
ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಣಗೊಂಡಿರುವ ಸಂಜೀವಿನಿ ಕಟ್ಟಡವನ್ನು ಏ.10 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು.



ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು “ಸಂಜೀವಿನಿ ಸಂಘ ಅನ್ನುವಂತಹದ್ದು ಮಹಿಳೆಯರ ಧ್ಯೇಯೋದ್ದೇಶಕ್ಕಾಗಿ ಇರುವಂತಹದ್ದು, ಮುಂದಿನ ದಿನಗಳಲ್ಲಿ ಮಂಡೆಕೋಲು ಸಂಜೀವಿನಿ ಸಂಘವು ಒಳ್ಳೆಯ ಕೆಲಸಗಳನ್ನು ಮಾಡಿ ಪ್ರಧಾನಿ ಮೋದಿಯವರು ತಮ್ಮ ಮನ್-ಕಿ-ಬಾತ್ ಕಾರ್ಯಕ್ರಮದಲ್ಲಿ ಮಂಡೆಕೋಲು ಗ್ರಾಮದ ಸಂಜೀವಿನಿ ಸಂಘವನ್ನು ಉಲ್ಲೇಖಿಸುವಂತಾಗಲಿ ಹಾಗೂ ಎಲ್ಲಾ ಸಂಜೀವಿನಿ ಕಟ್ಟಡಗಳಿಂತ ಇದು ಅತ್ಯಂತ ದೊಡ್ಡದಾಗಿದ್ದು, ಬಹಳ ಚೆನ್ನಾಗಿದೆ” ಎಂದು ಪ್ರಶಂಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗುದ್ದಲಿಪೂಜೆ ನಡೆದು ಇದೀಗ ಲೋಕಾರ್ಪಣೆಗೊಂಡಿದ್ದು, ಈ ಕಟ್ಟಡದ ಸ್ಥಳಕ್ಕಾಗಿ ಅಡ್ಡಂತಡ್ಕ ದೇರಣ್ಣ ಗೌಡರು ಶ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಪಂಚಾಯತ್ ನಿಕಟಪೂರ್ವ ಅಧ್ಯಕ್ಷರು, ಸದಸ್ಯರುಗಳು, ಸೊಸೈಟಿ ಉಪಾಧ್ಯಕ್ಷರು, ನಿರ್ದೇಶಕರುಗಳು, ಮಾಜಿ ಅಧ್ಯಕ್ಷರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಉದಯ ಆಚಾರ್ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ವಿನುತಾ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶುಭ ಹಾರೈಸಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಭಾರತಿ ಉಗ್ರಾಣಿಮನೆ ವಂದಿಸಿದರು.