಪಡೆದುಕೊಳ್ಳುತ್ತಿದ್ದಾರೆ. ವಿಚ್ಚೇದನ ಪತ್ರಕ್ಕೆ ಸಹಿ ಹಾಕಿದ್ದು, ಕಾನೂನಾತ್ಮಕವಾಗಿ ವಿಚ್ಛೇದನವಾಗದಿದ್ದರೂ ಶಹೀದ್ ಅವರು ಎರಡನೇ ಮದುವೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ನನ್ನ ಮೂರು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ವಿವಾಹದ ಸಂದರ್ಭದಲ್ಲಿ ನನ್ನ ತಂದೆ ನನಗೆ  ನೀಡಿದ್ದ ಸುಮಾರು 2 ಕೋಟಿ ಮೌಲ್ಯದ ಆಸ್ತಿ ಹಾಗೂ 110 ಪವನ್ ಚಿನ್ನವನ್ನು ಶಹೀದ್ ಅವರು ನನಗೆ ಮರಳಿ ನೀಡಬೇಕು ಎಂದ ಶಮಾ ಅವರು
ಪವರ್ ಆಫ್ ಅಟಾರ್ನಿಯನ್ನು ಬಳಸಿಕೊಂಡು ವಿವಿಧ ಸಹಕಾರಿ ಸಂಘಗಳಲ್ಲಿ ಸಾಲ ಪಡೆದಿದ್ದು, ಪವರ್ ಆಫ್ ಅಟಾರ್ನಿ ರದ್ದಾದ ಬಳಿಕವೂ ಅದನ್ನು ದುರುಪಯೋಗಪಡಿಸಿಕೊಂಡು ವ್ಯವಹಾರ ನಡೆಸಿದ್ದಾರೆ.

ಸಹಕಾರಿ ಸಂಘದಿಂದ ಆಸ್ತಿ ಜಪ್ತಿಗೆ ಬಂದ ಸಂದರ್ಭದಲ್ಲಿ ತಾನೇ 18 ಲಕ್ಷ ಪಾವತಿಸಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ತನ್ನ ಬಳಿ ಇವೆ. ತನ್ನ ಗಮನಕ್ಕೆ ಬಾರದಂತೆ ಕಟ್ಟಡದ ಬಾಡಿಗೆದಾರರಿಂದ 2 ಲಕ್ಷದಿಂದ  6 ಲಕ್ಷದವರೆಗೆ ಠೇವಣಿ ಹಣವನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಬಾಡಿಗೆದಾರರನ್ನು ಪ್ರಶ್ನಿಸಿದಾಗ, ಟಿ.ಎಂ. ಶಹೀದ್ ತೆಕ್ಕಿಲ್ ಸೂಚನೆಯಂತೆ ನಡೆದುಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಆರೋಪಿಸಿದರು.

ಆಸ್ತಿಯಲ್ಲಿ ಅವರು ಕೇವಲ ಪಾಲುದಾರರಾಗಿದ್ದು, ಮಾಲೀಕರಲ್ಲ. ಆದರೂ ಸುಮಾರು 2.5 ಲಕ್ಷದಷ್ಟು ಲಾಭವನ್ನು ಪಡೆದುಕೊಳ್ಳುತ್ತಿದ್ದು, ತನ್ನ ಪಾಲಿನ ಹಣ ನೀಡದೇ, ಪ್ರಶ್ನಿಸಿದಾಗ ರಾಜಕೀಯ ಪ್ರಭಾವ ಬಳಸಿಕೊಂಡು ಬೆದರಿಕೆ ಹಾಕಿದ್ದಾರೆ. “ಪ್ರಧಾನಿ ಅಥವಾ ಮುಖ್ಯಮಂತ್ರಿಗಳ ಬಳಿಗೆ ಹೋದರೂ ನನ್ನ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ” ಎಂದು ಬೆದರಿಕೆ ಹಾಕಿರುವುದಾಗಿ ಹಾಗೂ ರಾಜಕೀಯ ಪ್ರಭಾವ ಬಳಸಿ ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading