ಹರಿಹರ ಪಳ್ಳತ್ತಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಹರಿಹರ ಪಳ್ಳತ್ತಡ್ಕ, ಐನೆಕಿದು, ಬಾಳುಗೋಡು ಹಾಗೂ ಕೊತ್ನಡ್ಕ ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.26 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷರಾದ ವೆಂಕಪ್ಪ ಗೌಡ ರವರು “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿದ ನಂತರ ಹಲವಾರು ಕುಟುಂಬಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಇದನ್ನು ಇನ್ನು ಮುಂದೆಯೂ ಕೂಡಾ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಯಾಗಿದೆ. ಒಕ್ಕೂಟದ ನೂತನ ಪದಾಧಿಕಾರಿಗಳು ಇದರ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕು” ಎಂದು ಹೇಳಿದರು.
ಈ ಸಮಾರಂಭದಲ್ಲಿ ನೂತನ ಒಕ್ಕೂಟಗಳ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ರವರು “ಯೋಜನೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳಿದ್ದು, ಇವುಗಳನ್ನು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅನುಷ್ಠಾನ ಮಾಡುವಲ್ಲಿ ಒಕ್ಕೂಟಗಳು ಮಹತ್ತರವಾದ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬಂದಿವೆ, ಹಾಗೂ ಯೋಜನೆಯ ಪ್ರತಿಯೊಂದು ನೀತಿ-ನಿಯಮಗಳನ್ನು ಪಾಲಿಸುತ್ತಾ ಬಂದಿವೆ. ಮುಂದೆಯೂ ಕೂಡ ನೂತನ ಒಕ್ಕೂಟಗಳ ಪದಾಧಿಕಾರಿಗಳು ಯೋಜನೆಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಪಾಲುದಾರ ಬಂಧುಗಳ ಕುಟುಂಬಗಳನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ಗ್ರಾಮಗಳ ಅಭಿವೃದ್ಧಿಪಡಿಸುವಲ್ಲಿ ಮಹತ್ತರವಾದ ಜವಾಬ್ದಾರಿಯ ಪಾತ್ರಗಳನ್ನು ನಿರ್ವಹಿಸಿಕೊಂಡು ಹೋಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗುತ್ತಿಗಾರಿನ ಶ್ರೀ ಮುತ್ತಪ್ಪ ತಿರುವಪ್ಪನ್ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ವಲಯ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಸತೀಶ್.ಟಿ.ಎನ್, ಬಾಳುಗೋಡು ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಉಷಾ ಪ್ರಭಾಕರ ಕಿರಿಭಾಗ, ಸುಬ್ರಹ್ಮಣ್ಯ ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ವಲಯಾಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರನ್ನು, ನವಜೀವನ ಸಮಿತಿಯ ಸದಸ್ಯರನ್ನು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳನ್ನು, ಹರಿಹರ ಪಳ್ಳತ್ತಡ್ಕ, ಐನೆಕಿದು, ಬಾಳುಗೋಡು ಹಾಗೂ ಕೊತ್ನಡ್ಕ ಒಕ್ಕೂಟಗಳ ನಿಕಟಪೂರ್ವ ಪದಾಧಿಕಾರಿಗಳನ್ನು ಮತ್ತು ನಿಕಟಪೂರ್ವ ಉಪಸಮಿತಿ ಹಾಗೂ ದಾಖಲಾತಿ ಸಮಿತಿಯ ಸದಸ್ಯರುಗಳನ್ನು ಗುರುತಿಸಿ ಗೌರವಿಸಲಾಯಿತು. 2025-26ನೇ ಸಾಲಿನ ಒಲಿಂಪಿಯಾಡ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಜನಾ ಪರಿಷತ್ ನ ವಲಯಾಧ್ಯಕ್ಷರಾದ ಚಂದ್ರಶೇಖರ ಕೊಂದಾಳ, ಸೇವಾ ಪ್ರತಿನಿಧಿಗಳಾದ ಶ್ರೀಮತಿ ನಾಗವೇಣಿ, ಶ್ರೀಮತಿ ರೇಖಾ, ಹರಿಹರ ಪಳ್ಳತ್ತಡ್ಕ, ಐನೆಕಿದು, ಬಾಳುಗೋಡು ಹಾಗೂ ಕೊತ್ನಡ್ಕ ಒಕ್ಕೂಟಗಳ ನಿಕಟಪೂರ್ವ ಮತ್ತು ನೂತನ ಪದಾಧಿಕಾರಿಗಳು, ಎಲ್ಲಾ ಒಕ್ಕೂಟಗಳ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಭಜನಾ ಪರಿಷತ್ ನ ಪದಾಧಿಕಾರಿಗಳು, ನವಜೀವನ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಹರಿಹರ ಪಳ್ಳತ್ತಡ್ಕ ಒಕ್ಕೂಟದ ನೂತನ ಅಧ್ಯಕ್ಷರಾದ ಗಿರೀಶ್.ಎಂ.ಟಿ ಸ್ವಾಗತಿಸಿ, ನೂತನ ಕಾರ್ಯದರ್ಶಿಗಳಾದ ಶ್ರೀಮತಿ ಪುಷ್ಪಾವತಿ ಧನ್ಯವಾದ ಸಮರ್ಪಿಸಿದರು. ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ರವರು ವರದಿ ವಾಚಿಸಿದರು. ಬಾಳುಗೋಡು ಒಕ್ಕೂಟದ ನೂತನ ಅಧ್ಯಕ್ಷರಾದ ನಿತಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading