
ಸಂಘಟನೆಯ ಸಂಚಾಲಕ ಕಿಶೋರ್ ಶಿರಾಡಿ ಸುದ್ದಿಗೋಷ್ಠಿ :
ನವಂಬರ್ 15 ರಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಶ್ರೀ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ಹೋರಾಟದ ವಿಚಾರವಾಗಿ ಭಾದಿತ ಗ್ರಾಮಗಳ ಜಂಟಿಸರ್ವೆ ನಡೆಸಬೇಕೆಂಬ ವಿಚಾರವನ್ನಿಟ್ಟುಕೊಂಡು ಹೋರಾಟಕ್ಕೆ ಕರೆಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರು, ಧಾರ್ಮಿಕ ಮುಖಂಡರು ,ಸಂಘಟನೆಗಳ ಪ್ರಮುಖರು ಈ ಹೋರಾಟದಲ್ಲಿ ಸಭೆ ನಡೆಸಿ ಗುಂಡ್ಯದ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟಿ ಪ್ರತಿಭಟಿಸಿ ಕೇಸ್ ಕೂಡಾ ಹಾಕಿಸಿಕೊಂಡಿದ್ದರು. ಹೋರಾಟದ ತೀವ್ರತೆಯನ್ನು ಪರಿಗಣಿಸಿದ ಕರ್ನಾಟಕ ಸರಕಾರ ಶೀಘ್ರವೇ ಜಂಟಿಸರ್ವೆ ನಡೆಸುವಂತೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸುತ್ತೋಲೆ ಹೊರಡಿಸಿದೆ. ಈಗಾಗಲೆ ಕಡಬದ 3 ಗ್ರಾಮಗಳ ಜಂಟಿಸರ್ವೇ ನಡೆಸುವಂತೆ ನೋಟಿಸ್ ಬಂದಿದ್ದು ಹೋರಾಟಗಾರರ ಮುಖದಲ್ಲಿ ಸಾರ್ಥಕತೆಯ ನಗು ಮೂಡಿದೆ. ಈ ಹಿನ್ನಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟಗಾರ ಕಿಶೋರ್ ಶಿರಾಡಿ ಜಂಟಿ ಸರ್ವೇ ನಡೆಸುವಾಗ ಎಲ್ಲಾ ಬಾಧಿತ ಗ್ರಾಮಗಳ ಸರ್ವೇ ಒಟ್ಟಿಗೆ ನಡೆಸಬೇಕು ಹಾಗೂ ಆಯಾಯ ಗ್ರಾಮ ಪಂಚಾಯತ್ ಗಳಿಗೆ ಮಾಹಿತಿ ನೀಡಿ ಎಲ್ಲಾ ಜನರಿಗೆ ಮಾಹಿತಿ ನೀಡಿಯೇ ಸರ್ವೇ ನಡೆಸಬೇಕು, ಈ ಹಿನ್ನಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
