Ad Widget

“ಅಮರ ಸುದ್ದಿ ವಿಶೇಷ ವರದಿ” ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಡಿಕೆ ಫಸಲು – ಹಂತಹಂತವಾಗಿ ನಾಶವಾಗುತ್ತಿದೆ ಅಡಿಕೆ ಕೃಷಿ…!! ; ಭವಿಷ್ಯದಲ್ಲಿ ಸಂಪೂರ್ಣ ಅಡಿಕೆ ಕೃಷಿ ನಾಶವಾದರೆ ಜಿಲ್ಲೆಯ ಅರ್ಥವ್ಯವಸ್ಥೆಗೆ ಬೀಳಬಹುದೇ ಬಹುದೊಡ್ಡ ಹೊಡೆತ…!? ; ಅಪಾಯ ಸಂಭವಿಸುವ ಮೊದಲೇ ಎಲ್ಲರೂ ಒಂದಾಗಿ ಎಚ್ಚೆತ್ತುಕೊಂಡರೆ ಒಳಿತಲ್ಲವೇ…!? – ✍️ಉಲ್ಲಾಸ್ ಕಜ್ಜೋಡಿ

ನಮ್ಮ ಭಾರತ ದೇಶದಲ್ಲಿ ಸಾವಿರಾರು, ಲಕ್ಷಾಂತರ ಉದ್ಯಮ ಹಾಗೂ ಉದ್ಯೋಗಗಳಿವೆ. ಆದರೂ ದೇಶದ ಅಭಿವೃದ್ಧಿಗೆ ಉದ್ಯಮ ಹಾಗೂ ಉದ್ಯೋಗಗಳು ಎಷ್ಟು ಮುಖ್ಯವೋ ಕೃಷಿಯೂ ಕೂಡ ಅಷ್ಟೇ ಮುಖ್ಯ. ದೇಶದ ಗ್ರಾಮೀಣ ಭಾಗಗಳ ಬಹುತೇಕ ಜನರು ಇಂದಿಗೂ ಕೂಡ ಕೃಷಿಯನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ ಹಾಗೂ ಇಂದು ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸುತ್ತಿರುವವರೂ ಹಾಗೂ ಉದ್ಯೋಗಗಳನ್ನು ಮಾಡುತ್ತಿರುವವರೂ ಕೂಡ ರೈತ ಕುಟುಂಬಗಳಿಂದ ಅಥವಾ ಕೃಷಿ ಪರಿವಾರಗಳಿಂದ ಬಂದವರೇ ಆಗಿದ್ದಾರೆ. ನಮ್ಮಲ್ಲಿ ಕೆಲವು ಕೃಷಿಕರಲ್ಲಿ ಹತ್ತಾರು ಎಕರೆ ಜಮೀನುಗಳಿರಬಹುದು ಹಾಗೂ ಇನ್ನೂ ಕೆಲವು ಕೃಷಿಕರಲ್ಲಿ ಸ್ವಲ್ಪ ಪ್ರಮಾಣದ ಜಮೀನುಗಳು ಇರಬಹುದು. ಆದರೆ ಪ್ರತಿಯೊಬ್ಬರೂ ಕೂಡ ತಮ್ಮಲ್ಲಿರುವ ಜಮೀನುಗಳಲ್ಲಿ ಚಿಕ್ಕ ಪ್ರಮಾಣದಲ್ಲಿ ಅಥವಾ ದೊಡ್ಡ ಪ್ರಮಾಣದಲ್ಲಿ ಆಯಾಯಾ ಪ್ರದೇಶಗಳಿಗೆ ಅನುಗುಣವಾದ ಬೆಳೆಗಳನ್ನು ಬೆಳೆಯುತ್ತಾ ಕೃಷಿಯನ್ನು ಮಾಡಿ ತಮ್ಮ ಹಾಗೂ ತಮ್ಮ ಕುಟುಂಬದ ಬದುಕನ್ನು ನಡೆಸುವುದರೊಂದಿಗೆ ದೇಶದ ಆರ್ಥಿಕತೆಗೂ ಕೂಡ ಬಹುದೊಡ್ಡ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ನಮ್ಮಲ್ಲಿ ಕೃಷಿಕರು ಕೃಷಿಯನ್ನು ಕೇವಲ ಒಂದು ಉದ್ಯಮ ಅಥವಾ ಉದ್ಯೋಗವೆಂದು ಭಾವಿಸಿಲ್ಲ ಅಥವಾ ಪರಿಗಣಿಸಿಲ್ಲ, ಬದಲಾಗಿ ಅವರು ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ನುಡಿಗಟ್ಟಿನಂತೆ ತಾವು ಮಾಡುವ ಕೃಷಿಯನ್ನು, ತಮ್ಮ ಕೆಲಸವನ್ನು ಹಾಗೂ ತಮ್ಮ ಭೂಮಿಯನ್ನು ದೇವರಂತೆ ಕಾಣುತ್ತಾರೆ. ಹಾಗಾಗಿಯೇ ಭಾರತ ದೇಶವು ಕೃಷಿಪ್ರಧಾನ ರಾಷ್ಟ್ರವಾಗಿದೆ. ನಮ್ಮ ಕೃಷಿಕರು ಯಾವತ್ತಿಗೂ ಕೂಡ ಕೃಷಿ ಮಾಡುವುದು, ಬೆಳೆ ಬೆಳೆಯುವುದು ಕಷ್ಟವೆಂದು ಕೈಕಟ್ಟಿ ಕುಳಿತದ್ದೇ ಇಲ್ಲ, ಏಕೆಂದರೆ “ತಾವು ಮಾಡುವ ಕೃಷಿಯಲ್ಲಿ ಪ್ರತಿಕ್ಷಣವೂ ಖುಷಿಯನ್ನು ಕಾಣುವವರು ನಮ್ಮ ಕೃಷಿಕರು.” ಹಾಗೆಂದು ಕೃಷಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಅಥವಾ ಯಾವುದೇ ರೀತಿಯ ಸವಾಲುಗಳಿಲ್ಲ ಎಂದರ್ಥವಲ್ಲ. ವಿವಿಧ ರೀತಿಯ ಸವಾಲುಗಳಿಗೆ ಹಾಗೂ ಸಮಸ್ಯೆಗಳಿಗೆ ಈ ಕೃಷಿ ಕ್ಷೇತ್ರವೂ ಕೂಡ ಹೊರತಾಗಿಲ್ಲ. ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಕೂಡ ನೂರಾರು ಸಮಸ್ಯೆಗಳಿರುತ್ತವೆ, ಸಾವಿರಾರು ಸವಾಲುಗಳು ಬರುತ್ತಲೇ ಇರುತ್ತವೆ. ನಿಜವಾಗಿ ಹೇಳಬೇಕೆಂದರೆ ಉಳಿದೆಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಸಮಸ್ಯೆಗಳು, ಕಷ್ಟಗಳು ಹಾಗೂ ಸವಾಲುಗಳು ಕೃಷಿ ಕ್ಷೇತ್ರದಲ್ಲಿಯೇ ಕಂಡುಬರುತ್ತದೆ. ಏಕೆಂದರೆ ಇಲ್ಲಿ ಕೃಷಿಕರು ಸಾಲ-ಸೋಲ ಮಾಡಿ ಬೆಳೆ ಬೆಳೆದು ವರ್ಷಪೂರ್ತಿ ಅವುಗಳಿಗೆ ಪೋಷಕಾಂಶಗಳನ್ನು ನೀಡಿ ಪ್ರೀತಿಯಿಂದ ಆರೈಕೆ ಮಾಡುತ್ತಾರೆ, ಕೊನೆಗೆ ಇನ್ನೇನು ಫಸಲು ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ ಏನಾದರೂ ಒಂದು ರೋಗಗಳು ಅಥವಾ ಸಮಸ್ಯೆಗಳು ವಕ್ಕರಿಸಿ ಸಂಪೂರ್ಣ ಬೆಳೆಯನ್ನೇ ನಾಶಪಡಿಸಿಬಿಡುತ್ತವೆ. ಕೃಷಿಕರು ವರ್ಷಗಳ ಕಾಲ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿ ತಲೆಗೆ ಕೈಹೊತ್ತು ಕೂರುವ, ನಾಳೆಗಳ ಚಿಂತೆಯಲ್ಲಿ ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ಉಳಿದೆಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಸಮಸ್ಯೆಗಳು ಹಾಗೂ ಸವಾಲುಗಳು ಕೃಷಿ ಕ್ಷೇತ್ರದಲ್ಲಿಯೇ ಕಂಡುಬರುತ್ತವೆ. ಈಗ ನಾವು ಉದಾಹರಣೆಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನೇ ತೆಗೆದುಕೊಳ್ಳೋಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ಬೆಳೆಯುವ ಮುಖ್ಯ ಅಥವಾ ಪ್ರಧಾನ ಬೆಳೆಯೆಂದರೆ ಅದು “ಅಡಿಕೆ” ಹಾಗೂ ಜೊತೆಗೆ ಉಪಬೆಳೆಗಳಾಗಿ “ಕಾಳುಮೆಣಸು, ತೆಂಗು, ಕೊಕ್ಕೋ, ಬಾಳೆ, ರಬ್ಬರ್” ಈ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ನಾವು ಮುಖ್ಯ ಬೆಳೆಯಾಗಿರುವ ಅಡಿಕೆಯನ್ನು ತೆಗೆದುಕೊಂಡಾಗ ಒಂದು ರೀತಿಯಲ್ಲಿ ಹೇಳುವುದಾದರೆ ಸಂಪೂರ್ಣ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಅಥವಾ ಅರ್ಥವ್ಯವಸ್ಥೆ ನಿಂತಿರುವುದೇ ಈ ಅಡಿಕೆ ಕೃಷಿಯ ಅಥವಾ ಅಡಿಕೆ ಬೆಳೆಯ ಮೇಲೆ ಎಂದು ಹೇಳಬಹುದು. ಹೇಗೆಂದರೆ ಈಗ ಒಂದು ಜಿಲ್ಲೆಯ ಅರ್ಥವ್ಯವಸ್ಥೆ ಸರಿಯಾದ ರೀತಿಯಲ್ಲಿ ನಡೆಯಬೇಕೆಂದರೆ ಅಲ್ಲಿ ನಿರಂತರವಾಗಿ ಹಣದ ಚಲಾವಣೆ ನಡೆಯುತ್ತಿರಬೇಕು, ಏಕೆಂದರೆ ಒಂದರ್ಥದಲ್ಲಿ ಅರ್ಥವ್ಯವಸ್ಥೆಯ ಮೂಲವೇ ಈ ಹಣ, ಹಣದ ಚಲಾವಣೆ ಇಲ್ಲದಿದ್ದರೆ ಅರ್ಥವ್ಯವಸ್ಥೆ ಸಂಪೂರ್ಣ ಶೂನ್ಯ ಎಂದೇ ಹೇಳಬಹುದು. ಹಣದ ಚಲಾವಣೆ ನಿರಂತರವಾಗಿ ಸರಿಯಾದ ರೀತಿಯಲ್ಲಿ ನಡೆಯಬೇಕೆಂದರೆ ಅಲ್ಲಿ ವ್ಯಾಪಾರ-ವಹಿವಾಟುಗಳು ನಿರಂತರವಾಗಿ ಸರಿಯಾದ ರೀತಿಯಲ್ಲಿ ನಡೆಯಬೇಕು. ವ್ಯಾಪಾರ-ವಹಿವಾಟುಗಳು ನಿರಂತರವಾಗಿ ಸರಿಯಾದ ರೀತಿಯಲ್ಲಿ ನಡೆಯಬೇಕೆಂದರೆ ಅಲ್ಲಿ ನಾವುಗಳು ಮಾರಾಟ ಮಾಡಲು ಏನಾದರೂ ಉತ್ಪನ್ನಗಳನ್ನು ಅಥವಾ ಬೆಳೆಗಳನ್ನು ಬೆಳೆಯಬೇಕು, ಅವುಗಳನ್ನು ಮಾರಾಟ ಮಾಡಿ ಬಂದ ಲಾಭದಿಂದ ನಮಗೆ ಅವಶ್ಯಕತೆ ಇರುವ ಉತ್ಪನ್ನಗಳನ್ನು ನಾವು ಇತರೆ ಮಾರಾಟಗಾರರಿಂದ ಖರೀದಿಸಬೇಕು, ಹಾಗೂ ಈ ಮೂಲಕ ಜನರ ಮಧ್ಯೆ ಕೊಡು-ಕೊಳ್ಳುವಿಕೆಗಳು ನಿರಂತರವಾಗಿ ಸರಿಯಾದ ರೀತಿಯಲ್ಲಿ ನಡೆಯುತ್ತಿರಬೇಕು. ಏಕೆಂದರೆ ನಾವು ಈಗ ನಮ್ಮಲ್ಲಿರುವ ಉತ್ಪನ್ನಗಳನ್ನು ಅಥವಾ ನಾವು ಬೆಳೆದ ಬೆಳೆಗಳನ್ನು ಹೊರಜಗತ್ತಿಗೆ ಅಥವಾ ಆ ಉತ್ಪನ್ನದ ಅವಶ್ಯಕತೆ ಇರುವವರಿಗೆ ಮಾರಾಟ ಮಾಡಿದಾಗ ಅಥವಾ ಕೊಟ್ಟಾಗ ಮಾತ್ರ ಅಲ್ಲಿ ಹಣದ ಚಲಾವಣೆ ನಡೆಯುತ್ತದೆ, ಹಾಗೂ ನಮಗೆ ಹಣ ಸಂಪಾದನೆ ಆಗುತ್ತದೆ. ಹಾಗೂ ಆ ಹಣದ ಮೂಲಕ ನಾವು ನಮಗೆ ಅವಶ್ಯಕತೆ ಇರುವಂತಹ ಉತ್ಪನ್ನಗಳನ್ನು ಇತರರಿಂದ ಅಂದರೆ ಇತರೆ ಮಾರಾಟಗಾರರಿಂದ ಖರೀದಿಸಬಹುದು ಅಥವಾ ಕೊಳ್ಳಬಹುದು ಆ ಮೂಲಕ ಸರ್ಕಾರಕ್ಕೂ ಇಂತಿಷ್ಟು ಹಣ ತೆರಿಗೆಯ ರೂಪದಲ್ಲಿ ಪಾವತಿಯಾಗಿ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಅಲ್ಲವೇ..!? ಹಾಗೆಯೇ ಈಗ ನಾನು ಮೊದಲೇ ಹೇಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಉತ್ಪನ್ನ ಅಥವಾ ಪ್ರಧಾನ ಬೆಳೆ “ಅಡಿಕೆ.” ಈ ಅಡಿಕೆ ಕೃಷಿ ಮಾಡುವ ಅಥವಾ ಅಡಿಕೆ ಬೆಳೆ ಬೆಳೆಯುವ ಮೂಲಕ ಜಿಲ್ಲೆಯ ಕೃಷಿಕರು ತಲೆ-ತಲಾಂತರಗಳಿಂದ ತಮ್ಮ ವ್ಯಾಪಾರ-ವಹಿವಾಟುಗಳನ್ನು ನಡೆಸುವುದರೊಂದಿಗೆ ತಮ್ಮ ಬದುಕನ್ನೂ ನಡೆಸುತ್ತಾ ಬಂದಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ “ಈ ಅಡಿಕೆ ಕೃಷಿ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ಒಡನಾಡಿ ಹಾಗೂ ಜೀವನಾಡಿ ಎಲ್ಲವೂ ಆಗಿದೆ.” ಹಾಗೆಯೇ ಒಂದು ರೀತಿಯಲ್ಲಿ ಈ ಅಡಿಕೆ ಬೆಳೆ ದಕ್ಷಿಣ ಕನ್ನಡ ಜಿಲ್ಲೆಯ ಅರ್ಥವ್ಯವಸ್ಥೆಯ ಮೂಲವೂ ಆಗಿದೆ. ಅಂತಹ ಅಡಿಕೆ ಬೆಳೆಗೆ ಅಥವಾ ಅಡಿಕೆ ಕೃಷಿಗೆ ಅದು ಯಾವ ಕೆಟ್ಟ ದೃಷ್ಟಿ ಬಿದ್ದಿದೆಯೋ ತಿಳಿಯುತ್ತಿಲ್ಲ, ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಳದಿ ರೋಗ, ಎಲೆಚುಕ್ಕೆ ರೋಗ, ಕೊಳೆರೋಗ ಹಾಗೂ ನುಸಿರೋಗ ಸೇರಿದಂತೆ ವಿವಿಧ ರೀತಿಯ ರೋಗಗಳು ಈ ಅಡಿಕೆ ಕೃಷಿ ಅಥವಾ ಅಡಿಕೆ ಬೆಳೆಯ ಮೇಲೆ ಒಟ್ಟಾಗಿ ನಿರಂತರವಾಗಿ ದಾಳಿ ಮಾಡುತ್ತಿದ್ದು, ಸಂಪೂರ್ಣ ಅಡಿಕೆ ಕೃಷಿಯನ್ನು ಹಂತಹಂತವಾಗಿ ನಾಶಪಡಿಸುತ್ತಿವೆ. ಒಂದು ರೀತಿಯಲ್ಲಿ ಹೇಳುವುದಾದರೆ ಈ ರೋಗಗಳು ಕೇವಲ ಅಡಿಕೆ ಕೃಷಿಯ ಮೇಲಷ್ಟೇ ದಾಳಿ ಮಾಡುತ್ತಿಲ್ಲ, ಬದಲಾಗಿ ಅಡಿಕೆ ಬೆಳೆಗಾರರ ಮೇಲೆ, ಕೃಷಿಕರ ಕುಟುಂಬದ ಮೇಲೆ, ಅವರ ಬದುಕಿನ ಮೇಲೆ, ಅವರ ಕುಟುಂಬದ ಭವಿಷ್ಯದ ಮೇಲೆ ಹಾಗೂ ಮುಖ್ಯವಾಗಿ ಮತ್ತು ಅಂತಿಮವಾಗಿ ಇಡೀ ಜಿಲ್ಲೆಯ ಅರ್ಥವ್ಯವಸ್ಥೆಯ ಮೇಲೆ ನೇರವಾಗಿ ದಾಳಿ ಮಾಡುತ್ತಿವೆ, ಹಾಗೂ ಈ ರೋಗಗಳು ಸಂಪೂರ್ಣ ಅಡಿಕೆ ಕೃಷಿಯನ್ನು ಹಂತಹಂತವಾಗಿ ನಾಶಪಡಿಸುವ ಪ್ರಯತ್ನದಲ್ಲಿ ತೊಡಗಿವೆ. ಈ ರೀತಿ ದಿನದಿಂದ ದಿನಕ್ಕೆ ಈ ರೀತಿ ಅಡಿಕೆ ಕೃಷಿ ನಾಶವಾಗುತ್ತಾ ಹೋದರೆ ಮುಂದೊಂದು ದಿನ ಅಡಿಕೆ ಬೆಳೆಗಾರರ ಬದುಕಿನ ಮೇಲಷ್ಟೇ ಅಲ್ಲ ಇಡೀ ಜಿಲ್ಲೆಯ ಅರ್ಥವ್ಯವಸ್ಥೆಯ ಮೇಲೆ ಬಹುದೊಡ್ಡ ಹೊಡೆತ ಬೀಳುವುದರಲ್ಲಿ ಸಂದೇಹವೇ ಇಲ್ಲ ಎಂದೆನಿಸುತ್ತದೆ. ಏಕೆಂದರೆ ಅರ್ಥವ್ಯವಸ್ಥೆ ಎನ್ನುವುದು ಕೊಂಡಿಗಳಂತೆ ಅಥವಾ ಸಂಕೋಲೆಗಳಂತೆ ಒಂದಕ್ಕೊಂದು ಸೇರಿಕೊಂಡು ರೂಪುಗೊಂಡಿರುವ ಕಾರಣ ಇಲ್ಲಿ ವ್ಯಾಪಾರ-ವಹಿವಾಟುಗಳು ಸರಿಯಾದ ರೀತಿಯಲ್ಲಿ ನಡೆಯಲೇಬೇಕು. ಒಂದು ಕೊಂಡಿ ತಪ್ಪಿದರೆ ಸಂಪೂರ್ಣ ಅರ್ಥವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ಇರುತ್ತದೆ. ಅಡಿಕೆ ಬೆಳೆಗಾರರೇ ಹೆಚ್ಚಾಗಿರುವ, ಅಡಿಕೆ ಬೆಳೆಯೇ ಜನರ ಅಥವಾ ಕೃಷಿಕರ ಪ್ರಮುಖ ಆದಾಯ ಹಾಗೂ ಅರ್ಥವ್ಯವಸ್ಥೆಯ ಮೂಲವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅಡಿಕೆ ಕೃಷಿಯೇ ಸಂಪೂರ್ಣ ನಾಶವಾಗಿ ಹೋದರೆ ಜಿಲ್ಲೆಯ ಅರ್ಥವ್ಯವಸ್ಥೆಯ ಬಹುದೊಡ್ಡ ಕೊಂಡಿ ತಪ್ಪಿದಂತಾಗುತ್ತದೆ ಅಥವಾ ಕಳಚಿದಂತಾಗುತ್ತದೆ. ಆಗ ಕೇವಲ ಅಡಿಕೆ ಬೆಳೆಗಾರರ ಬದುಕಷ್ಟೇ ಸಂಕಷ್ಟಕ್ಕೆ ಸಿಲುಕುವುದಿಲ್ಲ, ಬದಲಾಗಿ ಜಿಲ್ಲೆಯ ಎಲ್ಲಾ ರೀತಿಯ ವ್ಯಾಪಾರಸ್ಥರು, ವ್ಯಾಪಾರ ಸಂಸ್ಥೆಗಳು, ಸಂಪರ್ಕ ಸಾರಿಗೆಗಳು, ವಿವಿಧ ರೀತಿಯ ಉದ್ಯಮಿಗಳು, ಉದ್ಯಮಗಳು ಸೇರಿದಂತೆ ಪ್ರತಿಯೊಂದು ಕೂಡ ಸಂಕಷ್ಟಕ್ಕೆ ಸಿಲುಕುತ್ತದೆ ಹಾಗೂ ಪ್ರತಿಯೊಬ್ಬರೂ ಕೂಡ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಈಗ ನಾವು ಯೋಚಿಸಬಹುದು “ಪ್ರತಿಯೊಂದಕ್ಕೂ ಕೂಡ ಏನಾದರೂ ಒಂದು ಪರ್ಯಾಯ ಮಾರ್ಗ ಇದ್ದೇ ಇರುತ್ತದೆ ಅಲ್ಲವೇ..? ಒಂದು ವೇಳೆ ಅಡಿಕೆ ಕೃಷಿ ಸಂಪೂರ್ಣ ನಾಶವಾದರೆ ಈ ಭಾಗದ ಕೃಷಿಕರು ಕಾಫಿ ಅಥವಾ ಇನ್ನಿತರ ಪರ್ಯಾಯ ಬೆಳೆಗಳನ್ನು ಬೆಳೆಯಬಹುದು ಅಲ್ಲವೇ” ಎಂದು. ಹೌದು ಬೆಳೆಯಬಹುದು ನಿಜ, ಸರ್ಕಾರವೂ ಅದನ್ನೇ ಹೇಳುತ್ತದೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂದು. ಆದರೆ ತಲೆತಲಾಂತರಗಳಿಂದ ಅಡಿಕೆ ಕೃಷಿಯನ್ನೇ ಮಾಡುತ್ತಾ, ಅಡಿಕೆ ಬೆಳೆಯ ಬಗ್ಗೆ ಇಂಚಿಂಚೂ ತಿಳಿದಿರುವ ಹಾಗೂ ಅಡಿಕೆ ಕೃಷಿಗೆ ಸಂಪೂರ್ಣ ಹೊಂದಿಕೊಂಡಿರುವ ಕೃಷಿಕರಿಗೆ ಅಡಿಕೆ ಕೃಷಿ ನಾಶವಾಗುತ್ತಿದೆ ಎಂದು ಒಮ್ಮಿಂದೊಮ್ಮೆಲೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಹೇಳಿದರೆ ಆ ಪರ್ಯಾಯ ಬೆಳೆಗಳ ಬಗ್ಗೆ ಅನುಭವ ಇದ್ದವರು ಬೆಳೆಯಬಹುದು, ಹಾಗೆಂದು ಎಲ್ಲರಿಗೂ ಹೊಸ ಬೆಳೆಗಳ ಬಗ್ಗೆ ಅನುಭವ ಇರುವುದಿಲ್ಲ. ಉದಾಹರಣೆಗೆ ಅಡಿಕೆ ಬೆಳೆ ಸಂಪೂರ್ಣ ನಾಶವಾಗುವ ಹಂತಕ್ಕೆ ತಲುಪಿದಾಗ ಸರ್ಕಾರ ಹೇಳಿದಂತೆ ಕಾಫಿ ಬೆಳೆಯ ಬಗ್ಗೆ ಅನುಭವ ಇರುವವರು ಆ ಬೆಳೆಯನ್ನು ಬೆಳೆಯಲು ಹೊರಟಾಗ ಕಾಫಿ ಬೆಳೆಯ ಬಗ್ಗೆ ಅನುಭವವೇ ಇಲ್ಲದವರಿಗೂ ಕೂಡ ಜೀವನ ನಿರ್ವಹಣೆಗಾದರೂ ಕಾಫಿ ಬೆಳೆಯನ್ನು ಬೆಳೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆಗ ಅವರಿಗೆ ಅತ್ತ ಅಡಿಕೆಯೂ ಇಲ್ಲ, ಇತ್ತ ಕಾಫಿ ಅಥವಾ ಪರ್ಯಾಯ ಬೆಳೆಯೂ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಆ ಮೂಲಕ ಅವರ ಬದುಕು ನೀರಿನಿಂದ ತೆಗೆದ ಮೀನಿನಂತೆ ಮತ್ತಷ್ಟು ದುಸ್ತರ ಹಾಗೂ ಕಷ್ಟಕರವಾಗುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಇನ್ನಾದರೂ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನೂ ಕೂಡ ಅಡಿಕೆ ಬೆಳೆಗಾರರ ಕಷ್ಟಗಳನ್ನು ಅರಿತುಕೊಂಡು ಅವರೊಂದಿಗೆ ಕೈಜೋಡಿಸಿ ಈ ಅಡಿಕೆ ಬೆಳೆಗೆ ಬಂದಿರುವ ಮಾರಕ ರೋಗಗಳನ್ನು ಹಾಗೂ ಆ ರೋಗಗಳನ್ನು ಹರಡುವ ಕೀಟಗಳನ್ನು ಅಥವಾ ಶಿಲೀಂಧ್ರಗಳನ್ನು ಶಾಶ್ವತವಾಗಿ ನಾಶಪಡಿಸುವ ಔಷಧಿಗಳನ್ನು ಹಾಗೂ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಹಿಡಿಯುವಂತೆ ಹಾಗೂ ಅಡಿಕೆ ಬೆಳೆಯನ್ನು ಮತ್ತೆ ಸಹಜ ಸ್ಥಿತಿಗೆ ಮರಳಿ ತಂದು ಅಡಿಕೆ ಬೆಳೆಗಾರರ ಹಿತವನ್ನು ಕಾಯುವಂತೆ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಎಚ್ಚರಿಸಿ-ಬಡಿದೆಬ್ಬಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ಬದುಕನ್ನು ಹಾಗೂ ಒಂದು ವೇಳೆ ಜಿಲ್ಲೆಯಾದ್ಯಂತ ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾದರೆ ಭವಿಷ್ಯದಲ್ಲಿ ಜಿಲ್ಲೆಯಾದ್ಯಂತ ಸಂಭವಿಸಬಹುದಾದ ಬಹುದೊಡ್ಡ ಆರ್ಥಿಕ ಹೊಡೆತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಕೂಡ ಕೃಷಿಕರ ಜೊತೆಗೂಡಿ ಬರಬೇಕಾಗಿದೆ ಹಾಗೂ ಅಡಿಕೆ ಬೆಳೆಗಾರರ ಪರವಾಗಿ ಧ್ವನಿ ಎತ್ತಲೇಬೇಕಾಗಿದೆ. “ಅಡಿಕೆ ಬೆಳೆ ನಾಶವಾಗುವ ಹಂತಕ್ಕೆ ಬಂತೆಂದು ಪರ್ಯಾಯ ಬೆಳೆಗಳನ್ನು ಬೆಳೆಯುವುದಕ್ಕಿಂತ ನಮಗೆ ತಲೆತಲಾಂತರಗಳಿಂದ ಅನ್ನವನ್ನು ನೀಡಿದಂತಹ ಈ ಅಡಿಕೆ ಬೆಳೆಯನ್ನು ರಕ್ಷಿಸಿಕೊಳ್ಳುವುದು ನಿಜವಾದ ನ್ಯಾಯ ಹಾಗೂ ಮಾನವೀಯತೆಯಲ್ಲವೇ..!?” ಅಂದು ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದ್ದ, ಯಾರೊಬ್ಬರೂ ಕೂಡ ಮನೆಯಿಂದ ಹೊರಗೆ ಕಾಲಿಡಂತೆ ಮಾಡಿ ಕಾಡಿದ ಕೊರೋನಾ ಎಂಬಂತಹ ಮಾರಕ ವೈರಸ್ ಗೂ ನಮ್ಮಲ್ಲಿ ಔಷಧಿ ಕಂಡುಹಿಡಿಯಲಾಗಿದೆ ಎಂದಾದರೆ ಅಡಿಕೆ ಬೆಳೆಗಳಿಗೆ ಬರುವಂತಹ ಈ ರೋಗಗಳಿಗೆ ಔಷಧಿಗಳನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಏಕೆ…!? “ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ, ಬದುಕಿನಲ್ಲೇ ಆಗಿರಲಿ, ಸಮಾಜದಲ್ಲೇ ಆಗಿರಲಿ ಅಥವಾ ನಮ್ಮ ಕೃಷಿಯಲ್ಲೇ ಆಗಿರಲಿ ಏನಾದರೂ ಸಮಸ್ಯೆಗಳು ಬಂದಿವೆ ಎಂದರೆ ಅವುಗಳಿಗೆ ಪರಿಹಾರವೂ ಕೂಡ ಇದ್ದೇ ಇರುತ್ತದೆ. ಆದರೆ ಆ ಪರಿಹಾರಗಳನ್ನು ಹುಡುಕುವ ಜಾಣ್ಮೆ ಹಾಗೂ ತಾಳ್ಮೆ ನಮ್ಮಲ್ಲಿರಬೇಕು ಅಷ್ಟೇ…”✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading