
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.)ದ ಆಶ್ರಯದಲ್ಲಿ ಎಪ್ರಿಲ್ 12 ರಿಂದ 19 ರ ವರೆಗೆ ಅಭಿನಯ ಪ್ರಧಾನ ಚಿಣ್ಣರಮೇಳವನ್ನು ಏರ್ಪಡಿಸಲಾಗಿದೆ .
ಎ.12 ರಂದು ಪೂ.9.30 ಕ್ಕೆ ಮಕ್ಕಳ ಬೇಸಿಗೆ ಶಿಬಿರವನ್ನು ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಪ್ರಭಾಕರ ಶಿಶಿಲರು ಉದ್ಘಾಟಿಸಲಿದ್ದಾರೆ. ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷರಾದ ಬುದ್ದ ನಾಯ್ಕ್, ದಾಮಾಯಣ ಚಲನಚಿತ್ರ ಖ್ಯಾತಿಯ ನಟ, ನಿರ್ದೇಶಕ ಶ್ರೀಮುಖ ಸುಳ್ಯ ಹಾಗೂ ಭಾವ ತೀರ ಯಾನ ಚಲನಚಿತ್ರದ ನಿರ್ದೇಶಕ ,ಸಂಗೀತ ಸಂಯೋಜಕ ಮಯೂರ್ ಅಂಬೆಕಲ್ಲು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಯೋಗ, ಯಕ್ಷಗಾನ, ಸಂಗೀತ, ಭರತನಾಟ್ಯ, ನಾಟಕ ಇತ್ಯಾದಿಗಳ ಬಹುಮುಖ ಪ್ರತಿಭೆ ಕು| ಹಾರ್ದಿಕ ಕೆರೆಮೂಲೆ ಇವಳನ್ನು ರಂಗಮನೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಶಿಬಿರದ ಪ್ರತಿಭಾನ್ವಿತ ಸಂಪನ್ಮೂಲ ವ್ತಕ್ತಿಗಳು :
ನೀನಾಸಮ್ ಪದವೀಧರರಾದ ಡಾ| ಜೀವನ್ ರಾಂ ಸುಳ್ಯ ಮಮತಾ ಕಲ್ಮಕಾರು, ರಂಗ ತಂತ್ರಜ್ಞ ಮಧುಸೂಧನ ಮೈಸೂರು, ರಂಗ ಕಲಾವಿದರಾದ ರಾಜೇಂದ್ರ ಪ್ರಸಾದ್ ಮಂಡ್ಯ, (ರಂಗಾಯಣ ಮೈಸೂರು) , ಪ್ರೀತಂ ಎಸ್.ಹಾಸನ( ನಟನ ಮೈಸೂರು) ಹಾರಂಬಿ ಯತಿನ್ ವೆಂಕಪ್ಪ,
ರಂಗ ಕಲಾವಿದೆಯರಾದ ಭಾವನಾ ಕೆರೆಮಠ ಉಡುಪಿ,
ವಸಂತಲಕ್ಷ್ಮೀ ಪುತ್ತೂರು, ಸಂಗೀತ ನಿರ್ದೇಶಕ ಶಿವಗಿರಿ ಕಲ್ಲಡ್ಕ,
ಕಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು,
ಬಹುಮುಖ ಪ್ರತಿಭೆ ಮಾ| ಮನುಜ ನೇಹಿಗ ಸುಳ್ಯ ,
ಹಿರಿಯ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ,
ಸುಳ್ಯ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಕೆ.
ಅಲ್ಲದೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಾದ
ಡ್ರಾಮಾ ಜ್ಯೂನಿಯರ್ ಖ್ಯಾತಿಯ ತೇಜಸ್ವಿನಿ ತರೀಕೆರೆ, ನಿಶ್ಮಿತಾ ಬೆಂಗಳೂರು, ವಿಜಯ್ ಹಕ್ಕಿ ಬೆಳಗಾಂ, ಕೃಪಾ ನಾಯಕ್ ತುಮಕೂರು ಇವರುಗಳು ಸಹಾಯಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ರಂಗಾಭಿನಯ, ಮಾತುಗಾರಿಕೆ, ರಂಗದಾಟಗಳು (Theatre Games) , ಕೋಲಾಟ, ಕಥಾಭಿನಯ, ಅಭಿನಯ ಗೀತೆ, ಸ್ವರ-ಅನುಕರಣೆ, ರಂಗ ವ್ಯಾಯಾಮ, ಧ್ವನಿ ಸಂಸ್ಕಾರ, ರಂಗ ಗೀತೆ, ಜನಪದ ಹಾಡುಗಳು, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು, ಚಿತ್ರಕಲೆ, ಕ್ರಾಫ್ಟ್, ಮುಖವಾಡ ತಯಾರಿ, ಮುಖವರ್ಣಿಕೆ, ನಾಟಕ ತಯಾರಿ ಮತ್ತು ಪ್ರದರ್ಶನ ನಡೆಯಲಿದೆ.
ಎಪ್ರಿಲ್ 19 ರಂದು ಅಪರಾಹ್ನ 2.00 ಕ್ಕೆ ನಡೆಯುವ ಸಮಾರೋಪದಲ್ಲಿ ಶಿಬಿರದಲ್ಲಿ ಭಾಗವಹಿಸಿದ 150 ಮಕ್ಕಳು ಅಭಿನಯಿಸುವ ಕಿರು ನಾಟಕಗಳ ನಾಟಕೋತ್ಸವ ನಡೆಯಲಿದೆ ಎಂದು ರಂಗಮನೆಯ ಅಧ್ಯಕ್ಷ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
