Ad Widget

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಲ್ಲ ಖಾಯಂ ವೈದ್ಯಾಧಿಕಾರಿಗಳು – ಖಾಯಂ ವೈದ್ಯಾಧಿಕಾರಿಗಳನ್ನು ನೇಮಕಗೊಳಿಸದ ಸರ್ಕಾರ, ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರು ; ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಿದ ಗ್ರಾಮಸ್ಥರು ; ✍️ಉಲ್ಲಾಸ್ ಕಜ್ಜೋಡಿ

“ಊರಿನಲ್ಲೊಂದು ಸರ್ಕಾರಿ ಆರೋಗ್ಯ ಕೇಂದ್ರವಿರಬೇಕು, ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವರಕ್ಷಣೆಗೆ ಅದು  ಸಹಕಾರಿಯಾಗಬೇಕು” ಆದರೆ ಕೊಲ್ಲಮೊಗ್ರದಲ್ಲಿ ಕಲ್ಮಕಾರು, ಹರಿಹರ ಪಳ್ಳತ್ತಡ್ಕ, ಬಾಳುಗೋಡು ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಹಕಾರಿಯಾಗುವಂತೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಅಲ್ಲಿ ಖಾಯಂ ಅಥವಾ ಪರ್ಮನೆಂಟ್ ವೈದ್ಯಾಧಿಕಾರಿಗಳಿಲ್ಲದೇ ಸಾರ್ವಜನಿಕರು ಹಾಗೂ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಗಳೂ ಸರಿಯಾಗಿ ವೇತನ ಸಿಗದೇ ಇರುವ ಕಾರಣ ರಾಜೀನಾಮೆ ನೀಡಿದ್ದಾರೆ.
ಹೌದು… ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಳ್ಳತ್ತಡ್ಕ ಹಾಗೂ ಬಾಳುಗೋಡು ಗ್ರಾಮಗಳಿಗೆ ಇರುವ ಏಕೈಕ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಾದ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಲದೀಪ್.ಎಂ.ಡಿ ರವರು ಸರ್ಕಾರ ಆರು ತಿಂಗಳುಗಳಿಂದ ವೇತನ ಪಾವತಿ ಮಾಡದೇ ಇರುವ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇಲ್ಲದೇ ನಾಲ್ಕು ಗ್ರಾಮಗಳ ಜನರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಇಲ್ಲಿನ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಸಂಸದರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. “ಸುಸಜ್ಜಿತ ಆರೋಗ್ಯ ಕೇಂದ್ರವಿದ್ದರೂ ಪರ್ಮನೆಂಟ್ ವೈದ್ಯಾಧಿಕಾರಿಗಳಿಲ್ಲದೇ ಸಮಸ್ಯೆ ಉಂಟಾಗುತ್ತಿದ್ದು, ಆದ್ದರಿಂದ ರಾಜೀನಾಮೆ ನೀಡಿದ ವೈದ್ಯಾಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ವೇತನ ಪಾವತಿ ಮಾಡಿ ಮತ್ತೆ ಅವರನ್ನು ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳಾಗಿ ಮರುನೇಮಕಗೊಳಿಸಬೇಕು” ಎನ್ನುವ ಆಗ್ರಹದೊಂದಿಗೆ ಜ.10 ಶನಿವಾರದಂದು ಸಂಜೆ 4:00 ಗಂಟೆಗೆ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಳ್ಳತ್ತಡ್ಕ ಹಾಗೂ ಬಾಳುಗೋಡು ಗ್ರಾಮಗಳ ಗ್ರಾಮಸ್ಥರು ಒಟ್ಟುಗೂಡಿ ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ಸಮಾಲೋಚನಾ ಸಭೆ ಏರ್ಪಡಿಸಿದ್ದು, “ಸರ್ಕಾರ ಆದಷ್ಟು ಬೇಗ ಈ ಕುರಿತು ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ನಾಲ್ಕು ಗ್ರಾಮಗಳ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವರೇ ಕಾದುನೋಡಬೇಕಾಗಿದೆ.✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading