Ad Widget

ಲೇಖನ : ಬದುಕಿನಲ್ಲಿ ಗಳಿಸಿದ್ದು-ಉಳಿಸಿದ್ದು ; ✍️ಉಲ್ಲಾಸ್ ಕಜ್ಜೋಡಿ

“ನಾವು ಇನ್ನೊಬ್ಬರ ಮನಸ್ಸು ಅಥವಾ ಹೃದಯವನ್ನು ಪ್ರೀತಿ ಹಾಗೂ ಗೌರವದಿಂದ ಗೆಲ್ಲಬಹುದೇ ವಿನಃ ಸಿಟ್ಟು ಅಥವಾ ಕೋಪದಿಂದ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ” ಎಂಬುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಆದರೂ ಕೂಡ ನಾವು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಕೆಲಸದ ಒತ್ತಡಗಳಿಂದಲೋ ಅಥವಾ ಬದುಕಿನ ಸಮಸ್ಯೆಗಳಿಂದಲೋ ನಮ್ಮೊಳಗೆ ಹುಟ್ಟುವ ಈ ಸಿಟ್ಟು ಅಥವಾ ಕೋಪವನ್ನು ಇತರರ ಮೇಲೆ ತೋರಿಸಿಬಿಡುತ್ತೇವೆ.
ಯಾವುದೋ ಕಾರಣಕ್ಕೆ ಸಿಟ್ಟಾಗಿರುವ ನಾವು ಇನ್ಯಾರೋ ನಮ್ಮೊಂದಿಗೆ ಪ್ರೀತಿಯಿಂದ ಮಾತನಾಡಿಸಲು ಬಂದಾಗ ಅಲ್ಲಿ ಅವರ ತಪ್ಪುಗಳೇನೂ ಇಲ್ಲದಿದ್ದರೂ ಕೂಡ ಕಾರಣವಿಲ್ಲದೇ ಸುಖಾಸುಮ್ಮನೆ ಏಕಾಏಕಿ ಅವರ ಮೇಲೆ ರೇಗಿಬಿಡುತ್ತೇವೆ, ಹಾಗೂ ಆ ಮೂಲಕ ನಮ್ಮೊಳಗಿರುವ ಸಿಟ್ಟು ಅಥವಾ ಕೋಪವನ್ನು ಅವರ ಮೇಲೆ ತೋರಿಸಿಬಿಡುತ್ತೇವೆ. ಇದು ಅಕ್ಷರಶಃ ತಪ್ಪು, ಏಕೆಂದರೆ ಬದುಕು ಅಂದಮೇಲೆ ಅಲ್ಲಿ ಸಮಸ್ಯೆಗಳು ಹಾಗೂ ಕೆಲಸ ಅಂದಮೇಲೆ ಅಲ್ಲಿ ಒತ್ತಡಗಳು ಸರ್ವೇಸಾಮಾನ್ಯ. ಹಾಗಾಗಿ ನಮ್ಮ ಬದುಕಿನಲ್ಲಿ ಅದೇನೇ ಸಮಸ್ಯೆಗಳಿದ್ದರೂ, ಅದೆಷ್ಟೇ ಕೆಲಸದ ಒತ್ತಡಗಳಿದ್ದರೂ ಕೂಡ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಲು ಬಂದವರಿಗೆ ಹಾಗೂ ನಮ್ಮ ಪ್ರೀತಿಪಾತ್ರರರಿಗೆ ನಾವು ಸದಾ ಪ್ರೀತಿಯನ್ನೇ ತೋರಬೇಕು ವಿನಃ ನಮ್ಮೊಳಗಿನ ಸಿಟ್ಟು ಅಥವಾ ಕೋಪವನ್ನು ಅವರ ಮೇಲೆ ತೋರಿಸಬಾರದು. ಏಕೆಂದರೆ ಈಗಿನ ಕಾಲದಲ್ಲಿ ಯಾವುದನ್ನೇ ಆದರೂ ಕೂಡ ನಾವು ಹಣದಿಂದಲೋ ಅಥವಾ ಪ್ರಯತ್ನದಿಂದಲೋ ಸಂಪಾದಿಸಿಬಿಡಬಹುದು. ಆದರೆ ಈ ಪ್ರೀತಿ, ಸ್ನೇಹ, ಗೌರವ ಹಾಗೂ ಸಂಬಂಧಗಳನ್ನು ಸಂಪಾದಿಸುವುದು ತುಂಬಾನೇ ಕಷ್ಟ. ಅದನ್ನು ಸಂಪಾದಿಸಬೇಕೆಂದರೆ ನಮ್ಮೊಳಗೆ ಇತರರನ್ನು ಪ್ರೀತಿಯಿಂದ ನೋಡುವ ಹಾಗೂ ಗೌರವದಿಂದ ಕಾಣುವ ಗುಣದ ಜೊತೆಗೆ ಇತರರಿಂದ ನಮಗೆ ಹಿಂತಿರುಗಿ ಬರುವಂತಹ ಪ್ರೀತಿ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇರಬೇಕು. ಇವೆರಡೂ ಸಮಪ್ರಮಾಣದಲ್ಲಿ ನಿಸ್ವಾರ್ಥಯುತವಾಗಿ ನಮ್ಮೊಳಗೆ ಇದ್ದಾಗ ಮಾತ್ರ ಈ ಪ್ರೀತಿ, ಸ್ನೇಹ, ಗೌರವ ಹಾಗೂ ಸಂಬಂಧಗಳನ್ನು ನಾವು ನಮ್ಮ ಬದುಕಿನ ಕೊನೆಯವರೆಗೂ ಉಳಿಸಿಕೊಳ್ಳಲು ಸಾಧ್ಯ.
“ನಾವು ಜೀವನದಲ್ಲಿ ಕಷ್ಟಪಟ್ಟು ಗಳಿಸುವಂತಹ ಹಣ-ಆಸ್ತಿ-ಅಂತಸ್ತು ಇವೆಲ್ಲವೂ ಕೂಡ ನಾಳೆ ಖಾಲಿಯಾಗಿ ಹೋಗಬಹುದು ಅಥವಾ ಇನ್ಯಾರದ್ದೋ ಪಾಲಾಗಿ ಬಿಡಬಹುದು. ಆದರೆ ಒಂದು ಬಾರಿ ನಾವು ಸಂಪಾದಿಸಿದಂತಹ ಈ ಪ್ರೀತಿ, ಸ್ನೇಹ, ಗೌರವ ಹಾಗೂ ಸಂಬಂಧಗಳು ನಮ್ಮ ಕೊನೆಯ ಉಸಿರಿನವರೆಗೂ ನಮ್ಮೊಂದಿಗೆ ಸದಾ ಇರುತ್ತವೆ ಹಾಗೂ ನಮ್ಮ ಉಸಿರು ನಿಂತಮೇಲೂ ಇವುಗಳು ನಮ್ಮ ಹೆಸರನ್ನು ಈ ಸಮಾಜದಲ್ಲಿ ಸದಾ ಹಸಿರಾಗಿ ಇರಿಸುತ್ತವೆ…”✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading