Ad Widget

ಲೇಖನ : ಬದುಕಿನ ಎಲ್ಲಾ ಕಷ್ಟಗಳಿಗೂ ಆತ್ಮಹತ್ಯೆಯೊಂದೇ ಪರಿಹಾರವೇ…!? – ಬದುಕಿನಲ್ಲಿ ಬರುವ ಕಷ್ಟಗಳಿಗೆ ಹೆದರಿ ಬದುಕನ್ನೇ ಅಂತ್ಯಗೊಳಿಸಿಕೊಳ್ಳುವುದು ಅದೆಷ್ಟು ಸರಿ…?? ; ✍️ಉಲ್ಲಾಸ್ ಕಜ್ಜೋಡಿ

ಕಳೆದ ಕೆಲವು ವರ್ಷಗಳಿಂದ ಕೆಲವರಿಗೆ ಈ ಆತ್ಮಹತ್ಯೆ ಎನ್ನುವುದು ತೀರಾ ಸರಳ-ಸಾಮಾನ್ಯ ವಿಷಯ ಎನಿಸಿಬಿಟ್ಟಂತಿದೆ ಎಂದೆನಿಸುತ್ತದೆ. ಏಕೆಂದರೆ ಈಗೀಗ ನಮಗೆ ಪ್ರತಿನಿತ್ಯ ಟಿ.ವಿ ಮಾಧ್ಯಮಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಆತ್ಮಹತ್ಯೆಯ ಸುದ್ದಿಗಳು ಕಾಣಿಸದೇ ಇರುವುದಿಲ್ಲ. ಇದನ್ನೆಲ್ಲಾ ಗಮನಿಸಿದಾಗ ಈಗಿನ ಕಾಲದಲ್ಲಿ ಕೆಲವರ ಮನಸ್ಥಿತಿಯೇ ಹಾಗಿದೆ ಎಂದೆನಿಸುತ್ತದೆ. “ಬದುಕಿನಲ್ಲಿ ಏನಾದರೂ ಕಷ್ಟಗಳು ಬಂದಾಗ ಆ ಕಷ್ಟಗಳು ಪರಿಹಾರವಾಗಬೇಕೆಂದರೆ ಆತ್ಮಹತ್ಯೆ ಒಂದೇ ದಾರಿ” ಎನ್ನುವಂತಹ ಒಂದು ಕೆಟ್ಟ ಯೋಚನೆ ಈಗಿನ ಕಾಲಘಟ್ಟದ ಕೆಲವು ದುರ್ಬಲ ಮನಸ್ಥಿತಿಯ ವ್ಯಕ್ತಿಗಳ ತಲೆಯಲ್ಲಿ ಕುಳಿತುಬಿಟ್ಟಿದೆ ಎಂದೆನಿಸುತ್ತದೆ. ಆದರೆ ವಾಸ್ತವ ಏನೆಂದರೆ “ಜೀವನದಲ್ಲಿ ಬರುವಂತಹ ಕಷ್ಟಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಎನ್ನುವಂತಿದ್ದರೆ ಲೆಕ್ಕ ಹಾಕುವುದಕ್ಕೂ ಈ ಭೂಮಿಯ ಮೇಲೆ ಯಾರೊಬ್ಬರೂ ಕೂಡ ಜೀವಂತವಾಗಿ ಉಳಿದಿರುತ್ತಿರಲಿಲ್ಲ.” ಏಕೆಂದರೆ ಕಷ್ಟಗಳು ಎನ್ನುವುದು ಕೇವಲ ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡುವವರ ಬದುಕಿನಲ್ಲಿ ಮಾತ್ರ ಬರುವುದಲ್ಲ, ಅವು ಈ ಜಗತ್ತಿನಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಒಂದಲ್ಲಾ ಒಂದು ರೂಪದಲ್ಲಿ ಬರುತ್ತಲೇ ಇರುತ್ತವೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಬದುಕಿನಲ್ಲಿ ಬಂದಂತಹ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಸರಿಯಾದ ಮಾರ್ಗಗಳನ್ನು ಹುಡುಕುತ್ತಾರೆ ಮತ್ತು ನಿರಂತರ ಪ್ರಯತ್ನದಿಂದ ಬಂದಂತಹ ಆ ಕಷ್ಟಗಳನ್ನು ಪರಿಹರಿಸಿಕೊಂಡು ಮುಂದೆ ಸಾಗುತ್ತಾರೆ. ಹಾಗೆಂದು ಬಂದಂತಹ ಆ ಕಷ್ಟಗಳು ಕೇವಲ ಒಂದೇ ದಿನದಲ್ಲಿ ಪರಿಹಾರವಾಗುತ್ತವೆ ಎಂದು ಹೇಳಲಾಗುವುದಿಲ್ಲ, ಆದರೆ ನಿರಂತರ ಪ್ರಯತ್ನ ಹಾಗೂ ಕಷ್ಟಗಳಿಂದ ಹೊರಬಂದು ಮುನ್ನುಗ್ಗುವ ದೃಢ ಮನಸಿದ್ದರೆ ಒಂದಲ್ಲಾ ಒಂದು ದಿನ ಆ ಕಷ್ಟಗಳು ಪರಿಹಾರ ಆಗಿಯೇ ಆಗುತ್ತವೆ, ಏಕೆಂದರೆ ಮನುಷ್ಯನ ಬದುಕಿನಲ್ಲಿ ಬರುವಂತಹ ಕಷ್ಟಗಳು ಯಾವತ್ತಿಗೂ ಮನುಷ್ಯನಿಗಿಂತ, ಮನುಷ್ಯನ ಯೋಚನೆಗಳಿಗಿಂತ ದೊಡ್ಡದಾಗಿರಲು ಸಾಧ್ಯವೇ ಇಲ್ಲ ಅಲ್ಲವೇ..!?. ಇಂದು ನಮಗೆ ನಮ್ಮ ಬದುಕಿನಲ್ಲಿ ಬಂದಂತಹ ಕಷ್ಟಗಳೇ ದೊಡ್ಡದು ಎಂದೆನಿಸಬಹುದು, ದೊಡ್ಡ ಬೆಟ್ಟವೇ ನಮ್ಮ ತಲೆಯ ಮೇಲೆ ಬಿದ್ದಂತೆ ಭಾಸವಾಗಬಹುದು ಅಥವಾ ನಮಗೆ ಮಾತ್ರ ಈ ರೀತಿಯ ಕಷ್ಟಗಳು ಬರುವುದು ಎಂದು ನಮ್ಮ ಮನಸ್ಸಿಗೆ ನೋವುಂಟಾಗಬಹುದು. ಆದರೆ ಒಂದೊಮ್ಮೆ ನಾವು ಹೊರ ಜಗತ್ತಿನ ಕಡೆಗೆ ದೃಷ್ಟಿ ಹಾಯಿಸಿ ನೋಡಿದಾಗ ನಮಗಿಂತಲೂ ಹೆಚ್ಚು ಕಷ್ಟದಲ್ಲಿ ಇರುವ ಅನೇಕರು ನಮಗೆ ಕಾಣಸಿಗುತ್ತಾರೆ. ಆವಾಗ ನಮಗೆ ಅವರ ಬದುಕಿನ ಕಷ್ಟಗಳ ಮುಂದೆ ನಮ್ಮ ಬದುಕಿನ ಕಷ್ಟಗಳು ಏನೇನೂ ಅಲ್ಲ ಎಂದೆನಿಸಿಬಿಡುತ್ತದೆ. ಆದ್ದರಿಂದ ನಮ್ಮ ಬದುಕಿನಲ್ಲಿ ಬರುವಂತಹ ಕಷ್ಟಗಳಿಂದ ನಮ್ಮನ್ನು ನಾವು ಮತ್ತಷ್ಟು ಸಧೃಡ ವ್ಯಕ್ತಿಗಳನ್ನಾಗಿ ರೂಪಿಸಿಕೊಳ್ಳಬೇಕೇ ಹೊರತು ನಮ್ಮನ್ನು ನಾವು ದುರ್ಬಲರು ಎಂದುಕೊಳ್ಳುತ್ತಾ ಭಯದಿಂದ ಹಿಂದೆ ಸರಿದು ಆತ್ಮಹತ್ಯೆಯಂತಹ ಕೆಟ್ಟ ಯೋಚನೆಗಳನ್ನು ಮಾಡಬಾರದು. ಏಕೆಂದರೆ ಕಷ್ಟಗಳು ಎಂದರೆ ನಮ್ಮ ಬದುಕಿನ ದಾರಿಯ ಕೊನೆಯಲ್ಲ, ಬದಲಾಗಿ ಅವು ನಮ್ಮೊಳಗಿನ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ನಮಗೆ ಪರಿಚಯಿಸಿ, ನಮ್ಮೊಳಗಿನ ನಮ್ಮನ್ನು ನಮಗೆ ತೋರ್ಪಡಿಸಿ ಈ ಕಷ್ಟಗಳಿಂದ ಆಚೆಗೆ ಇನ್ನೂ ಸುಂದರವಾದ ಬದುಕಿದೆ ಎಂಬುವುದನ್ನು ನಮಗೆ ನೆನಪಿಸುವ ಒಂದು ಸಂಕೇತವೇ ಈ ಕಷ್ಟಗಳು. ಆದರೆ ನಾವುಗಳು ಅದೆಷ್ಟು ದುರ್ಬಲ ಮನಸ್ಥಿತಿಯನ್ನು ಹೊಂದಿದ್ದೇವೆ ಎಂದರೆ ನಮ್ಮ ಬದುಕಿನಲ್ಲಿ ಕಷ್ಟಗಳು ಬಂದ ತಕ್ಷಣ ನಮ್ಮವರು-ತಮ್ಮವರು ಎಲ್ಲರನ್ನೂ ತೊರೆದು, ಪರಿವಾರದವರ ಪ್ರೀತಿಯನ್ನೂ ಮರೆತು ಒಮ್ಮಿಂದೊಮ್ಮೆಲೇ ಈ ಆತ್ಮಹತ್ಯೆ ಎಂಬಂತಹ ಘೋರ ತಪ್ಪು ನಿರ್ಧಾರದ ಕಡೆಗೆ ಮುಖಮಾಡಿಬಿಡುತ್ತೇವೆ. ಆದರೆ ನಾವು ಈ ಆತ್ಮಹತ್ಯೆ ಎನ್ನುವ ಕೆಟ್ಟ ನಿರ್ಧಾರದ ಕಡೆಗೆ ಮುಖಮಾಡುವ ಮೊದಲು ಒಂದು ಕ್ಷಣ ಶಾಂತವಾಗಿ ಕುಳಿತು “ನನ್ನ ತಂದೆ-ತಾಯಿ ನನಗಾಗಿ ಅದೆಷ್ಟು ಕಷ್ಟವನ್ನು ಪಟ್ಟಿದ್ದಾರೆ, ಅವರ ಜೀವನದ ಪ್ರತೀ ಕ್ಷಣವನ್ನು ನನಗಾಗಿ ಬದುಕಿರುವ ಅವರು ನನ್ನ ಬದುಕನ್ನು ರೂಪಿಸುವ ಸಲುವಾಗಿ ಅವರ ಬದುಕನ್ನೇ ಮುಡಿಪಾಗಿಟ್ಟು ನನ್ನ ಬದುಕಿನ ಬಗ್ಗೆ ಅದೆಷ್ಟು ಆಸೆ-ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇನ್ನು ನನ್ನ ಅಕ್ಕ-ತಂಗಿ, ಅಣ್ಣ-ತಮ್ಮ, ಬಂಧು-ಬಳಗದವರು ನನ್ನ ಮೇಲೆ ಅದೆಷ್ಟು ಪ್ರೀತಿಯನ್ನು ಇಟ್ಟಿದ್ದಾರೆ. ನನ್ನ ಒಂದು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ನನ್ನನ್ನು ಇವರೆಲ್ಲರಿಂದ ದೂರ ಮಾಡುತ್ತದೆ ಹಾಗೂ ಇವರೆಲ್ಲರಿಗೂ ಜೀವನಪರ್ಯಂತ ಮರೆಯಲಾಗದ ಬಹುದೊಡ್ಡ ನೋವನ್ನು ನೀಡುತ್ತದೆ ಎಂದಾದರೆ ನಾನು ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಅದೆಷ್ಟು ಸರಿ..!? ನಾನು ಈ ರೀತಿ ಆತ್ಮಹತ್ಯೆಯಂತಹ ಕೆಟ್ಟ ಯೋಚನೆಯನ್ನು ಮಾಡುವ ಬದಲು, ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಬದುಕು ಎಂದರೆ ಏನೆಂಬುವುದನ್ನು ನನಗಿಂತ ಹೆಚ್ಚು ಹಾಗೂ ನನಗಿಂತ ಚೆನ್ನಾಗಿ ಅರಿತು ಬದುಕಿನುದ್ದಕ್ಕೂ ಅದೆಷ್ಟೋ ಕಷ್ಟ-ನೋವುಗಳನ್ನು ಎದುರಿಸುತ್ತಾ ಬಂದಿರುವ ನನ್ನ ತಂದೆ-ತಾಯಿಗೆ ನನ್ನ ಬದುಕಿನಲ್ಲಿ ಬಂದಂತಹ ಕಷ್ಟಗಳನ್ನು ಹೇಳಿಕೊಂಡರೆ ಅವರು ಆ ಕಷ್ಟಗಳನ್ನು ಪರಿಹಾರ ಮಾಡಬಹುದಲ್ಲವೇ..!? ಬದುಕಿನಲ್ಲಿ ಕಷ್ಟಗಳು ಇವೆ ಎಂದಮೇಲೆ ಅವುಗಳಿಗೆ ಪರಿಹಾರವೂ ಕೂಡ ಇರಲೇಬೇಕು ಅಲ್ಲವೇ..!?” ಎಂದು ನಾವು ಯೋಚಿಸಲೇಬೇಕು. ಏಕೆಂದರೆ ಇಷ್ಟು ದೊಡ್ಡ ಬದುಕಿನಲ್ಲಿ, ಇಷ್ಟೊಂದು ಅಮೂಲ್ಯವಾದ ಜೀವನದಲ್ಲಿ ಬಂದಂತಹ ಚಿಕ್ಕ ಚಿಕ್ಕ ಕಷ್ಟಗಳಿಗೆ ಹೆದರಿ ನಮ್ಮನ್ನು ಪ್ರೀತಿಸುವ ನಮ್ಮ ತಂದೆ-ತಾಯಿಯನ್ನು, ಒಡಹುಟ್ಟಿದವರನ್ನು, ಪರಿವಾರದವರನ್ನು ಬಿಟ್ಟು ಈ ಆತ್ಮಹತ್ಯೆ ಎನ್ನುವ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡು ಅವರ ಮನಸ್ಸಿಗೆ ಎಂದೂ ಕರಗದೇ ಇರುವಂತಹ ಬಹುದೊಡ್ಡ ನೋವನ್ನು ನೀಡಿ ಜೀವನಪರ್ಯಂತ ಅವರು ನಮ್ಮ ನೆನಪಿನಲ್ಲಿ ಸುರಿಸುವ ಕಣ್ಣೀರಿಗೆ ನಾವು ಕಾರಣರಾಗಿ ನಮಗಿರುವ ಒಂದು ಸುಂದರವಾದ ಬದುಕನ್ನು ಅರ್ಧದಲ್ಲೇ ಬಿಟ್ಟು ಈ ಭೂಮಿಯಿಂದ ಹೊರಟು ಹೋಗುವುದು ನಾವು ಮಾಡುವ ಅತೀ ಕೆಟ್ಟ ನಿರ್ಧಾರ, ಬಹುದೊಡ್ಡ ತಪ್ಪು, ಘೋರ ಅಪರಾಧ ಅಲ್ಲವೇ…!?✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading