Ad Widget

ಸರ್ವಕಾಲದಲ್ಲೂ ಸಲ್ಲುವ “ಸರ್ವಪಲ್ಲಿ”

✍️ಡಾ| ಮುರಲೀ ಮೋಹನ್ ಚೂಂತಾರು

ನಮ್ಮ ದೇಶ ಕಂಡಂತಹ ಅತ್ಯಂತ ಸಂಭಾವಿತ, ಸರಳ, ಸಜ್ಜನ ತತ್ವಜ್ಞಾನಿ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ದೇಶದೆಲ್ಲೆಡೆ ‘ಶಿಕ್ಷಕರ ದಿನಾಚರಣೆ’ ಆಚರಿಸಲಾಗುತ್ತಿದೆ. 1962 ರಲ್ಲಿ ಅವರು ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾದಾಗ  ಅವರ ಹಿತೈಷಿಗಳು, ಸ್ನೇಹಿತರು ಮತ್ತು ಶಿಷ್ಯಂದಿರು ಅವರಲ್ಲಿ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಭಿನ್ನವಿಸಿಕೊಂಡಾಗ ನಯವಾಗಿ ತಿರಸ್ಕರಿಸಿ, ಅದರ ಬದಲಾಗಿ ಪ್ರತಿ ವರ್ಷ ಅವರ ಹುಟ್ಟು ಹಬ್ಬದಂದು ಶಿಕ್ಷಕರ ದಿನ ಎಂಬುದಾಗಿ ಆಚರಿಸಿ ಎಂದು ಸಲಹೆ ನೀಡಿದರು. ಅದರ ಪರಿಣಾಮವಾಗಿ ಸೆಪ್ಟೆಂಬರ್ 5 ಶಿಕ್ಷಕರ ದಿನ ಎಂದು ಚರಿತ್ರೆಗಳಲ್ಲಿ ದಾಖಲಾಯಿತು. ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಓರ್ವ ಅತ್ಯುತ್ತಮ ಶಿಕ್ಷಕ. ತತ್ವಜ್ಞಾನಿ ಮತ್ತು ದೇಶದ ಶಿಕ್ಷಣ ವ್ಯವಸ್ಥೆಗೆ ಅವರು ಅಮೋಘ ಕೊಡುಗೆ ನೀಡಿದ್ದರು. ಸ್ವತಂತ್ರ ಭಾರತದ ಮೊದಲ ಉಪ ರಾಷ್ಟ್ರಪತಿಯಾಗಿ ಅವರು ಸೇವೆ ಸಲ್ಲಿಸಿದ್ದರು.
ಒಂದು ದೇಶದ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಆರೋಗ್ಯ ಕ್ಷೇತ್ರವನ್ನು ಅವಲಂಭಿಸಿದೆ. ಮೌಲ್ಯಭರಿತ ಶಿಕ್ಷಣ ಮತ್ತು ಮೂಲಭೂತ ಆರೋಗ್ಯ ಸೌಲಭ್ಯ ದೊರಕಿದಲ್ಲಿ ಮಾತ್ರ ಆರೋಗ್ಯವಂತ ಪ್ರಜೆಗಳು ನಿರ್ಮಾಣವಾಗಿ ದೇಶದ ಉನ್ನತಿಗೆ ಕಾರಣಭೂತರಾಗಿರುತ್ತಾರೆ. ದೇಶದ ಸತ್ಪ್ರಜೆಗಳು ಸೃಷ್ಟಿಯಾಗಬೇಕಾದರೆ ಅಲ್ಲಿನ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ದೊರಕಲು ಉತ್ತಮ ಶಿಕ್ಷಕರ ಅಗತ್ಯವಿದೆ. ಇಂತಹಾ ದೂರದೃಷ್ಟಿ ಉಳ್ಳ ಶಿಕ್ಷಕರೇ ದೇಶದ ಬೆನ್ನೆಲುಬು. ಶಿಕ್ಷಣ ವ್ಯವಸ್ಥೆ, ಶಿಕ್ಷಕರ ಮತ್ತು ಶಿಕ್ಷಣಾರ್ಥ ಇವರುಗಳ ನಡುವಿನ ಉತ್ತಮ ಮಟ್ಟದ ವ್ಯವಸ್ಥಿತ, ಅರ್ಥಪೂರ್ಣ, ಕ್ರಮಬದ್ಧ ಸಂಬಂಧವೇ ದೇಶದ ಪ್ರಗತಿಗೆ ಪೂರಕ ಎಂದು ಜಗತ್ತಿಗೆ ಸಾರಿ ಹೇಳಿದ ಮಹಾನುಭಾವ ಮತ್ತು ಮಹಾನ್ ತತ್ವಜ್ಞಾನಿ ಶಿಕ್ಷಣ ತಜ್ಞ ಶ್ರೀ ಸರ್ವಪಲ್ಲಿ ರಾಧಾ ಕೃಷ್ಣನ್ ‘ಸಾ ವಿಧ್ಯಾ ಯಾ ಮುಕ್ತಾಯೇ’ ಎಂಬ ಮಾತಿನಂತೆ ನಿಜವಾದ ವಿದ್ಯೆ ಮನುಷ್ಯನನ್ನು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಸೆಳೆಯುತ್ತದೆ ಎಂದು ಉಪನಿಷತ್‍ಗಳಲ್ಲಿ ವರ್ಣಿಸಿದ್ದಾರೆ. ಇದನ್ನು ಜಗತ್ತಿಗೆ ಸಾರಿ ಹೇಳಿ, ಮಕ್ಕಳ ಪರಿಪೂರ್ಣ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಬಹುಮುಖ್ಯ ಭೂಮಿಕೆ ವಹಿಸಬೇಕು ಎಂದು ಬಲವಾಗಿ ನಂಬಿ ಪ್ರತಿಪಾದಿಸಿ ಸಾಧಿಸಿ ತೋರಿಸಿದರು ಶ್ರೀ ಸರ್ವಪಲ್ಲಿ ರಾಧಾಕೃಷ್ಣ.
ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888ರ ಸೆಪ್ಟೆಂಬರ್ 5 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಶ್ರೀ ಸರ್ವಪಲ್ಲಿ ವೀರಸ್ವಾಮಿ ಅವರ ಮಗನಾಗಿ ಜನಿಸಿದರು. ಸರ್ವಪಲ್ಲಿ ಎನ್ನುವುದು ಅವರ ಮನೆತನದ ಹೆಸರು. ಕಡು ಬಡತನ ಇದ್ದರೂ, ವಿದ್ಯಾರ್ಥಿ ವೇತನದ ಹಣದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು ಆಗಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದಲ್ಲಿ ಬಿ.ಎ ಮತ್ತು ಎಂ.ಎ ಪದವಿ ಪಡೆದರು. ಸ್ನಾತಕೋತ್ತರ ಪದವಿಯಲ್ಲಿ ಅವರು ಮಂಡಿಸಿದ ಪ್ರಬಂಧ ದಿ ಎಥಿಕ್ಸ್ .ಆಪ್ ವೇದಾಂತ್” ಬಹಳ ಖ್ಯಾತಿ ಪಡೆಯಿತು. 1909ರಲ್ಲಿ ಮದ್ರಾಸ್ ಪ್ರೆಸಿಡೆಸ್ಸಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. 1918 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ತತ್ವಜ್ಞಾನ ಉಪನ್ಯಾಸಕರಾಗಿ ಗಮನ ಸೆಳೆದರು. 1931 ರಲ್ಲಿ ಆಂಧ್ರ ವಿಶ್ವ ವಿದ್ಯಾಲಯದ ಉಪ ಕುಲಪತಿ ಮತ್ತು 1939 ರಲ್ಲಿ ಬನಾರಸ್ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಮತ್ತು ಚೇತೋಹಾರಿ ಬದಲಾವಣೆ ತಂದರು. ನಂತರ 1949 ರಲ್ಲಿ ಸೋವಿಯತ್ ಯೂನಿಯನ್‍ಗೆ ಭಾರತದ ರಾಯಭಾರಿಯಾಗಿ ಗಮನಸೆಳೆದರು. ಕೊನೆಗೆ 1960 ರಲ್ಲಿ ಉಪರಾಷ್ಟ್ರಪತಿಯಾಗಿ 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಗಮನಸೆಳೆದರು. ಅವರ ಜೀವನದ ಪ್ರತಿ ನಿಮಿಷವನ್ನು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ವ್ಯಯಿಸಿದರು. ಎಂದಿಗೂ ತಾನು ನಂಬಿದ ತತ್ವ ಆದರ್ಶಗಳನ್ನು ಬಲಿಕೊಡದೆ ತಮ್ಮ ಧ್ಯೇಯ ಉದ್ದೇಶಗಳನ್ನು ಸಮರ್ಥವಾಗಿ ಪ್ರತಿಪಾಧಿಸಿ ಒರ್ವ ಮಾದರಿ ಶಿಕ್ಷಕ ಮತ್ತು ತತ್ವಜ್ಞಾನಿಯಾಗಿ ವಿಶ್ವದ ಗಮನ ಸೆಳೆದರು. ಅವರು ಹಾಕಿದ ತತ್ವ ಆದರ್ಶಗಳನ್ನು ಅನುಸರಿಸಿ ಅನುಷ್ಠಾನಕ್ಕೆ ತರುವುದೇ ನಾವು. ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಾಗಲಾರದು. ಇಂದಿನ ಈ ದಿನ ಎಲ್ಲ ಶಿಕ್ಷಕರು ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಷಿಸಿ ಮಗದೊಮ್ಮೆ ತಮ್ಮ ವೃತ್ತಿಗೆ ಪುನರ್ ಸಮರ್ಪಣೆ ಮಾಡಿಕೊಳ್ಳುವ ದಿನವೆಂದರೂ ಅತಿಶಯೋಕ್ತಿಯಾಗದು. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಮನುಷ್ಯನನ್ನಾಗಿ ಮಾಡಿದ ಶಿಕ್ಷಕರನ್ನು ಸ್ಮರಿಸಿ, ಗೌರವಿಸಿ, ಆಚರಿಸುವ ದಿನವೂ ಆಗಿದೆ. ವರ್ಷದಲ್ಲಿ ಒಮ್ಮೆಯಾದರು ನಮಗೆ ಶಿಕ್ಷಣ ನೀಡಿದ ಗುರುಗಳನ್ನು ನೆನೆಸದಿದ್ದರೆ ಅದು ಖಂಡಿತ ಅಕ್ಷಮ್ಯ ಅಪರಾಧ. ಒಬ್ಬ ವ್ಯಕ್ತಿ ಪ್ರಾಥಮಿಕ ಶಾಲೆಯಿಂದ ಪಧವೀದರನಾಗುವ ಹೊತ್ತಿಗೆ 100 ರಿಂದ 150 ಶಿಕ್ಷಕರಿಂದ ಪಾಠ ಭೋದಿಸಿಕೊಂಡಿರುತ್ತಾನೆ. ಅವರಲ್ಲಿ ಕನಿಷ್ಟ 5 ರಿಂದ 10 ಮಂದಿ ಶಿಕ್ಷಕರನ್ನು ಸ್ಮರಿಸಲಾಗದಿದ್ದರೆ ಅದು ನಮ್ಮ ಶಿಕ್ಷಣ ವ್ಯವಸ್ಥೆಯ ದೌರ್ಬಲ್ಯವೇ ಸರಿ.
ಬದಲಾದ ಶಿಕ್ಷಣ ವ್ಯವಸ್ಥೆ: ನಮ್ಮ ಪ್ರಾಚೀನ ಸನಾತನ ಸಂಸ್ಕøತಿಯಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನರ್ಮ ಎಂದು ವೇದ ಉಪನೀಷತ್‍ಗಳಲ್ಲಿ ಗುರುವನ್ನು ವರ್ಣಿಸಲಾಗಿದೆ. ಅದೇ ರೀತಿ ಮಾತೃ ದೇವೋಭವ ಪಿತೃ ದೇವೋಭವದ ಜೊತೆ ಜೊತೆಗೆ ಆಚಾರ್ಯ ದೇವೋಭವ ಎಂದು ಸಾರಿ ಸಾರಿ ಹೇಳುತ್ತದೆ.
ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಅತ್ಯಂತ ಪವಿತ್ರವಾದುದು ಮತ್ತು ಅದು ಯಾವತ್ತೂ ವ್ಯಾಪಾರೀಕರಣವಾಗ ಬಾರದು ಆದರೆ ವಿಪರ್ಯಾಸವೆಂದರೆ ಈಗ ಗುರು ಶಿಷ್ಯನ ಸಂಬಂಧ ಮೌಲ್ಯ ಆಧಾರಿತವಾಗಿ ಬದಲಾಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ. . ಇಂದಿನ ವ್ಯಾಪಾರೀಕರಣಗೊಂಡ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂಬ ಪುರಂದರ ದಾಸರ ಉಕ್ತಿ ಬದಲಾಗಿ ಪುಂಗಿದಾಸರು ಹೇಳುವ ಗುರುವೇ ಗುಲಾಮನಾಗುವ ತನಕ ದೊರಕದಣ್ಣ ಮುಕ್ತಿ ಎಂದು ಮಾರ್ಪಾಡಾಗಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಸಕ್ತ  ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು. ಇವತ್ತು ಶಿಕ್ಷಣ ಒಂದು ಬಹುದೊಡ್ಡ ಉದ್ಯಮವಾಗಿ ಬದಲಾಗಿದೆ. ಇಲ್ಲಿ ವಿದ್ಯಾರ್ಹತೆಗೆ ಬರುವ ವಿದ್ಯಾರ್ಥಿ ಒಬ್ಬ ಶಿಕ್ಷಣಾರ್ಥಿಯಾಗಿರದೆ ಒಬ್ಬ ಗ್ರಾಹಕನಾಗಿ ಬದಲಾಗಿದ್ದಾರೆ. ಎಲ್ಲವೂ ಕೊಟ್ಟು ಕೊಳ್ಳುವ ವ್ಯವಹಾರವಾಗಿ ಬದಲಾಗಿದೆ. ಇದು ನಮ್ಮ ಶಿಕ್ಷಣ ಕ್ಷೇತ್ರದ ಬಹುದೊಡ್ಡ ದುರಂತ. ಇಲ್ಲಿ ಶಿಕ್ಷಣ ಸಂಸ್ಥೆ ನಡೆಸುವವರು ಯಶಸ್ವಿ ಉದ್ದಿಮೆದಾರರಾಗಿ ಮಿಂಚುತ್ತಿದ್ದಾರೆ ಮತ್ತು ಸಮಾಜಕ್ಕೆ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ವಿದ್ಯಾರ್ಥಿಗಳ ಸಂಸ್ಕಾರವಿಲ್ಲದ, ಮೌಲ್ಯವಿಲ್ಲದ ಸರಕುಗಳಾಗಿ ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ
ಕೊನೆಮಾತು : ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಸಂಬಂಧ ಮೊದಲಿನಂತೆ ಪವಿತ್ರವಾಗಿರಬೇಕು. ಶಿಕ್ಷಣ ಸೊರಗಬಾರದು. ಶಿಕ್ಷಕ ದುರ್ಬಲನಾಗಬಾರದು. ಶಿಕ್ಷಣವೇ ವಿರ್ಜಂಭಿಸಬೇಕು ಮತ್ತು ಶಿಕ್ಷಕರಿಗೆ ಹೆಚ್ಚಿನ ಅಧಿಕಾರ ಮತ್ತು ಸವಲತ್ತು ನೀಡಬೇಕು. ಶಿಕ್ಷಕರು ಬರೀ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಬೇಕು. ಅವರಿಗೆ ಜನಗಣತಿ  ಜಾತಿಗಣತಿ ಅಭಿಯಾನ, ಹೀಗೆ ಎಲ್ಲೆಂದರಲ್ಲಿ ಕಳುಹಿಸಬಾರದು ಅವರನ್ನು ನಾಲ್ಕು ಕೋಣೆಗಳ ನಡುವೆ ಮಕ್ಕಳೊಂದಿಗೆ ಇರುವಂತೆ ಮಾಡಬೇಕು. ಅವರಿಗೆ ಸಂಪೂರ್ಣ ಸ್ವಾತಂತ್ರ ನೀಡಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಿಸುವ ಅಧಿಕಾರ ನೀಡಬೇಕು. ಶಿಕ್ಷಕರನ್ನು ನಾವೀಗ ಸುಗಮಕಾರರು (Felicitator)    ಎಂದು ಬದಲು ಮಾಡಿ ಅವರನ್ನು ಒಬ್ಬ ಏಜೆಂಟ್ ತರ ಬಳಸುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳ ಭೋದನೆ ಹಾಗೂ ಶಿಕ್ಷಣ ಬರೀ ಶಾಲಾ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಬಾರದು. ಜೀವನದ ಶಿಕ್ಷಣ, ಕೌಶಲ್ಯಭಿವೃದ್ಧಿಗೂ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ದಾರಿಯೆರೆಯಬೇಕು ಇಲ್ಲವಾದಲ್ಲಿ ಬರೀ ಶಿಕ್ಷಣದಿಂದ ವಿಜ್ಞಾನಿಗಳನ್ನು, ವೈದ್ಯರನ್ನು, ಇಂಜಿನಿಯರ್‍ಗಳನ್ನು ಸೃಷ್ಟಿಸಿ ಚಂದ್ರಲೋಕ, ಮಂಗಳಗ್ರಹಕ್ಕೆ ಹೋಗಲು ಮಾತ್ರ ಸಾಧ್ಯವಾಗಬಹುದು. ಸಾಯುತ್ತಿರುವ ಮನುಷ್ಯನನ್ನು ಬದುಕಿಸಬಹುದು ಮತ್ತು ಸಾವನ್ನು  ಮುಂದೂಡಬಹುದು. ಆದರೆ ಜಾತಿ ಧರ್ಮದ ಗೋಡೆದಾಟಲು ಸಾಧ್ಯವಾಗದು. ಪ್ರೀತಿ, ಪ್ರೇಮ, ಸಾಮರಸ್ಯ, ಶಾಂತಿಯ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ ಅಲ್ಲಿ ಶಿಕ್ಷಣ ಸೋತಿದೆ ಎಂದರ್ಥ, ಶಿಕ್ಷಣ ಸೋತು, ಶಿಕ್ಷಕ ಸೊರಗಿದರೆ, ದೇಶದ ನೈತಿಕತೆಯ ಅಧಃಪತನ ನಿಶ್ಚಿತ. “ ಮುಂದೆ ಗುರಿ ಹಿಂದೆ ಗುರು ಇದ್ದಲ್ಲಿ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನವಾಗಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿಸಲು ಸಮರ್ಪಕ ಶಿಕ್ಷಣದ ……ಅನಿವಾರ್ಯತೆ ಇದೆ. ಅಂತಹಾ ಶಿಕ್ಷಣದ ಪರಿಕಲ್ಪನೆಯನ್ನು ಕಂಡ ಶ್ರೀ ಸರ್ವಪಲ್ಲಿ ರಾಧಾಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದಲ್ಲಿ  ಶಿಕ್ಷಕರು ಮತ್ತಷ್ಟು ಸಮರ್ಪಣಭಾವದಿಂದ ಕೆಲಸ .ಮಾಡಲೇಬೇಕಾದ ಅನಿವಾರ್ಯತೆಯೂ ಇದೆ ಇದನ್ನು ಅರಿತು ಅಳವಡಿಸಿಕೊಂಡಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗಬಹುದು.
ಡಾ| ಮುರಲೀ ಮೋಹನ್ ಚೂಂತಾರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading