Ad Widget

ನೀರು ಕುಡಿದು ನಿರೋಗಿಗಳಾಗಿ – ನಮಗೆಷ್ಟು ನೀರು ಬೇಕು?

ನಮ್ಮ ದೇಹದ ಆರೋಗ್ಯಕ್ಕೆ ನೀರು ಅತೀ ಅವಶ್ಯಕ. ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ತೂಕಕ್ಕೆ ಮತ್ತು ಜೀವನಶೈಲಿಗೆ ಹೊಂದಿಕೊಂಡು ನೀರಿನ ಅವಶ್ಯಕತೆಯ ಮಟ್ಟ ಭಿನ್ನವಾಗಿರುತ್ತದೆ. ವ್ಯಕ್ತಿಯ ದೈಹಿಕ ಪರಿಸ್ಥಿತಿ (ಗರ್ಭಾವಸ್ಥೆ ಹಾಲೂಡಿಸುವ ಸಮಯ ಇತ್ಯಾದಿ) ಮತ್ತು ದೇಹದ ಆರೋಗ್ಯ ಪರಿಸ್ಥಿತಿ (ಜ್ವರ, ವಾಂತಿ, ಭೇದಿ, ಅತಿಸಾರ ಇತ್ಯಾದಿ) ವ್ಯಕ್ತಿಯ ವಯಸ್ಸು, ಲಿಂಗ ಮುಂತಾದ ಎಲ್ಲಾ ಅಂಶಗಳು ವ್ಯಕ್ತಿಯ ನೀರಿನ ಅವಶ್ಯಕತೆಯನ್ನು ನಿರ್ಧರಿಸುತ್ತದೆ. ಒಬ್ಬ 75 ಕೆಜಿಯ ವ್ಯಯಸ್ಕ ವ್ಯಕ್ತಿಯ ದೇಹದಲ್ಲಿ ಸುಮಾರು 60ರಿಂದ 65 ಶೇಕಡಾ ನೀರಿನಿಂದ ಕೂಡಿರುತ್ತದೆ ಮತ್ತು ನವಜಾತು ಶಿಶುವಿನ ದೇಹದಲ್ಲಿ 70ರಿಂದ 75ಶೇಕಡಾ ನೀರು ಇರುತ್ತದೆ. ಈ ನೀರು ನಮ್ಮ ದೇಹದೊಳಗಿನ ಜೀವಕೋಶಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸಲು ಸಹಕರಿಸುತ್ತದೆ ಮತ್ತು ಜೀವಕೋಶಗಳಿಗೆ ಜೀವಸತ್ವಗಳು ಮತ್ತು ಪೋಷಕಾಂಶ ಒದಗಿಸಲು ಸಹಾಯ ಮಾಡುತ್ತದೆ. ನಾವು ಸೇವಿಸಿದ ಆಹಾರದ ಜೀರ್ಣ ಪ್ರಕ್ರಿಯೆಗೆ ಮೂತ್ರಪಿಂಡಗಳಲ್ಲಿ ಕಲ್ಲು ಬೆಳೆಯದಂತೆ, ಮಲಬದ್ಧತೆ ಬಾರದಂತೆ ತಡೆಯಲು ನೀರು ನಮ್ಮ ದೇಹಕ್ಕೆ ಅತಿ ಅವಶ್ಯಕ. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸದಿದ್ದಲ್ಲಿ ಹಲವಾರು ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಗಂಭೀರ ರೋಗಕ್ಕೆ ಮುನ್ನಡಿ ಬರೆಯುತ್ತದೆ.

. . . . . . . . .

ನಮಗೆಷ್ಟು ನೀರು ಬೇಕು? :-

ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರೋಟಿನ್, ವಿಟಮಿನ್ ಮತ್ತು ಶರ್ಕರಪಿಷ್ಠಗಳಿಂದ ಕೂಡಿದ ಸಮತೋಲನ ಆಹಾರ ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ನಿಯಮಿತ ಪ್ರಮಾಣದ ನೀರು ಕೂಡ ಅತೀ ಅವಶ್ಯಕ. ದಿನಂಪ್ರತಿ ಉಸಿರಾಟ, ಬೆವರುವಿಕೆ, ಮಲಮೂತ್ರ ಮುಂತಾದವುಗಳ ಮೂಲಕ ದೇಹದಿಂದ ನೀರನ್ನು ಕಳೆದುಕೊಳ್ಳುತ್ತೇವೆ. ಈ ಕಳೆದು ಹೋದ ನೀರನ್ನು ಸರಿದೂಗಿಸಲು ಮತ್ತು ದೇಹದ ಇತರ ಜೈವಿಕ ಕ್ರಿಯೆಗಳನ್ನು ನಿರ್ವಹಿಸಲು ನಾವು ಸಾಕಷ್ಟು ಪ್ರಮಾಣದಲ್ಲಿ ಪಾನೀಯಗಳನ್ನು ಮತ್ತು ನೀರನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಅತೀ ಅವಶ್ಯಕ. ಇಲ್ಲವಾದಲ್ಲಿ ನೀರಿನ ಅಸಮತೋಲನ ಉಂಟಾಗಿ ರೋಗ ರುಜಿನಗಳಿಗೆ ಕಾರಣವಾಗಬಹುದು. ಒಬ್ಬ ಆರೋಗ್ಯವಂತ ಪುರುಷನಿಗೆ ದಿನವೊಂದಕ್ಕೆ 3ರಿಂದ 3.5 ಲೀಟರ್ ನೀರು ಮತ್ತು ಮಹಿಳೆಗೆ 2.5ರಿಂದ 3 ಲೀಟರ್ ನೀರು ಸೇವಿಸದಿದ್ದಲ್ಲಿ, ದೇಹದ ಜೈವಿಕ ಕ್ರಿಯೆಗಳಲ್ಲಿ ಏರುಪೇರಾಗಿ ನಿರ್ಜಲೀಕರಣ ಉಂಟಾಗಲೂಬಹುದು. ಹಾಗೆಂದ ಮಾತ್ರಕ್ಕೆ ಅತಿಯಾದ ನೀರಿನ ಸೇವನೆ ಕೂಡಾ ಒಳ್ಳೆಯದಲ್ಲ. ನೀರಿನ ಅವಶ್ಯಕತೆ ಹೊರಗಿನ ತಾಪಮಾನ ಮತ್ತು ದೈಹಿಕ ಕಸರತ್ತನ್ನೂ ಅವಲಂಬಿಸಿದೆ ಎಂದರೂ ತಪ್ಪಲ್ಲ. ನೀವು ವ್ಯಾಯಾಮ ಅಥವಾ ಇನ್ನಾವುದೇ ದೈಹಿಕ ಪರಿಶ್ರಮ ಇರುವ ಕೆಲಸದಲ್ಲಿ ತೊಡಗಿದ ಬಳಿಕ ನಿಮ್ಮ ದೇಹದ ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಯಾಕೆಂದರೆ ಬೆವರಿನ ಮುಖಾಂತರ ನಿಮ್ಮ ದೇಹದಿಂದ ಹೊರ ಹೋದ ನೀರಿನ ಅಂಶವನ್ನು ಸರಿದೂಗಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಅತೀ ಅಗತ್ಯ. ವ್ಯಾಯಾಮದ ಬಳಿಕ 2 ರಿಂದ 2.5 ಲೀಟರ್ ನೀರು ಹೆಚ್ಚಿಗೆ ಬೇಕಾಗಬಹುದು. ಅದೇ ರೀತಿ ಬಿಸಿಯಾದ ವಾತಾವರಣ ಅಥವಾ ತೇವಬರಿತ ವಾತಾವರಣದಲ್ಲಿ ಬೆವರುವಿಕೆ ಜಾಸ್ತಿ ಇರುತ್ತದೆ ಈ ಕಾರಣದಿಂದ ಹೆಚ್ಚು ನೀರಿನ ಸೇವನೆ ಬೇಕಾಗುತ್ತದೆ. ಚಳಿಗಾಲದಲ್ಲಿ ಬೆವರು ಕಡಿಮೆಯಾದರೂ ಮೂತ್ರದ ಪ್ರಮಾಣ ಜಾಸ್ತಿ ಇರುತ್ತದೆ. ದೇಹದ ಆರೋಗ್ಯ ಸ್ಥಿತಿ ಬಿಗಡಾಯಿಸಿ ಜ್ವರ, ವಾಂತಿ ಭೇದಿ, ಅತಿಸಾರ ಉಂಟಾದಾಗ ನಮ್ಮ ದೇಹದಿಂದ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗಿ ನಿರ್ಜಲೀಕರಣವಾಗಬಹುದು. ಈ ಸಂದರ್ಭಗಳಲ್ಲಿ ನಾವು ನೀರನ್ನು ಹೆಚ್ಚು ಸೇವಿಸಬೇಕು. ಇನ್ನು ಹೃದಯದ ಖಾಯಿಲೆ ವೈಫಲ್ಯ, ಮೂತ್ರಪಿಂಡದ ವೈಫಲ್ಯ ಮುಂತಾದ ಸಂದರ್ಭಗಳಲ್ಲಿ ದೇಹದ ನೀರಿನ ಅಸಮತೋಲನವಾಗಿ, ಜಾಗರೂಕತೆಯಿಂದ ದ್ರವಾಂಶ ಸೇವನೆ ಮಾಡಬೇಕಾದ ಅನಿವಾರ್ಯತೆಯೂ ಇರುತ್ತದೆ. ಅತಿಯಾದ ನೀರು ಸೇವನೆ ಮಾಡಿದಲ್ಲಿ ಹೃದಯದ ಮೇಲೆ ಒತ್ತಡ ಉಂಟಾಗಿ ಹೃದಯಾಘಾತವೂ ಸಂಭವಿಸಬಹುದು. ಇನ್ನು ಹೆಂಗಸರಲ್ಲಿ ಗರ್ಭವಾಸ್ಥೆಯ ಸಮಯದಲ್ಲಿ ಮತ್ತು ಹಾಲೂಡಿಸುವ ಸಮಯದಲ್ಲಿ, ಮಹಿಳೆಯರಲ್ಲಿ ನೀರಿನ ಅಂಶದ ಸಮತೋಲನ ಕಾಯ್ದುಕೊಳ್ಳಲು ಹೆಚ್ಚುವರಿ ನೀರಿನ ಅವಶ್ಯಕತೆ ಇರುತ್ತದೆ. ಸಾಮಾನ್ಯ ಮಹಿಳೆ 2.5 ಲೀಟರ್ ಸೇವಿಸಿದಲ್ಲಿ ಗರ್ಭೀಣಿಯರಲ್ಲಿ ಮತ್ತು ಹಾಲೂಡಿಸುವಾಗ 3 ರಿಂದ 3.5 ಲೀಟರ್ ನೀರು ಬೇಕಾಗುತ್ತದೆ. ಇದು ಬರಿ ನೀರೇ ಹಾಗಬೇಕೆಂದಿಲ್ಲ. ನೀರಿನ ಅಂಶ ಜಾಸ್ತಿ ಇರುವ ಹಣ್ಣು ತರಕಾರಿ, ಸೊಪ್ಪು, ಕಾಯಿಪಲ್ಯಗಳನ್ನು ಸೇವಿಸಿದರೂ ಆಗಬಹುದು. ಒಟ್ಟಿನಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಅತೀ ಅವಶ್ಯಕ.

ನೀರಿನಿಂದ ಆಗುವ ಪ್ರಯೋಜನಗಳು :-

ಶುದ್ಧ ನೀರು ಅತಿ ಸುಲಭವಾಗಿ ದೊರೆಯುವ, ಕ್ಯಾಲೋರಿ ರಹಿತವಾದ ಉಚಿತವಾಗಿ ದೊರೆಯುವ ಇಲ್ಲವೇ ದುಬಾರಿ ಅಲ್ಲದ ದ್ರವಾಹಾರವಾಗಿದ್ದು ದೇಹದ ಎಲ್ಲ ಜೈವಿಕ ಕ್ರಿಯೆಗಳಿಗೆ ಅತೀ ಅವಶ್ಯಕ. ನಮ್ಮ ಹಿರಿಯರು ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಗೆ ನೀರು ಕುಡಿಯುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ ಇದರಿಂದಾಗುವ ಉಪಯೋಗಗಳೆಂದರೆ,

  1. ದೇಹದ ತೂಕ ಇಳಿಸಿಕೊಳ್ಳಲು ನೀರು ಸಹಕಾರಿಯಾಗುತ್ತದೆ. ಶುದ್ಧ ಕ್ಯಾಲೋರಿ ರಹಿತ ನೀರು ಕುಡಿಯುವುದರಿಂದ ಮನಸ್ಸು ಉಲ್ಲಸಿತವಾಗಿ ದೈಹಿಕ ಚಟುವಟಿಕೆಗಳು ಬಿರುಸುಗೊಂಡು ದೇಹದೊಳಗಿನ ಕೊಬ್ಬು ಕರಗಿಸಲು ಅಥವಾ ಅಧಿಕವಾಗಿ ಶೇಕರಣೆಗೊಂಡ ಕ್ಯಾಲರಿಗಳನ್ನು ಬಳಸಿಕೊಳ್ಳಲು ಪ್ರೇರೇಪಿಸುತ್ತದೆ. ಆ ಮೂಲಕ ದೇಹದ ಮೇಲೆ ಧನಾತ್ಮಕ ಪರಿಣಾಮ ಉಂಟು ಮಾಡುತ್ತದೆ.
  2. ನಮ್ಮ ದೇಹದಲ್ಲಿನ ಜೀವಕೋಶಗಳಲ್ಲಿ ನಡೆಯುವ ಜೈವಿಕ ಕ್ರಿಯೆಗಳಿಂದ ಉತ್ಪನ್ನವಾಗುವ ಕಲ್ಮಷಗಳನ್ನು ತೊಡೆದು ಹಾಕಲು ನೀರಿನ ಸೇವನೆ ಅತೀ ಅಗತ್ಯ. ಈ ಮೂಲಕ ನಮ್ಮ ತ್ವಚ್ಛೆಯು ಕಾಂತಿಪೂರ್ಣವಾಗಿ ನಯವಾಗಿ ಹೊಳೆಯುತ್ತಿರುತ್ತದೆ.
  3. ಖಾಲಿ ಹೊಟ್ಟೆಗೆ ನೀರು ಸೇವಿಸುವುದರಿಂದ ನಮ್ಮ ಜೀರ್ಣ ಪ್ರಕ್ರಿಯೆಯೂ ಕೂಡಾ ಉತ್ತಮಗೊಳ್ಳುತ್ತದೆ. ಮಲಬದ್ಧತೆಯನ್ನು ತಡೆಯಲೂ ಸಹಕಾರಿಯಾಗುತ್ತದೆ.
  4. ನೀರು ಕುಡಿಯುವುದರಿಂದ ಹೊಸ ರಕ್ತ ಉತ್ಪತ್ತಿಯಾಗಲು ಮತ್ತು ಸ್ನಾಯಖಂಡಗಳ ರÀಚನೆಗೆ ಪೂರಕವಾಗುತ್ತದೆ. ದೇಹಕ್ಕೆ ನವ ಚೈತನ್ಯ ಮತ್ತು ಉಲ್ಲಾಸವನ್ನು ನೀಡುತ್ತದೆ.
  5. ಖಾಲಿ ಹೊಟ್ಟೆಗೆ ನೀರು ಕುಡಿದಾಗ ನಮ್ಮ ದೊಡ್ಡ ಕರುಳು ಸ್ವಚ್ಛವಾಗುತ್ತದೆ. ಆ ಮೂಲಕ ನಾವು ತಿನ್ನುವ ಆಹಾರದಿಂದ ವಿಟಮಿನ್, ಪ್ರೋಟಿನ್, ಜೀವ ಸತ್ವಗಳ ಮತ್ತು ಪೋಷಕಾಂಶಗಳನ್ನು ಹೇರಲು ಅನುಕೂಲವಾಗುತ್ತದೆ.
  6. ನಮ್ಮ ದೇಹದ ಆರೋಗ್ಯವನ್ನು ಸುರಕ್ಷಿತವಾಗಿಡಲು ದೇಹದೊಳಗಿನ ದುಗ್ಧಗ್ರಂಥಿಗಳ ಕಾರ್ಯತತ್ವತೆ ಅತೀ ಅಗತ್ಯ. ಈ ದುಗ್ಧ ಗ್ರಂಥಿಗಳು ನಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು, ದೇಹದ ದ್ರವಾಂಶ ಸಮತೋಲನದಲ್ಲಿಡಲು ಮತ್ತು ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸೂಕ್ತ ಪ್ರಮಾಣದಲ್ಲಿ ಬೆಳಗ್ಗಿನ ಹೊತ್ತು ನೀರು ಸೇವಿಸಿದಲ್ಲಿ ಈ ದುಗ್ಧ ಗ್ರಂಥಿಗಳು ಚೆನ್ನಾಗಿ ಕೆಲಸ ನಿರ್ವಹಿಸಿ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಡುತ್ತದೆ.
  7. ಬೆಳಗ್ಗಿನ ಹೊತ್ತು ನೀರು ಕುಡಿಯುವುದರಿಂದ ತಲೆನೋವು ಬರುವುದು ತಪ್ಪುತ್ತದೆ. ದೇಹಕ್ಕೆ ನಿರ್ಜಲೀಕರಣವಾದಲ್ಲಿ ತಲೆನೋವು ಬರುತ್ತದೆ. ಸೂಕ್ತ ಪ್ರಮಾಣದಲ್ಲಿ ನೀರು ಸೇವಿಸುವುದರಿಂದ ತಲೆನೋವು ಬರುವುದನ್ನು ತಪ್ಪಿಸಬಹುದು.
  8. ನೀರು ಕುಡಿಯುವುದರಿಂದ ನಮ್ಮ ದೇಹದB M R ಅಂದರೆ ಜೀವಕೋಶಗಳ ಜೈವಿಕ ಕ್ರಿಯೆ 24 ಶೇಕಡಾದಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿವೆ. ಇದರಿಂದಾಗಿ ನಿಮ್ಮ ಜೀರ್ಣ ಪ್ರಕ್ರಿಯೆ ಮತ್ತು ಜೀರ್ಣಾಂಗ ವ್ಯವಸ್ಥೆ ತಹಬಂದಿಗೆ ಬಂದು, ದೇಹ ಆರೋಗ್ಯ ಪೂರ್ಣವಾಗಿರುತ್ತದೆ.
  9. ಬೆಳಗ್ಗಿನ ಹೊತ್ತು ನೀರು ಸೇವಿಸುವುದರಿಂದ ದೇಹದಲ್ಲಿನ ರಕ್ತದೊಳಗಿನ ಕೆಂಪುರಕ್ತಣಗಳ ಸಂಖ್ಯೆ ವೃದ್ಧಿಸಲು ಸಹಕಾರಿಯಾಗುತ್ತದೆ, ಇದರಿಂದ ದೇಹದಲ್ಲಿ ಆಮ್ಲಜನಕದ ಪೂರೈಕೆ ಸರಾಗವಾಗಿ ವ್ಯಕ್ತಿ ಯಾವಾತ್ತೂ ಉಲ್ಲಸಿತನಾಗಿರುತ್ತ್ತಾನೆ.
  10. ಬೆಳಗ್ಗಿನ ಹೊತ್ತು ನೀರು ಸೇವಿಸುವುದರಿಂದ ದೇಹದ ರಕ್ತಣಾ ವ್ಯವಸ್ಥೆ ಪರಿಪಕ್ವವಾಗುತ್ತದೆ, ದೇಹದಲ್ಲಿನ ನೀರಿನ ಸಮತೋಲನ, ದೇಹದ ರಕ್ತಣ ವ್ಯವಸ್ಥೆಗೆ ಅತೀ ಅಗತ್ಯ. ದೇಹದಲ್ಲಿ ನೀರಿನ ವ್ಯತ್ಯಯವಾದಾಗ ರಕ್ತಣ ವ್ಯವಸ್ಥೆಯ ಹದಗೆಟ್ಟು ರೋಗ ರುಜಿನಗಳಿಗೆ ದಾರಿ ಮಾಡಿಕೊಡುತ್ತದೆ. ನೀರಿನ ಚಿಕಿತ್ಸೆ (Water Therapy) ಜಪಾನಿನಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಜಪಾನೀಯರು ಬೆಳಗ್ಗೆ ಎದ್ದ ತಕ್ಷಣ 4 ಗ್ಲಾಸು ನೀರನ್ನು ಹಲ್ಲುಜ್ಜುವ ಮೊದಲೇ ಕುಡಿಯುತ್ತಾರೆ. ಇದಾದ ಬಳಿಕ ಸುಮಾರು 30 ರಿಂದ 45 ನಿಮಿಷ ಅವರು ಏನನ್ನು ಸೇವಿಸುವುದಿಲ್ಲ. ಈ ರೀತಿ ಮಾಡುವುದರಿಂದ ಜಪಾನೀಯರು ದಿನವಿಡೀ ಉಲ್ಲಸಿತರಿರುತ್ತಾರೆ. ವಿಶ್ವದಲ್ಲಿನ ಜನರಲ್ಲಿ, ಅತೀ ಹೆಚ್ಚು ಕೆಲಸ ಮಾಡುವ ಮತ್ತು ಉಲ್ಲಸಿತರಾಗಿರುವ ವ್ಯಕ್ತಿಗಳೆಂದರೆ ಜಪಾನೀಯರು ಎಂದರೂ ತಪ್ಪಲ್ಲ. ಇದರ ರಹಸ್ಯ ಈ ನೀರು ಚಿಕಿತ್ಸÉಯಲ್ಲಿ ಅಡಗಿದೆ ಎಂಬ ಸತ್ಯ ಬಹುಷಃ ಹೆಚ್ಚಿನವರಿಗೆ ತಿಳಿದಿಲ್ಲ. ಅದೇನೇ ಇರಲಿ ಉಚಿತವಾಗಿ ದೊರೆಯುವ ಶುದ್ಧ ನೀರನ್ನು ಕುಡಿದಲ್ಲಿ ನಾವು ಆರೋಗ್ಯವಂಥನಾಗಿ ನೂರುಕಾಲ ಬದುಕಬಹುದು ಎಂಬುದಂತೂ ಸತ್ಯವಾದ ಮಾತು. ನೆನಪಿರಲಿ ಒಂದು ಔನ್ಸ್ ಎಂದರೆ 30ml, ಒಂದು ಗ್ಲಾಸು ನೀರಲ್ಲಿ 8 ಔನ್ಸ್ ಎಂದರೆ 240ml ನೀರು ಇರುತ್ತದೆ. 4 ಗ್ಲಾಸು ನೀರು ಎಂದರೆ ಸುಮಾರು 1 ಲೀಟರ್ ನೀರು ಎಂದಾಗುತ್ತದೆ. ದಿನವೊಂದರ ಬಳಕೆ 8 ರಿಂದ 10 ಗ್ಲಾಸು ನೀರು ಅಂದರೆ 2 ರಿಂದ 3 ಲೀಟರ್ ನೀರು ಆಗುತ್ತದೆ.

ನೀರಿನಿಂದ ಕ್ಯಾಲೋರಿ ಹೇಗೆ ಕರಗುತ್ತದೆ? :-

ಇತ್ತೀಚಿಗೆ ಸಂಶೋಧನೆಗಳಿಂದ ಒಂದು ಲೀಟರ್ ನೀರು ಕುಡಿದರೆ ಎರಡು ಕಿ.ಮಿ. ನಡೆದಷ್ಟು ಕ್ಯಾಲೋರಿ ಕರಗುತ್ತದೆ ಎಂದು ತಿಳಿದು ಬಂದಿದೆ. ಇನ್ನೊಂದು ಮಾತಲ್ಲಿ ಹೇಳುದಾದಲ್ಲಿ, ತೂಕ ಇಳಿಸೋದು ನೀರು ಕುಡಿದಷ್ಟು ಸುಲಭ ಎಂಬರ್ಥವೂ ಇದರಲ್ಲಿ ಬರುತ್ತದೆ. ಕ್ಯಾಲರಿ ಎನ್ನುವುದು ಶಕ್ತಿಯನ್ನು ಅಳೆಯುವ ಮಾಪಕವಾಗಿದ್ದು, ಒಂದು ಗ್ರಾಂ ನೀರಿನ ಉಷ್ಣಾಂಷವನ್ನು ಒಂದು ಡಿಗ್ರಿ ಹೆಚ್ಚಿಸುವುದಕ್ಕೆ ಬೇಕಾಗುವ ಶಕ್ತಿಯನ್ನು ಒಮದು ಕ್ಯಾಲೋರಿ ಎನ್ನುತ್ತಾರೆ. ನೀರು ಕುಡಿದರೆ ಪ್ಯಾಟ್ ಬರ್ನ ಆಗತ್ತೆ ಅಥವಾ ಕೊಬ್ಬು ಕರಗತ್ತೆ ಎಂದು ಸಂಶೋಧನೆಗಳಿಂದ ರುಜುವಾತಾಗಿದೆ. ನಾವು ತಿನ್ನುವ ಆಹಾರದಿಂದ ನಮಗೆ ಶಕ್ತಿ ದೊರಕುತ್ತದೆ. ನಾವು ನಮ್ಮ ಅಗತ್ಯಕ್ಕಿಂತ ಜಾಸ್ತಿ ತಿಂದಲ್ಲಿ, ಕೊಬ್ಬಿನ ರೂಪದಲ್ಲಿ ನಮ್ಮ ದೇಹದೆಲ್ಲೆಡೆ ಶೇಖರಣೆಯಾಗುತ್ತದೆ. ಈ ಕೊಬ್ಬು ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತಲೇ ಇರುತ್ತದೆ. ತಿಂದ ಆಹಾರಕ್ಕೆ ಸರಿ ಸಮವಾದ ವ್ಯಾಯಾಮ, ದೈಹಿಕ ಕಸರತ್ತು ಅಥವಾ ಚಟುವಟಿಕೆ ಮಾಡಿದಲ್ಲಿ ಈ ಕೊಬ್ಬು ಕರಗಿ ಶಕ್ತಿಯಾಗಿ ಪರಿವರ್ತನೆಗೊಂಡು ದೇಹದ ತೂಕ ಹತೋಟಿಗೆ ಬರುತ್ತದೆ. ಇದನ್ನು ಬಿಟ್ಟು ಯದ್ವಾ ತದ್ವ ತಿಂದು ವ್ಯಾಯಾಮ ಮಾಡಿದಿದ್ದಲ್ಲಿ ದೇಹದ ತೂಕ ಹೆಚ್ಚಾಗುತ್ತದೆ, ಡಯಟ್, ವ್ಯಾಯಾಮ ಮಾಡಿದ ಕೂಡಲೇ ಕೊಬ್ಬು ಕರಗುತ್ತದೆ. ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ನೀರಿನಿಂದ ಫ್ಯಾಟ್ ಬರ್ನ್ ಅಥವಾ ಕೊಬ್ಬು ಕರಗಿಸುವುದು ಎಂದಾಗ, ನೀರಿನಿಂದ ಕ್ಯಾಲರಿ ಕರಗಿಸೋದು ಎಂದು ಅರ್ಥೆಸಲಾಗುತ್ತದೆ.
ಇತ್ತೀಚಿಗೆ ಇಂಗ್ಲೇಂಡಿನಲ್ಲಿ ಒಂದು ಪ್ರಯೋಗ ನಡೆಸಲಾಯಿತು, ಇದರಂತೆ ಒಂದಷ್ಟು ಜನರಿಗೆ ದಿನಂಪ್ರತಿ 2 ಲೀಟರ್ ನೀರು ಜಾಸ್ತಿ ಕುಡಿದಾಗ, ದೇಹದಲ್ಲಾಗಿರುವ ಬದಲಾವಣೆಯನ್ನು ಗಮನಿಸಲಾಯಿತು. ನೀರು ಸೇವಿಸಿದ ಬಳಿಕ ದೈಹಿಕ ಚಟುವಟಿಕೆ ಜಾಸ್ತಿಯಾಗಿ ದಿನವೊಂದರಲ್ಲಿ 100 ಕ್ಯಾಲರಿ ಜಾಸ್ತಿ ಕರಗಿ ಹೋಯಿತು ಎಂದು ತಿಳಿದು ಬಂತು. ಒಂದು ಕಿ.ಮಿ. ನಡೆದಾಗ 50 ಕ್ಯಾಲರಿ ಕರಗುತ್ತದೆ. ಈ ನಿಟ್ಟಿನಲ್ಲಿ 2 ಲೀಟರ್ ನೀರು ಸೇವಿಸಿದ ಬಳಿಕ 100 ಕ್ಯಾಲರಿ ಕರಗಿದೆ ಎಂದಾದಲ್ಲಿ, 2 ಕಿಮಿ ನಡೆದಷ್ಟು ಪರಿಣಾಮ ದೇಹದಲ್ಲಿ ಉಂಟಾಗುತ್ತದೆ ಎಂದು ಸಾಬೀತಾಯಿತು. ಒಟ್ಟಿನಲ್ಲಿ ಕ್ಯಾಲರಿ ಕರಗಿಸೋದು ನೀರು ಕುಡಿದಷ್ಟೆ ಸುಲಭ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಅದೇನೇ ಇರಲಿ ನಿಮ್ಮ ದೇಹದಲ್ಲಿನ ಅಧಿಕ ಕೊಬ್ಬು ಕರಗಿಸಬೇಕÉಂದಿದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಿರಿ, ಆಮೂಲಕ ದೇಹದ ಚಟುವಟಿಕೆ ಜಾಸ್ತಿಯಾಗಿ, ಕೊಬ್ಬು ಕರಗಿ ನೀರಾಗಿ, ನೀವು ಕುಡಿದ ನೀರೇ ನಿಮಗೆ ಅಮೃತವಾಗಿ, ದೇಹದ ಆರೋಗ್ಯ ವೃದ್ಧಿಸುವುದಂತೂ ಸತ್ಯವಾದ ಮಾತು ಎಂದರೂ ತಪ್ಪಾಗಲ್ಲಿಕ್ಕಿಲ್ಲ.

ಕೊನೆಮಾತು :-

ನೀರು ನಮ್ಮ ದೇಹಕ್ಕೆ ಅತೀ ಅವಶ್ಯಕವಾದ, ಜೀವಕೋಶಗಳ ಮೂಲಭೂತವಾದ ಜೈವಿಕ ಕ್ರಿಯೆಗಳಿಗೆ ಪೂರಕವಾದ ಅಂಶವಾಗಿದ್ದು, ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕಾದ ಅನಿವಾರ್ಯತೆ ನಮಗೆಲ್ಲರಿಗೂ ಇದೆ. ನೀರಿನ ಸೇವನೆಯಿಂದ ದೇಹದ ಕಲ್ಮಷಗಳು ಹೊರಹಾಕಲ್ಪಟ್ಟು ಚರ್ಮದ ಆರೋಗ್ಯ, ಮಾನಸಿಕ ಸಂತೋಷ, ಕೀಲುಗಳು, ಎಲುಬುಗಳು ಮತ್ತು ದೇಹದ ಜೀವಕಣಗಳ ಆರೋಗ್ಯವನ್ನು ಸಮತೋಲನದಲ್ಲಿ ಇಡುತ್ತದೆ. ನೀರಿನಿಂದ ದೇಹದಲ್ಲಿ ಅತಿಯಾದ ಕೊಬ್ಬು ಕೂಡಾ ಕರಗುತ್ತದೆ ಎಂದೂ ಸಾಬೀತಾಗಿದೆ. ಹಾಗೆಂದ ಮಾತ್ರಕ್ಕೆ ಅತಿಯಾದರೆ ಅಮೃತವೂ ವಿಷವೆಂಬತೆ, ಅತಿಯಾದ ನೀರಿನ ಸೇವನೆಯೂ ಒಳ್ಳೆಯದಲ್ಲ. ಅತಿಯಾದ ನೀರಿನ ಸೇವನೆ ದೇಹದ ಜೀರ್ಣ ಕ್ರಿಯೆಗೆ ಮಾರಕವಾಗಬಹುದು. ನೀರು ಕೊಬ್ಬನ್ನು ಕರಗಿಸುತ್ತದೆ ಎಂದು ಎಲ್ಲೆಂದರೆಲ್ಲಿ ಹೊತ್ತು ಗೊತ್ತಿನ ಪರಿವೆ ಇಲ್ಲದೆ ಯದ್ವಾತದ್ವ ನೀರು ಕುಡಿಯಬಾರದು. ಊಟದ ಸಮಯದಲ್ಲಿ ಅತಿಯಾದ ನೀರಿನ ಸೇವನೆ ಒಳ್ಳೆಯದಲ್ಲ. ಇದರಿಂದ ಜೀರ್ಣ ಪ್ರಕ್ರಿಯೆಗೆ ತೊಡಕಾಗಬಹುದು ನಮ್ಮ ದೇಹದ ತೂಕ, ವಯಸ್ಸು, ಎತ್ತರ, ದೇಹ ಪ್ರಕೃತಿ, ವಾತಾವರಣ ತಾಪಮಾನ, ದೈಹಿಕ ಪರಿಸ್ಥಿತಿ ಇದರ ಮೇಲೆ ನಮ್ಮ ದೇಹದ ನೀರಿನ ಅವಶ್ಯಕತೆ ಅವಲಂಬಿತವಾಗಿದೆ. ಇದೆಲ್ಲಾ ಅಂಶಗಳನ್ನು ಗಮನವಿಟ್ಟುಕೊಂಡು ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರನ್ನು ಕುಡಿದಲ್ಲಿ, ನಿಮ್ಮ ದೇಹದ ಆರೋಗ್ಯವನ್ನು ನೀರು ಕುಡಿದಷ್ಟೇ ಸುಲಭವಾಗಿ ಕಾಪಾಡಿಕೊಳ್ಳಬಹುದು ಎಂಬುದಂತೂ ಸೂರ್ಯಚಂದ್ರರಷ್ಟೇ ಸತ್ಯವಾದ ವಿಚಾರ. ಸಾಕಷ್ಟು ನೀರು ಕುಡಿದು ನೀರ ಯೋಗಿಗಳಾಗಿ ನೀವು ಬದುಕಿದಲ್ಲಿ ನೀರೋಗಿಗಳಾಗಿ ನೂರುಕಾಲ ಸುಖವಾಗಿ ಬದುಕಬಹುದು, ಅದರಲ್ಲಿಯೇ ನಿಮ್ಮ ಮತ್ತು ನಿಮ್ಮ ಕುಟುಂಬದವರ ಹಾಗೂ ಸಮಾಜದ ಹಿತ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787
www.surakshadental.com
drmuraleechoontharu@gmail.com

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!