
ಮಂಡೆಕೋಲು ಗ್ರಾಮದ ಮುರೂರು ದ್ವಾರಕಾನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂಪಾಯಿ ಒಂದೂವರೆ ಲಕ್ಷ ಧನಸಹಾಯ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡರವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಧವ ಗೌಡರವರು ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ದಾನಗಳಿಗೆ ಹೆಸರುವಾಸಿಯಾಗಿದ್ದು ಕಳೆದ 800 ವರ್ಷಗಳಿಂದ ಕ್ಷೇತ್ರದಲ್ಲಿ ಅನ್ನದಾನ, ವಿದ್ಯಾದಾನ, ಅಭಯದಾನಗಳ ಮೂಲಕ ರಾಜ್ಯದಾದ್ಯಂತ ಮಠ ಮಂದಿರ, ದೇವಸ್ಥಾನಗಳು, ಶಾಲೆ, ಅಂಗನವಾಡಿ, ಹಾಲು ಉತ್ಪಾದಕರ ಸಹಕಾರ ಸಂಘ, ಹಿಂದೂ ರುದ್ರಭೂಮಿ ಸೇರಿದಂತೆ ಸಮಾಜದ ಬೇರೆ ಬೇರೆ ಕ್ಷೇತ್ರಗಳಿಗೆ ನೂರಾರು ಕೋಟಿಯ ದಾನಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುತ್ತಿದೆ. ಸುಳ್ಯ ತಾಲೂಕು ಒಂದರಲ್ಲೇ ವರ್ಷವೊಂದಕ್ಕೆ ಹತ್ತಾರು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ನಾವು ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞರಾಗಬೇಕಾಗಿದೆ ಎಂದರಲ್ಲದೆ ಕ್ಷೇತ್ರದಿಂದ ಸಿಗುವ ಸವಲತ್ತುಗಳ ಬಗ್ಗೆ ವಿಸ್ತ್ರತವಾದ ಮಾಹಿತಿಯನ್ನು ನೀಡಿದರು.
ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಮಾತನಾಡಿ ನಮ್ಮ ಗ್ರಾಮವೊಂದಕ್ಕೆ ಕಳೆದ ಎರಡು ವರ್ಷಗಳಲ್ಲಿ ದೇವಸ್ಥಾನ, ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ರುದ್ರಭೂಮಿ, ಭಜನಾ ಮಂದಿರ, ದೈವಸ್ಥಾನ ಮೊದಲಾಗಿ ಲಕ್ಷಾಂತರ ಮೊತ್ತದ ಅನುದಾನ ಶ್ರೀ ಕ್ಷೇತ್ರದಿಂದ ನೀಡಿದ್ದಾರೆ. ಸರಕಾರವೊಂದು ಮಾಡದ ಕೆಲಸಗಳನ್ನು ಇವತ್ತು ಧರ್ಮಸ್ಥಳ ಕ್ಷೇತ್ರದ ವತಿಯಿಂದ ವೀರೇಂದ್ರ ಹೆಗಡೆಯವರು ಮಾಡುತ್ತಿದ್ದಾರೆ. ಅದಕ್ಕಾಗಿ ಈ ಗ್ರಾಮದ ಜನರ ಪರವಾಗಿ ಅವರಿಗೂ ಕ್ಷೇತ್ರದ ಯೋಜನೆಯನ್ನು ಸಮರ್ಪಕವಾಗಿ ಒದಗಿಸುವಲ್ಲಿ ಪ್ರಾಮಾಣಿಕ ಕೆಲಸ ನಿರ್ವಹಿಸುವ ಯೋಜನೆಯ ಎಲ್ಲಾ ಅಧಿಕಾರಿ ವೃಂದಕ್ಕೂ ಕಾರ್ಯಕರ್ತರಿಗೂ ಕೃತಜ್ಞತೆಯನ್ನು ಸಲ್ಲಿಸುವುದಾಗಿ ನುಡಿದರು. ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಜಿತ್ ಮಾತನಾಡಿ ಅನುದಾನವನ್ನು ಒದಗಿಸಿದ ಕ್ಷೇತ್ರಕ್ಕೂ ಹಾಗೂ ಅನುದಾನ ಒದಗಿಸಲು ಸಹಕರಿಸಿದ ಯೋಜನೆಯ ಅಧಿಕಾರಿ ವೃಂದ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಮಂದಿರದ ಪರವಾಗಿ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರಗತಿಬಂಧು ಸ್ವಸಹಾಯ ಒಕ್ಕೂಟಗಳ ತಾಲೂಕು (ಕೇಂದ್ರ)ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಜಿತ್ ಮಾವಂಜಿ, ಪ್ರತಿಷ್ಟಾ ಸಮಿತಿ ಅಧ್ಯಕ್ಷರಾದ ಡಿ.ವಿ. ಸುರೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸತ್ಯನಾರಾಯಣ ಶರ್ಮ, ಸುದರ್ಶನ್ ಮುರೂರು, ವಿಶ್ವನಾಥ ಕೊಳಂಬೆ, ಮಧುಸೂಧನ ಮುರೂರು, ವಸಂತ, ರಾಜೀವ ಮುರೂರು, ಸಂದೇಶ್ ಮುರೂರು, ಯೋಜನೆಯ ವಲಯ ಮೇಲ್ವಿಚಾರಕರಾದ ಕಾಂತಿಕಾಮಣಿ, ಸೇವಾಪ್ರತಿನಿಧಿ ವೇದಾವತಿ ಮೊದಲಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಕಾಂತಿಕಾಮಣಿ ಸ್ವಾಗತಿಸಿ, ವೇದಾವತಿ ಧನ್ಯವಾದ ಸಮರ್ಪಿಸಿದರು.
