

ಮಂಗಳೂರು ಐಕಳ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಮೂಲತಃ ನಮ್ಮೂರಿನ ಪಕ್ಕದ ಊರಿನವರೇ ಆದಂತಹ ಡಾ.ಪುರುಷೋತ್ತಮ ಕರಂಗಲ್ಲು ರವರು ಮಾ.18ರಂದು ರಿಜಿಸ್ಟರ್ ಪೋಸ್ಟ್ ಮೂಲಕ ನನಗೊಂದು ಪುಸ್ತಕವನ್ನು ಕಳುಹಿಸಿ ಕೊಟ್ಟಿದ್ದರು. ಪುಸ್ತಕ ಏನೆಂದು ತೆರೆದು ನೋಡಿದಾಗ ಅದು “ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ” ಯು 2018-19ನೇ ಸಾಲಿನಲ್ಲಿ ನೀಡಿದ ಫೆಲೋಶಿಪ್ ನ ಅಡಿಯಲ್ಲಿ ಡಾ.ಪುರುಷೋತ್ತಮ ಕರಂಗಲ್ಲು ರವರು ಅರೆಭಾಷೆ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿ ಬರೆದಂತಹ “ಅರೆಬಾಸೆ ಸಾಹಿತ್ಯಾವಲೋಕನ ಅಧ್ಯಯನ” ಎಂಬ ಹೆಸರಿನ ಸಂಶೋಧನಾ ಪ್ರಬಂಧ.
ಪೂರ್ತಿ ಅರೆಭಾಷೆಯಲ್ಲೇ(ಕೆಲವೊಂದು ಕಡೆಗಳಲ್ಲಿ ಕನ್ನಡದಲ್ಲಿ ವಿವರಿಸಿದ್ದಾರೆ) ಬರೆದಂತಹ ಸಂಶೋಧನಾ ಪ್ರಬಂಧ ಇದಾಗಿದ್ದು, ಅಧ್ಯಕ್ಷರ ಮಾತಿನೊಂದಿಗೆ ಹಾಗೂ ಸಂಶೋಧನಾಕಾರರ ಕೃತಜ್ಞತೆಗಳೊಂದಿಗೆ ಪ್ರಾರಂಭವಾಗುವ ಈ ಪುಸ್ತಕಕ್ಕೆ ಶ್ರೀಮತಿ ಸಂಗೀತ ರವಿರಾಜ್ ಚೆಂಬು-ಹೊಸೂರು ರವರು ಬೆನ್ನುಡಿ ಯನ್ನು ಬರೆದಿದ್ದು, ಈ ಪುಸ್ತಕದಲ್ಲಿ ಒಟ್ಟು 140 ಪುಟಗಳಿದ್ದು, 05 ಅಧ್ಯಾಯಗಳಿವೆ.
ಮೊದಲನೇ ಅಧ್ಯಾಯದಲ್ಲಿ 1 ರಿಂದ 9ನೇ ಪುಟಗಳವರೆಗೆ ಪೀಠಿಕೆ ಹಾಗೂ ಇವರು ಈ ಅಧ್ಯಯನವನ್ನು ನಡೆಸಿದಂತಹ ಉದ್ದೇಶ, ಅಧ್ಯಯನ ನಡೆಸಿದಂತಹ ವಿಧಾನ, ಅಧ್ಯಯನದ ವ್ಯಾಪ್ತಿ, ಮಹತ್ವ, ಮಿತಿ ಹಾಗೂ ಅಧ್ಯಯನದ ವಿನ್ಯಾಸವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.
ಎರಡನೇ ಅಧ್ಯಾಯದಲ್ಲಿ 10 ರಿಂದ 63ನೇ ಪುಟಗಳವರೆಗೆ “ಅರೆಭಾಷೆಯಲ್ಲಿ ರಚನೆಯಾದ ಸಾಹಿತ್ಯಗಳ ಸಮೀಕ್ಷೆ ಮತ್ತು ವಿಶ್ಲೇಷಣೆ” ಗಳ ಬಗ್ಗೆ ಬರೆದಿದ್ದು, ಮೊದಲನೆಯದಾಗಿ ಆರೆಭಾಷಿಗರ ಭಾಷೆ ಮತ್ತು ಸಂಸ್ಕೃತಿ ಸಂಶೋಧನೆಗೆ ಸಂಬಂಧಪಟ್ಟ ಪುಸ್ತಕಗಳಾದ ಡಾ.ಪುರುಷೋತ್ತಮ ಬಿಳಿಮಲೆ ರವರು ಬರೆದಂತಹ “ವಲಸೆ, ಸಂಘರ್ಷ ಮತ್ತು ಸಮನ್ವಯ”, ಡಾ.ಪೂವಪ್ಪ ಕಣಿಯೂರು ರವರು ಬರೆದಂತಹ “ಉಳ್ಳಾಕುಲು-ಐತಿಹಾಸಿಕತೆ, ಪ್ರಾದೇಶಿಕತೆ ಮತ್ತು ಆರಾಧನೆ” ಹಾಗೂ “ಮೌಖಿಕ ಸಂಕಥನ”, ಡಾ.ಕೋರನ ಸರಸ್ವತಿ ಪ್ರಕಾಶ್ ರವರು ಬರೆದಂತಹ “ಕೊಡಗು ಗೌಡ ಸಮುದಾಯ”, ಕೆ.ಆರ್ ಗಂಗಾಧರ ಇವರು ಬರೆದಂತಹ “ಅರೆಭಾಷೆ-ಕನ್ನಡ-ಇಂಗ್ಲೀಷ್ ಶಬ್ದಕೋಶ” ಹಾಗೂ ಭಾಷಾ ವಿಜ್ಞಾನಿ ಪ್ರೋ.ಕೋಡಿ ಕುಶಾಲಪ್ಪ ಗೌಡ ರವರು ಬರೆದಂತಹ “ಆರೆಭಾಷೆ(ಗೌಡ ಕನ್ನಡ) ವ್ಯಾಕರಣ ಪುಸ್ತಕಗಳ ಬಗ್ಗೆ ಹಾಗೂ ಎರಡನೆಯದಾಗಿ ಅರೆಭಾಷೆಯಲ್ಲಿ ಪ್ರಕಟಗೊಂಡಂತಹ ಗ್ರಂಥ(ಮಹಾ ಪ್ರಬಂಧ) ವಾದ ಪ್ರೋ.ಕೋಡಿ ಕುಶಾಲಪ್ಪ ಗೌಡ ರವರು ಬರೆದಂತಹ “ಮಾನಸ ಮಹಾಭಾರತ”, ಮೂರನೆಯದಾಗಿ ಅರೆಭಾಷೆ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳಾದ ಕೊಡಗು ಗೌಡ ವಿದ್ಯಾಸಂಘ ಮಡಿಕೇರಿ ಇವರು ಹೊರತಂದಂತಹ “ಗೌಡ ಸಂಸ್ಕೃತಿ”, ಬೈತಡ್ಕ ಜಾನಕಿ ಬೆಳ್ಯಪ್ಪ ರವರು ಬರೆದಂತಹ ಗೌಡ ಜನಾಂಗದವರ ಸಂಸ್ಕೃತಿ ಸೋಬಾನೆಗಳ ಸಂಗ್ರಹವಾದ “ಹಸೆಮಣೆ”, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ರವರ ಸಂಪಾದಕತ್ವದಲ್ಲಿ ಮೂಡಿಬಂದಂತಹ “ಆಟಿ”, ಬೈತಡ್ಕ ಜಾನಕಿ ಬೆಳ್ಯಪ್ಪ ರವರು ಬರೆದಂತಹ “ಕೊಡಗು ಗೌಡ ಜನಾಂಗದ ಸಂಸ್ಕೃತಿ ಹಾಗೂ ಆಚರಣೆಗಳ ಸಂಗ್ರಹವಾದ “ಅಕ್ಷಯ”, ದೊಡ್ಡಣ್ಣ ಬರೆಮೇಲು ರವರ ಸಂಪಾದಕತ್ವದ “ಗೌಡರ ಸಂಸ್ಕೃತಿ ಸಿರಿ”, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ “ಸಂಸ್ಕೃತಿ ಸಂಪತ್”, ನಾಲ್ಕನೆಯದಾಗಿ ಅರೆಭಾಷೆಯಲ್ಲಿ ಬರೆದಂತಹ ಲಘು ಬರಹ ಪುಸ್ತಕ ಪೂಜಾರೀರ ಜಿ.ಮಾದಪ್ಪ ಇವರ “ಕುಂಕುಮ”, ಐದನೆಯದಾಗಿ ಆರೆಭಾಷೆಯಲ್ಲಿ ಬರೆದಂತಹ ಆತ್ಮ ಚರಿತ್ರೆ/ಅನುಭವ ಕಥನಗಳಾದ ಎಂ.ಜಿ ಕಾವೇರಮ್ಮ ರವರು ಬರೆದಂತಹ “ನೆಂಪುಗಳ ರಂಗೋಲಿ”, ಡಾ.ಪ್ರಭಾಕರ ಶಿಶಿಲ ರವರು ಬರೆದಂತಹ “ಶಿಕಾರಿಯ ಸೀಳು ನೋಟ/ಸದ್ದಡಗಿದ ಶಿಕಾರಿಕೋವಿ” ಕೃತಿಯ ಆಧಾರಿತ ಕೃತಿ “ಬೇಟೆನ ಬಿರ್ಸ ಅಪ್ಪಯ್ಯ ಗೌಡ್ರು”, ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರು ಬರೆದಂತಹ “ಕಾಡ್’ನ ಮಕ್ಕ”, ಕಟ್ರತನ ಕೆ.ಬೆಳ್ಯಪ್ಪ ರವರು ಬರೆದಂತಹ “ಬೆಳ್ಳಿಮುಷ್ಠಿ” ಆರನೆಯದಾಗಿ ಅರೆಭಾಷೆಯಲ್ಲಿ ಬರೆದಂತಹ ಪದ್ಯ ಪುಸ್ತಕಗಳಾದ “ಯಶವಂತ ಕುಡೆಕಲ್ಲು ರವರು ಬರೆದಂತಹ “ತೊಂಬರ”, 1995ರಲ್ಲಿ ಗುತ್ತಿಗಾರಿನಲ್ಲಿ ನಡೆದ ಅರೆಭಾಷೆಯ ಮೊದಲ ಕವಿಗೋಷ್ಠಿಯಲ್ಲಿನ ಕವನಗಳನ್ನು ಆಯ್ಕೆ ಮಾಡಿ ಎ.ಕೆ ಹಿಮಕರ ಹಾಗೂ ಸಂಜೀವ ಕುದ್ಪಾಜೆ ರವರ ಸಂಪಾದಕತ್ವದಲ್ಲಿ ಬಂಟಮಲೆ ಪ್ರಕಾಶನದ ಅಡಿಯಲ್ಲಿ ಪ್ರಕಟಗೊಂಡ “ಸಡಗರ”, ಹೊದ್ದೆಟ್ಟಿ ಭವಾನಿಶಂಕರ ಇವರು ಬರೆದಂತಹ “ಸಂತೃಪ್ತಿ” ಹಾಗೂ “ಮೋಟಿಗೂಡೆನ ಮೊದುವೆ”, ಯಶವಂತ ಕುಡೆಕಲ್ಲು ರವರು ಬರೆದಂತಹ “ಜೇನೆರಿ”, ಡಾ.ಕರುಣಾಕರ ನಿಡಿಂಜಿ ರವರು ಬರೆದಂತಹ “ನೀಲಿ ದಾರಿ”, ಕುಯಿಂತೋಡು ದಾಮೋದರ ಮಾಸ್ತರ್ ಬರೆದಂತಹ “ನಮ್ಮೂರ ಹಾಡು ಮತ್ತು ಭಕ್ತಿ ಗೀತೆಗಳು”, ಬೈತಡ್ಕ ಜಾನಕಿ ಬೆಳ್ಯಪ್ಪ ರವರು ಬರೆದಂತಹ “ಬೇರ್’ಲಿ ಚಿಗ್’ರ್”, ಎಂ.ಜಿ ಕಾವೇರಮ್ಮ ರವರು ಬರೆದಂತಹ “ಸರ್ಮಾಲೆ”, ಕವಿ ಜೋಯಪ್ಪನವರು ಬರೆದಂತಹ ಅರೆಭಾಷೆ ಸಾಹಿತ್ಯದ ಮೊದಲ ತ್ರಿಪದಿ “ತೋರಣ”, ಹೊದ್ದೆಟ್ಟಿ ಭವಾನಿಶಂಕರ ಇವರು ಬರೆದಂತಹ “ಅನುಭವಧಾರೆ”, ಯೋಗೀಶ್ ಹೊಸೊಳಿಕೆ ರವರು ಬರೆದಂತಹ “ತಿಂಗೊಳ್ ಬೆಳ್ಕ್”, ಡಾ.ಕರುಣಾಕರ ನಿಡಿಂಜಿ ರವರು ಬರೆದಂತಹ “ನೆಗೆಬೇಕು ಕೇದಗೆ ಗೊನೆ ಹಾಂಗೆ”, ಏಳನೆಯದಾಗಿ ಅರೆಭಾಷೆಯಲ್ಲಿ ಬರೆದಂತಹ ನಾಟಕಗಳಾದ ವಿದ್ವಾನ್ ಟಿ.ಜಿ ಮುಡೂರು ರವರು ಬರೆದಂತಹ “ಬೊಳ್ಪಾಕನ ಮುಗ್ತ್”, ಬೈತಡ್ಕ ಜಾನಕಿ ಬೆಳ್ಯಪ್ಪ ರವರು ಬರೆದಂತಹ ಅರೆಭಾಷೆ ನಾಟಕ ಸಂಕಲನ “ಬೆಳ್ಳಿ ಚುಕ್ಕೆಗ”, ಎಂಟನೆಯದಾಗಿ ಯೋಗೀಶ್ ಹೊಸೊಳಿಕೆ ರವರು ಬರೆದಂತಹ ಅರೆಭಾಷೆಯ ಮೊದಲ ರೂಪಕ “ಅರೆಭಾಷೆ ಪುಣ್ಯಕೋಟಿ”, ಒಂಬತ್ತನೆಯದಾಗಿ ಅರೆಭಾಷೆಯಲ್ಲಿ ಬರೆದಂತಹ ಕಥೆಗಳಾದ ಡಾ.ವಿಶ್ವನಾಥ ಬದಿಕಾನ ರವರು ಬರೆದಂತಹ “ಗೌಡ ಕನ್ನಡದ ಜಾನಪದ ಕತೆಗಳು”, ಬಾರಿಯಂಡ ಜೋಯಪ್ಪ ನವರು ಬರೆದಂತಹ “ಚಾಂಪಾ”, ಎಂ.ಜಿ ಕಾವೇರಮ್ಮ ರವರು ಬರೆದಂತಹ “ಅಜ್ಜಪ್ಪನ ಕಥಾ ಭಂಡಾರಂದ ಹೆರ್ಕಿದ ಕಥೆಗ”, ಲೋಕೇಶ್ ಊರುಬೈಲು ರವರು ಬರೆದಂತಹ “ಗುಬ್ಬಿಗೂಡೆ”, ಕುಂಞೇಟಿ ಶಿವರಾಮ ಮಾಸ್ತರ್ ರವರು ಬರೆದಂತಹ “ಜೋನಿ ಬೆಲ್ಲ”, ಡಾ.ವಿಶ್ವನಾಥ ಬದಿಕಾನ ರವರು ಬರೆದಂತಹ “ಅರೆಬಾಸೆನ ಅಜ್ಜಿ ಕತೆಗ”, ಉದಯಕುಮಾರಿ ಚೆಂಬು ರವರು ಬರೆದಂತಹ “ಹೊಸಬೊದ್ಕು”, ಲೋಕೇಶ್ ಕುಂಚಡ್ಕ ರವರು ಬರೆದಂತಹ “ಬೊಳ್ಪು”, ವಿನೋದ್ ಮೂಡಗದ್ದೆ ರವರು ಬರೆದಂತಹ “ನೆನ್ಪುನ ಜೊಂಪೆ”, ಡಾ.ಪುನೀತ್ ರಾಘವೇಂದ್ರ ಕುಂಟುಕಾಡು ರವರು ಬರೆದಂತಹ “ಮಿಣ್ಪುಳಿ”, ಪುಟ್ಟಣ್ಣ ಗೌಡ ಅಂಬೆಕಲ್ಲು(ಪಿ.ಜಿ ಅಂಬೆಕಲ್ಲು) ರವರು ಬರೆದಂತಹ “ತಬ್ಲಿ ಮಂಙ”, ಭವಾನಿಶಂಕರ ಅಡ್ತಲೆ ರವರು ಬರೆದಂತಹ “ಅಪ್ಪ ಹೇಳ್’ದ ಹತ್ತ್ ಕಥೆಗ”, ಕಟ್ರತನ ಲಲಿತಾ ಅಣ್ಣಯ್ಯ ರವರು ಬರೆದಂತಹ “ಅಪೂರ್ವ ಸಂಗಮ”, ಹತ್ತನೆಯದಾಗಿ ಅರೆಭಾಷೆಯಲ್ಲಿ ಬರೆದಂತಹ ಕಾದಂಬರಿಗಳಾದ ಜಯಮ್ಮ ಚೆಟ್ಟಿಮಾಡ ರವರು ಬರೆದಂತಹ “ಹಳೆ ಬಾಳ್’ನ ಹರ್ದ ಹಾಳೆಗ”, ಪ್ರಭಾಕರ ಶಿಶಿಲ ರವರು ಬರೆದಂತಹ “ಇರುವುದೆಲ್ಲವ ಬಿಟ್ಟು” ಕೃತಿಯ ಅನುವಾದಿತ ಕೃತಿ ಕುಯಿಂತೋಡು ದಾಮೋದರ ರವರು ಅನುವಾದಿಸಿದಂತಹ “ಇರುದರನೆಲ್ಲ ಬುಟ್ಟು”, ಕಟ್ರತನ ಲಲಿತಾ ಅಯ್ಯಣ್ಣ ರವರು ಬರೆದಂತಹ “ಮತ್ತೆ ಸಿಕ್ಕಿತ್ ಕುಂಕುಮ”, ಎಂ.ಜಿ ಕಾವೇರಮ್ಮ ರವರು ಬರೆದಂತಹ “ಬೊದ್ಕ್”, ಸಂಗೀತ ರವಿರಾಜ್ ರವರು ಕನ್ನಡದಿಂದ ಅರೆಭಾಷೆಗೆ ಅನುವಾದಿಸಿದ ಬ್ರಿಟೀಷರ ವಿರುದ್ಧ ದಂಗೆ ಎದ್ದ ರೈತಾಪಿ ಜನರ ಚರಿತ್ರೆಯನ್ನು ಹೇಳುವ ಕೃತಿ “ಕಲ್ಯಾಣಸ್ವಾಮಿ”, ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ಡಾ.ಪ್ರಭಾಕರ ಶಿಶಿಲ ರವರು ಬರೆದಂತಹ “ಪುಂಸ್ತ್ರಿ”, ಹತ್ತನೆಯದಾಗಿ ಅರೆಭಾಷೆ ಹಾಗೂ ಗೌಡ ಸಂಸ್ಕೃತಿ ಬಗ್ಗೆ ಬಂದಂತಹ ನೆನಪಿನ ಪುಸ್ತಕ(ಸ್ಮರಣ ಸಂಚಿಕೆ) ಗಳಾದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇವರು 1968-70ರಲ್ಲಿ ಹೊರತಂದಂತಹ “ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಸಂಸ್ಕೃತಿ”, ಗೌಡಕನ್ನಡ ಸಂಕಲನ ಸಮಿತಿ 1985ರಲ್ಲಿ ಸೂದನ ಎಸ್.ಈರಪ್ಪ ರವರು ಸಂಪಾದಕತ್ವದಲ್ಲಿ ಹೊರತಂದಂತಹ “ಗೌಡದೊನಿ”, ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮ್ಮೇಳನ 1985ರಲ್ಲಿ ವಿದ್ವಾನ್ ಟಿ.ಜಿ ಮುಡೂರು ರವರ ಸಂಪಾದಕತ್ವದಲ್ಲಿ ಹೊರತಂದಂತಹ “ಸ್ಪಂದನ”, ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದವರು 1985ರಲ್ಲಿ ಹೊರತಂದಂತಹ “ಸ್ಮರಣ ಸಂಚಿಕೆ”, 1986ರಲ್ಲಿ ಸುಳ್ಯದ ಕುರುಂಜಿ ಯಲ್ಲಿ ನಡೆದಂತಹ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗೌಡ ಸಮ್ಮೇಳನದ ನೆನಪಿಗಾಗಿ ಹೊರತಂದಂತಹ ನೆನಪಿನ ಪುಸ್ತಕ “ವೀಳ್ಯ”, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು 2003ರಲ್ಲಿ ಸಂಘದ ಬೆಳ್ಳಿಹಬ್ಬದ ನೆನಪಿಗಾಗಿ ಹೊರತಂದಂತಹ ಡಾ.ಕೆ ಚಿನ್ನಪ್ಪ ಗೌಡ ಇವರ ಸಂಪಾದಕತ್ವದ “ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ” ಹಾಗೂ ರಜತ ಮಹೋತ್ಸವದ ನೆನಪಿಗಾಗಿ ಹೊರತಂದಂತಹ ದೇವಸ್ಯ ಮನೋಹರ ರವರ ಸಂಪಾದಕತ್ವದಲ್ಲಿ ಹೊರತಂದಂತಹ “ಚಾವಡಿ”, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು 2014ರಲ್ಲಿ ಚಿದಾನಂದ ಬೈಲಾಡಿ ರವರ ಗೌರವ ಸಂಪಾದಕತ್ವದಲ್ಲಿ ಹೊರತಂದಂತಹ “ಒಕ್ಕೊರಳು”, ಆರೆಭಾಷೆ ಅಕಾಡೆಮಿಯ ಮೊದಲ ಅರೆಭಾಷೆ ಸಮ್ಮೇಳನದ ನೆನಪಿಗಾಗಿ 2019ರಲ್ಲಿ ಸುಬ್ರಾಯ ಗೌಡ ರವರ ಸಂಪಾದಕತ್ವದಲ್ಲಿ ಮೂಡಿಬಂದಂತಹ “ಪಸ್’ಲ್”, ಹಾಗೂ ಕೊನೆಯದಾಗಿ ಅರೆಭಾಷೆ ಅಕಾಡೆಮಿ ವತಿಯಿಂದ 2017ರಲ್ಲಿ ಮೂಡಿಬಂದಂತಹ ಅಡುಗೆ ಮಾಹಿತಿಗಳ ಪುಸ್ತಕ “ರುಚಿ” ಅರೆಭಾಷೆಯಲ್ಲಿ ಮೂಡಿಬಂದಂತಹ ಈ ಎಲ್ಲಾ ಪುಸ್ತಕಗಳ ಹಾಗೂ ನಾಟಕಗಳ ಸಂಕ್ಷಿಪ್ತವಾದ ಪರಿಚಯವನ್ನು ನೀಡಲಾಗಿದೆ.
ಮೂರನೇ ಅಧ್ಯಾಯದಲ್ಲಿ 64 ರಿಂದ 90ನೇ ಪುಟಗಳವರೆಗೆ ಅರೆಭಾಷೆಯಲ್ಲಿ ಬಂದಂತಹ ನಾಲ್ಕು ಪತ್ರಿಕೆಗಳ ಬಗ್ಗೆ ಹಾಗೂ ಆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅರೆಭಾಷೆ ಬರಹಗಳ ಬಗ್ಗೆ ವಿಶ್ಲೇಷಣೆ ಮಾಡಿ ಬರೆದಿದ್ದು, ಮೊದಲನೆಯದಾಗಿ “1997ರಲ್ಲಿ ಮೈಸೂರಿನಲ್ಲಿ ಪಟ್ಟದ ಶೀಲಾಮಣಿ ರವರ ಸಂಪಾದಕತ್ವದಲ್ಲಿ ಅರೆಭಾಷೆ ಸಾಹಿತ್ಯಕ್ಕೆ ಪ್ರತ್ಯೇಕ ವಿಭಾಗವನ್ನು ನೀಡುವುದರೊಂದಿಗೆ ಪ್ರಾರಂಭಗೊಂಡು 2005 ವರೆಗೆ ಒಟ್ಟು 124 ಸಂಚಿಕೆಗಳನ್ನು ಹೊರತಂದು ಇತಿಹಾಸದ ಪುಟಕ್ಕೆ ಸೇರಿದ “ಕೊಡಗು ಸಂಗಾತಿ” ಪತ್ರಿಕೆ, ಎರಡನೆಯದಾಗಿ ಬಹುಭಾಷೆಗೆ ಆಧ್ಯತೆ ನೀಡಿ ವೈಚಾರಿಕ ಬರಹಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ಸುಳ್ಯದ ಸಮಾನಮನಸ್ಕರ ಒಟ್ಟುಗೂಡುವಿಕೆಯಿಂದ ಬಂಟಮಲೆ ಪ್ರಕಾಶನದ ನೇತೃತ್ವದಲ್ಲಿ ಹೊರಬಂದು ಇದೀಗ ಇತಿಹಾಸದ ಪುಟ ಸೇರಿರುವ “ಸುರಗಿ” ಬಹುಭಾಷಾ ಮಾಸಪತ್ರಿಕೆ, ಮೂರನೆಯದಾಗಿ ಅರೆಭಾಷೆಯಲ್ಲಿ 2016ರಲ್ಲಿ ಪ್ರಾರಂಭಗೊಂಡು ಪ್ರಸ್ತುತ ಈಗಲೂ ಪ್ರಕಟಗೊಳ್ಳುತ್ತಿರುವ ಅರೆಭಾಷೆಯ ಏಕೈಕ ಖಾಸಗಿ ತಿಂಗಳ ಪತ್ರಿಕೆ ವಿನೋದ್ ಮೂಡಗದ್ದೆ ಇವರ ಸಾರಥ್ಯದ “ಮುಡ್ಪು” ತಿಂಗಳ ಪತ್ರಿಕೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಾರಥ್ಯದಲ್ಲಿ 2015ರಿಂದ ಪ್ರಾರಂಭಗೊಂಡ “ಹಿಂಗಾರ” ಅರೆಭಾಷೆ ತ್ರೈಮಾಸಿಕ ಪತ್ರಿಕೆ ಈ ನಾಲ್ಕು ಪತ್ರಿಕೆಗಳ ಬಗ್ಗೆ, ಸಂಪಾದಕರ ಬಗ್ಗೆ ಹಾಗೂ ಈ ಪತ್ರಿಕೆಗಳಲ್ಲಿ ಬಂದಂತಹ ಬರಹಗಳ ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಿಸಲಾಗಿದೆ.
ನಾಲ್ಕನೇ ಅಧ್ಯಾಯದಲ್ಲಿ 91 ರಿಂದ 123ನೇ ಪುಟಗಳವರೆಗೆ “2018-19ರವರೆಗೆ ಅರೆಭಾಷೆ ಸಾಹಿತ್ಯಕ್ಕೆ ಕೊಡುಗೆ ನೀಡಿದ 172 ಬರಹಗಾರರ ಹಾಗೂ 2012 ರಿಂದ 2019ರವರೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ಸಂಕ್ಷಿಪ್ತ ವ್ಯಕ್ತಿ ಪರಿಚಯವನ್ನು ನೀಡಲಾಗಿದ್ದು, ಐದನೇ ಅಧ್ಯಾಯದಲ್ಲಿ ಸಂಶೋಧಕರಾದ ಡಾ.ಪುರುಷೋತ್ತಮ ಕರಂಗಲ್ಲು ರವರು ತಾವು ಈ ಅಧ್ಯಯನದಲ್ಲಿ ಒಟ್ಟು ಕಂಡುಕೊಂಡಂತಹ ವಿಷಯಗಳು, ಸಲಹೆಗಳು, ಸಾರಾಂಶ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವುದರೊಂದಿಗೆ ಕೊನೆಯ ಮಾತನ್ನು ಹೇಳುತ್ತಾ ತಮ್ಮ ಈ ಸಂಶೋಧನಾ ಪ್ರಬಂಧಕ್ಕೆ ಪೂರ್ಣವಿರಾಮವನ್ನಿಡುತ್ತಾರೆ.
ಒಟ್ಟಿನಲ್ಲಿ 140 ಪುಟಗಳ ಈ ಸಂಶೋಧನಾ ಪ್ರಬಂಧದಲ್ಲಿನ ವಿಷಯಗಳನ್ನು ಓದಿದಾಗ ಅರೆಭಾಷಾ ಸಾಹಿತ್ಯದ, ಸಾಹಿತಿಗಳ ಬಹುದೊಡ್ಡ ಸಾಗರವೇ ನಮ್ಮ ಕಣ್ಮುಂದೆ ಬರುತ್ತದೆ.
ನಮಗೆ ತಿಳಿಯದಂತಹ ಅರೆಭಾಷಾ ಸಾಹಿತ್ಯದ ಅನೇಕ ವಿಚಾರಗಳನ್ನು, ವಿಷಯಗಳನ್ನು ಮನಮುಟ್ಟುವಂತೆ ತಿಳಿಸುವ ಪ್ರಯತ್ನವನ್ನು ಮಾಡಿರುವ ಡಾ.ಪುರುಷೋತ್ತಮ ಕರಂಗಲ್ಲು ರವರ ಪರಿಶ್ರಮ ಈ ಸಂಶೋಧನಾ ಪ್ರಬಂಧವನ್ನು ಓದಿದಾಗ ನಮಗೆ ತಿಳಿಯುತ್ತದೆ.
ಈ ಸಂಶೋಧನಾ ಪ್ರಬಂಧ ಪುಸ್ತಕವನ್ನು ಓದಲು ಆಸಕ್ತಿ ಇರುವವರು “ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಫಿಕೃಪಾ ಒಂದನೇ ಮಹಡಿ, ರಾಜಾಸೀಟ್ ರಸ್ತೆ, ಮಡಿಕೇರಿ-571201” ಇಲ್ಲಿಗೆ ಸಂಪರ್ಕಿಸಿ ಪುಸ್ತಕವನ್ನು ಖರೀದಿಸಬಹುದು.
ಈ ಅಮೂಲ್ಯವಾದ ಪ್ರಬಂಧವನ್ನು ಸಂಶೋಧಿಸಿ ಬರೆದಿರುವ ಡಾ.ಪುರುಷೋತ್ತಮ ಕರಂಗಲ್ಲು ರವರಿಗೆ ಹಾಗೂ ಆ ಸಂಶೋಧನೆಯನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಓದುಗರಿಗೆ ದೊರಕುವಂತೆ ಮಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಈ ಪುಸ್ತಕವನ್ನು ನನಗೆ ಕಳುಹಿಸಿ ಅರೆಭಾಷೆ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಅವಕಾಶ ಕಲ್ಪಿಸಿದ ಡಾ.ಪುರುಷೋತ್ತಮ ಕರಂಗಲ್ಲು ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ
…✍️ಉಲ್ಲಾಸ್ ಕಜ್ಜೋಡಿ