Ad Widget

50 ಸಂಭ್ರಮಾಚರಣೆಯಲ್ಲಿ ‘ಭಾವ ತೀರ ಯಾನ’

ಸಿನಿಮಾ ನಮ್ಮನ್ನು ಹೊಸ ಜಗತ್ತಿಗೆ ಕರೆದೊಯ್ಯುವ, ಮನರಂಜನೆಯನ್ನು ಕೊಡುವ ಅಥವಾ ನಾವು ಟಾಕೀಸ್‌ಲ್ಲಿ ಕುಳಿತು ವೀಕ್ಷಿಸುವ, ದೂರದರ್ಶನದಲ್ಲಿ ವೀಕ್ಷಿಸುವ ಚಿತ್ರ ಅಂತ ಅಂದುಕೊಂಡಿದ್ದೇವೆ. ಆದರೆ ಸಿನಿಮಾ ಕೂಡ ಒಂದು ರೀತಿಯಲ್ಲಿ ನಮಗೆ ಶಿಕ್ಷಣ ಮಾಧ್ಯಮವಾಗಿದೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿ ನಾವು ಕಾಣದ ದೇಶಗಳನ್ನು, ಅಲ್ಲಿಯ ವೈಶಿಷ್ಟ್ಯಗಳನ್ನು, ಅವರ ಸಂಸ್ಕೃತಿ -ಸಂಪ್ರದಾಯ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ, ಅಂತೆಯೇ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಜನರಿಗೆ ಅರ್ಥ್ರೈಸಿಕೊಳ್ಳಲು ಕೂಡ ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾಗಳು ನಮ್ಮ ಜೀವನದ ಮೇಲೆ ಅಗಾಧವಾದ ಪ್ರಭಾವ ಬೀರಿವೆ. ನಮಗೆ ಶಿಕ್ಷಣ ನೀಡುವುದು, ಮನರಂಜನೆ ನೀಡುವುದರಿಂದ ಹಿಡಿದು, ಹೊಸ ಹೊಸ ಸಾಧ್ಯತೆಗಳಿಗೆ ನಮ್ಮ ಮನಸ್ಸನ್ನು ತೆರೆಯುವುದು, ನಮಗೆ ಸ್ಪೂರ್ತಿ ನೀಡುವುದರವರೆಗೆ ಕೆಲವೊಂದು ಸಿನಿಮಾಗಳು ನಮ್ಮ ಜೀವನವನ್ನು ಬದಲಾಯಿಸುತ್ತವೆ ಎಂದರೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ನಮ್ಮಲ್ಲಿ ಪ್ರೀತಿ, ಪ್ರೇಮ, ಗೆಳೆತನ ಇತ್ಯಾದಿ ಹಿತಕರ ಭಾವನೆಗಳು, ಸಿಟ್ಟು, ಕ್ರೋಧ ಮೊದಲಾದ ಅಹಿತಕರ ಭಾವನೆಗಳು ಉದ್ಬಾವವಾಗುತ್ತದೆ. ನಮ್ಮೊಳಗೆ ಹುದುಗಿರುವ ಭಾವನೆಗಳನ್ನು ನಿಯಂತ್ರಣವಿಲ್ಲದೇ ಹರಿಯಬಿಟ್ಟರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ನಾವು ಅರಿತವರಿದ್ದೇವೆ.
ಹೌದು ಸ್ನೇಹಿತರೇ, ನಾನು ಈಗ ಹೇಳ ಹೊರಟಿರುವುದು ಈಗಾಗಲೇ ತೆರೆ ಕಾಣುತ್ತಿರುವ ಶಾಖಾಹಾರಿ ಸಿನಿಮಾದ ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ನಿರ್ದೇಶಿಸಿರುವ “ಭಾವ ತೀರ ಯಾನ”, ಸಿನಿಮಾದ ಬಗ್ಗೆ.
ಭಾವತೀರಯಾನ ಸಿನಿಮಾ ಫೆಬ್ರವರಿ ೨೧ ೨೦೨೫ರಂದು ಬಿಡುಗಡೆಗೊಂಡಿದ್ದು, ರಾಜ್ಯದಾದ್ಯಂತ ಜನಮನ್ನಣೆ ಗಳಿಸುತ್ತಿದೆ. ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದು, ‘ಬ್ಲಿಂಕ್’ ನಿರ್ಮಾಪಕ ರವಿಚಂದ್ರರವರು ಭಾವ ತೀರ ಯಾನ ಸಿನಿಮಾವನ್ನು ರಾಜ್ಯದಾದ್ಯಂತ ವಿತರಣೆ ಮಾಡಿದ್ದು, ಶಾಖಾಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಹಾಗೂ ರಂಜನಿ ಪ್ರಸನ್ನ ಪ್ರಸ್ತುತಪಡಿಸಿದ್ದಾರೆ.
‘ಭಾವ ತೀರಾ ಯಾನ’ ಚಲನಚಿತ್ರ ಸತತ ಒಂದು ತಿಂಗಳಿನಿಂದ ಪುತ್ತೂರಿನ ಜಿ. ಎಲ್. ಮಾಲ್‌ನ ಭಾರತ್ ಸಿನಿಮಾ ಮಂದಿರದಲ್ಲಿ ಬರದಿಂದ ಸಾಗುತ್ತಿದೆ ಎಂದರೆ ಭಾವ ತೀರಾ ಯಾನ, ನಮ್ಮೇಲ್ಲರ ದೈನಂದಿನ ಭಾವನೆಗಳೊಂದಿಗೆ ಭಾವುಕವಾಗಿದೆ ಎನ್ನಬಹುದು. ಒಂದು ಸಿನಿಮಾವನ್ನು ಹುಟ್ಟು ಹಾಕುವುದು ಮುಖ್ಯವಲ್ಲ, ಅದನ್ನು ಎತ್ತರದ ಸ್ಥಾನಕ್ಕೆ ಕೊಂಡು ಹೋಗಬೇಕಾದದು ನಮ್ಮೇಲ್ಲರ ಕರ್ತವ್ಯವಾಗಿರುತ್ತದೆ. ನಿರ್ದೇಶಕರು/ನಿರ್ಮಾಪಕರು ಎಷ್ಟೋ ಕಷ್ಟ ಪಟ್ಟು ಕತೆ ಹುಡುಕಿ, ಅದಕ್ಕೊಂದು ರೂಪ ನೀಡಿ ಅದನ್ನು ಒಳ್ಳೆಯ ಮೌಲ್ಯದೊಂದಿಗೆ ಜನರ ಅಭಿಪ್ರಾಯ, ಅಲೋಚನೆಗಾಗಿ ನಮ್ಮ ಮುಂದೆ ಇಟ್ಟಾಗ, ಅದನ್ನು ಯೋಗ್ಯ ರೀತಿಯಲ್ಲಿ ನಾವುಗಳು ಉಳಿಸುವತ್ತ ಪಣತೊಡಬೇಕಾಗುತ್ತದೆ. ಒಂದು ಅಂಕಿ ಅಂಶಗಳ ಪ್ರಕಾರ ಇಂದು ದಕ್ಷಿಣ ಭಾರತದ ಚಿತ್ರಮಂದಿರಗಳಲ್ಲಿ ವಹಿವಾಟು ನೋಡಿದರೆ ಕನ್ನಡಕ್ಕೆ ಕೊನೆಯ ಸ್ಥಾನವನ್ನು ಕಾಣುತ್ತೇವೆ. ಇತ್ತ ನಿರ್ಮಾಪಕರು ಹಾಕಿದ ಬಂಡವಾಳದ ಮರುಗಳಿಕೆ ವಿಷಯದಲ್ಲಿ ಮುಗ್ಗರಿಸುತ್ತಿರುವ ಸಿನಿಮಾದ ಪಟ್ಟಿಯೇ ನಮ್ಮ ಮುಂದೆ ನಿಲ್ಲುತ್ತದೆ. ಒಂದು ಸಿನಿಮಾದ ನಿರ್ಮಾಣದಲ್ಲಿ ಅದೆಷ್ಟೋ ಲಕ್ಷಗಳನ್ನು ವ್ಯಯಿಸಿ ನಿರ್ಮಾಪಕರು ಕೈ ಚೆಲ್ಲಿ ಕುಳಿತಾಗ, ನಾವೆಲ್ಲರೂ ಅದನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದಾಗ ಅವರು ಹಾಕಿದ ಬಂಡವಾಳ ಸ್ವಲ್ಪವಾದರೂ ಅವರಿಗೆ ತಲುಪುವುದರೊಂದಿಗೆ, ಅವರ ಮನಸ್ಸಿಗೆ ತೃಪ್ತಿಯ ಜೀವನವನ್ನು ನೀಡಬಲ್ಲದು. “ಭಾವ ತೀರ ಯಾನ”, ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೊಂಡತೆ ಕಥೆ ಹಣೆದಿದ್ದು, ಸಿನಿಮಾದಲ್ಲಿ ಚಿಗುರು ಮೀಸೆಯ ಯುವ ಉತ್ಸಾಹಿ ತೇಜಸ್ ಕಿರಣ್ ನಾಯಕ ನಟನಾಗಿ ಹಾಗೂ ಅರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿ ನಟಿಯರಾಗಿ ಹೊರಹೊಮ್ಮಿದ್ದಾರೆ. ಅಂತೆಯೇ ಹಿರಿಯರಾದ ರಮೇಶ್ ಭಟ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದು, ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ, ಕ್ಷಮಾ ಅಂಬೆಕಲ್ಲು ಸೇರಿದಂತೆ ಹಲವಾರು ನಟಿಯರು, ತಾರಾ ಬಳಗದಲ್ಲಿದ್ದಾರೆ. ಆರೋಹ ಫಿಲಂಸ್ ಬ್ಯಾನರ್‌ನಡಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿ. ಕೆ. ನಿರ್ಮಾಣ ಮಾಡಿದ್ದು, ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ, ಶಿವಶಂಕರ್ ನೂರಂಬಡ ಛಾಯಾಚಿತ್ರಾಗ್ರಹಣ ಹಾಗೂ ಸುಪ್ರೀತ್ ಬಿ. ಕೆ. ಸಂಕಲನ ಮಾಡಿದ್ದಾರೆ. ನವಪ್ರತಿಭೆಗಳ ಈ ಚಲನಚಿತ್ರಕ್ಕೆ ಮೆಚ್ಚುಗೆ ಇಂದು ರಾಜ್ಯದಾದ್ಯಂತ ವ್ಯಕ್ತವಾಗುತ್ತಿದೆ. ಇನ್ನು ಕಥೆಯ ಆಳಕ್ಕೆ ಇಳಿದು ಅವಲೋಕನ ಮಾಡುತ್ತಾ ಹೋದ ಹಾಗೆ ಒಂಟಿತನದಿಂದ ಬಳಲುತ್ತಿರುವ ವಯಸ್ಸಾದ ವ್ಯಕ್ತಿಯಿಂದ ಕಥೆ ಆರಂಭವಾಗುತ್ತದೆ. ಒಂಟಿತನದ ಆ ಸಮಯದಲ್ಲಿ ತನ್ನ ಮನಸ್ಸಿನ ತುಡಿತವನ್ನು ಹೊರಹಾಕಲು ಸಲಹಾ ಸಂಸ್ಥೆಯ ಕನ್ಸಲ್ಟೆಂಟ್ ಬಳಿ ಹೋಗಿ ತನ್ನ ಜೀವನದ ಆಗು ಹೋಗುಗಳನ್ನು, ದು:ಖ ದುಮ್ಮನ್ನಗಳನ್ನು ಅವರ ಬಳಿ ಹೇಳಿಕೊಳ್ಳುತ್ತಾ ಕಥೆ ಮುಂದುವರಿಯುತ್ತಾ ಸಾಗುತ್ತದೆ. ಅಲ್ಲಿ ಅನೇಕ ಪಾತ್ರಗಳಿಗೆ ಜೀವತುಂಬುತ್ತಾ ಸಾಗುತ್ತದೆ.
ಗೆಳೆತನದಿಂದ ಪ್ರೀತಿ, ಪ್ರೀತಿಯ ನಲಿವಿನ ಜೊತೆ, ನೋವು ಎರಗಿ ಇಬ್ಬರ ನಡುವಿನ ಅಂತರ ಕಳಚಿದಾಗ, ಭಗ್ನಪ್ರೇಮಿಯ ಕಥೆ ಯಾವ ತೆರನಾಗಿ ಬದಲಾಗುತ್ತದೆ? ತದನಂತರ ಇನ್ನೊಂದು ಹೆಣ್ಣಿನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ಆತನ ಜೀವನ ಯಾವ ರೀತಿಯಲ್ಲಿ ಕಳೆಗುಂದುತ್ತದೆ, ಮುಂದೆ ಅನೀರಿಕ್ಷೀತವಾಗಿ ಹಳೆಯ ಪ್ರೀತಿ ಎದುರಾದಾಗ ಯಾವ ರೀತಿಯಾಗಿ ತನ್ನ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ, ಒಂಟಿತನದಿಂದ ಬಳಲುತ್ತಿದ್ದ ಆ ವೃದ್ಧ ದಂಪತಿಗಳು ಹೇಗೆ ಒಂದಾಗುತ್ತಾರೆ, ಹೀಗೆ ಸಾಗುವ ಕಥೆಯಲ್ಲಿ ನಾವು ಹಲವು ಬಗೆಯ ಭಾವನೆಗಳನ್ನು, ಪ್ರೀತಿಯನ್ನು ಕಾಣುತ್ತೇವೆ. ಜೀವನದಲ್ಲಿ ಕಲಿತ ಪಾಠಕ್ಕಿಂತ ಜೀವನ ಕಲಿಸಿದ ಪಾಠ ಬಹುಮುಖ್ಯವಾದದು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳಬಹುದು. ಯಾಕೆ ಈ ಸಿನಿಮಾ ಜನರ ಹೃದಯ ಗೆದ್ದಿದೆ ಅಂದರೆ ಒಂದು ಭಾವನೆಗಳ ಕಾರಣದಿಂದಾದರೆ ಇನ್ನೊಂದು ಕಾರಣ ಆ ಚಿತ್ರದ ಕಥೆ ನಮ್ಮ ಮಲೆನಾಡಿನ ಪರಿಸರದ ಸೊಬಗು, ಸಾಹಿತ್ಯ – ಸಂಗೀತದ ಅಲಾಪನೆ, ಜೊತೆಗೆ ನಮ್ಮೂರಿನ ಅದರಲ್ಲೂ ಸುಳ್ಯದ ಹುಡುಗನ ಕೈಚಳಕದಿಂದ ಮಿಂಚುತಿದೆ ಎಂದರೆ ತಪ್ಪಾಗಲಾರದು. ನಮಗೆ ಗೊತ್ತೋ ಗೊತ್ತಿಲ್ಲದೆಯೋ ಸಿನಿಮಾ ಮುಗಿಯುವ ಹೊತ್ತಿಗೆ ನಮ್ಮ ಕಣ್ಣಂಚಿನಿಂದ ಹನಿಗಳು ಜಾರತೊಡಗುತ್ತವೆ. ಅಂತೆಯೇ ಭಾವ ತೀರ ಯಾನ ಚಲನಚಿತ್ರವು ಸುಳ್ಯ ತಾಲೂಕಿನ ಎಲಿಮಲೆ, ಹರಿಹರ ಪಲ್ಲತ್ತಡ್ಕ, ಪೈಚಾರ್, ಕಾಂತಮಂಗಲ, ಪೈಚಾರು ಕೆವಿಜಿ ಮೆಡಿಕಲ್ ಕಾಲೇಜು, ವೆಂಕಟ್ರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಸೇರಿದಂತೆ ಮಂಗಳೂರು ವಿಮಾನ ನಿಲ್ದಾಣ, ಚಿಕ್ಕಮಂಗಳೂರು, ಬೆಂಗಳೂರು ಮೊದಲಾದೆಡೆ ಚಿತ್ರೀಕರಣಗೊಂಡಿರುತ್ತದೆ. ಇಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ಪ್ರತಿಭೆಗಳನ್ನು ಕೂಡ ಈ ಸಿನಿಮಾದಲ್ಲಿ ಸೆರೆಹಿಡಿಯಲಾಗಿದ್ದು, ವೈದ್ಯರ ಪಾತ್ರದಲ್ಲಿ ಡಾ. ಅನುಷಾ ಮಡಪ್ಪಾಡಿ ಹೀಗೆ ನಮ್ಮೂರಿನವರನ್ನು ಕೂಡ ಪರದೆಯಲ್ಲಿ ನೋಡುವ ಅವಕಾಶವನ್ನು ಭಾವ ತೀರಯಾನ ತಂಡದವರು ಒದಗಿಸಿಕೊಟ್ಟಿದ್ದಾರೆ. ಇನ್ನು ಈ ಚಿತ್ರತಂಡದ ಮಯೂರ್ ಅಂಬೆಕಲ್ಲು ಅವರ ಬಗ್ಗೆ ಹೇಳುವುದಾದರೆ ಶಾಲಾ ದಿನಗಳಲ್ಲಿ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡಿದ್ದ ಈತ ತನ್ನ ಪ್ರಾಥಮಿಕ ಶಿಕ್ಷಣವನ್ನು ಸುಳ್ಯದಲ್ಲಿ ಪೂರೈಸಿ ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪೂರೈಸಿ, ಪದವಿ ಮತ್ತು ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿರುತ್ತಾರೆ. ಪಾಠದ ಜೊತೆ ಜೊತೆಯಲ್ಲಿ ಪಾಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ ಇತ್ತ ಹಾಡುಗಾರಿಗೆ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಅಂತೆಯೇ ಡ್ರಾಯಿಂಗ್‌ನಲ್ಲಿ ರಾಜ್ಯ, ರಾಷ್ಟಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತಾನೆ. ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಇಬ್ಬರೂ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಖ್ಯಾತ ರಂಗ ಕರ್ಮಿ ಜೀವನ್ ರಾಂ ಸುಳ್ಯರವರ ಗರಡಿಯಲ್ಲಿ ಪಳಗಿದ ಧೀರರು ಎಂಬುದನ್ನು ನಾನು ಇಲ್ಲಿ ಉಲ್ಲೇಖಿಸಲೇ ಬೇಕು.
ಕೊನೆಯ ಮಾತಿನಲ್ಲಿ ಹೇಳುವುದಾದರೆ, ಎಂಥ ಕತ್ತಲಿನಲ್ಲೂ ಕೂಡ ಸುರಂಗದ ಆಚೆಗೂ ಒಂದು ಬೆಳಕಿನ ಕಿಡಿ ಇದ್ದೇ ಇರುತ್ತದೆ ಎನ್ನುವಂತೆ, ತನ್ನ ಚಾಣಕ್ಷತೆಯಿಂದ ಕತೆಗಾರ ಕೊನೆಗೂ ನಮ್ಮ ಜೀವನ ಯಾವ ರೀತಿಯಲ್ಲಿ ಎದ್ದು ನಿಲ್ಲುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ಜೋಡಿಸಿದ್ದಾರೆ. ಸಿನಿಮಾದ ಪ್ರತಿಯೊಂದು ಹಂತದಲ್ಲೂ ಜೀವಂತಿಕೆಯ ನೆರಳಿದೆ, ಭರವಸೆಯ ತುಡಿತವಿದೆ, ಆತ್ಮವಿಶ್ವಾಸ ಮಿಡಿತ ಎದ್ದು ತೋರುತ್ತಿದೆ, ಗೆಲುವಿನ, ಸೋಲಿನ ಸಮ್ಮೀಶ್ರಣವಿದೆ. ಸದಾ ಜಾಲಿಯಾಗಿರುವ ಮನಸ್ಸು, ಜೀವನದಲ್ಲಿ ರಿಸ್ಕ್ ಗೆ ಕೈ ಹಾಕಿದಾಗ ಆತನ ಬದುಕು ಯಾವ ತೆರನಾಗಿ ಒಳ್ಳೆಯ ರೀತಿಯಲ್ಲಿ ಅಂತೆಯೇ ಕೆಟ್ಟ ರೀತಿಯಲ್ಲಿ ಬದಲಾಗುತ್ತದೆ, ನಂತರದ ದಿನಗಳಲ್ಲಿ ಆತ ಯಾವ ರೀತಿಯಾಗಿ ಭಾವನೆಗಳಿಗೆ ಬೆಲೆ ಕೊಟ್ಟು ತನ್ನ ಜೀವನವನ್ನು ಬದಲಾಯಿಸಿಕೊಳ್ಳುತ್ತಾನೆ ಎಂಬುದನ್ನು ಆಳವಾಗಿ ಅವಲೋಕಿಸಿದಾಗ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಚಿತ್ರಣಗಳನ್ನು ಬಹಳ ಎಳೆ ಎಳೆಯಾಗಿ ನವ ಯುವಕರ ತಂಡವೊಂದು ಪ್ರಸ್ತುತಪಡಿಸಿ ಜನರ ಮುಂದೆ ಇಟ್ಟಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಬದುಕಿನಲ್ಲಿ ತಪ್ಪುಗಳನ್ನು ಮಾಡಿ ಕೊನೆಗೆ ಜ್ಞಾನೋದಯದೊಂದಿಗೆ ಬದಲಾವಣೆ ಮಾಡಿಕೊಂಡು ಮುಂದಡಿ ಇಟ್ಟಾಗ, ಸಮಾಜದ ಬದಲಾವಣೆ, ಮನಸ್ಸುಗಳ ಸುಧಾರಣೆಗಾಗಿ ಪ್ರಸ್ತುತ ನಾವುಗಳು ಇಂತಹ ಸಿನಿಮಾಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು. ಕನ್ನಡ ಚಲನಚಿತ್ರಗಳ ಉಳಿವಿಗಾಗಿ ನಾವೆಲ್ಲರೂ ಕಂಕಣಬದ್ಧರಾಗಬೇಕು ಎನ್ನುವ ಸದಾಶಯದೊಂದಿಗೆ , ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಈ ಶುಭ ಸಂಭ್ರಮದಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತಾ, ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳು ಮಯೂರ್ ಅಂಬೆಕಲ್ಲು ತಂಡದಿಂದ ಸಮಾಜಕ್ಕೆ ನೀಡುವಂತಾಗಲಿ ಎಂದು ಆಶಿಸುತ್ತಾ, ನೀವೆಲ್ಲರೂ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವ ಮೂಲಕ ಬೆಳೆಯುವ ಪ್ರತಿಭೆಗಳಿಗೆ ನಿರೇರೆದು ಪೋಷಿಸೋಣ.

. . . . . . . . .

ಬರಹ: ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸುಳ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!