
“ವೈದ್ಯೋ ನಾರಾಯಣೋ ಹರಿಃ” ಎಂಬ ಶ್ಲೋಕದಲ್ಲಿ ಹೇಳಿರುವಂತೆ “ವೈದ್ಯರಾದವರು ದೇವರಿಗೆ ಸಮಾನರಾದವರು, ಅವರು ರೋಗಿಯ ರೋಗವನ್ನು ಪರಿಹಾರ ಮಾಡುವುದು ಮಾತ್ರವಲ್ಲದೇ ರೋಗಿಯ ಹಿತಚಿಂತಕರೂ ಆಗಿರುತ್ತಾರೆ” ಎನ್ನುವ ಮಾತಿದೆ. ಇಂದು ಈ ಮಾತಿಗೆ ನಮ್ಮೆದುರು ಸ್ಪಷ್ಟ ಉದಾಹರಣೆಯಾಗಿ ನಿಂತಿರುವವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುಧೀರ್ಘ 29 ವರ್ಷಗಳಿಂದ ಸೇವೆ ಸಲ್ಲಿಸಿ, ಪ್ರಸ್ತುತ ಸುಳ್ಯ ತಾಲೂಕು ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಮಾ.31 ರಂದು ವಯೋನಿವೃತ್ತಿಯನ್ನು ಹೊಂದುತ್ತಿರುವ, ತಾಲೂಕಿನ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತರಾಗಿರುವ, ಎಲ್ಲರನ್ನೂ ಪ್ರೀತಿಯಿಂದ ಕಾಣುವ ಜನತೆಯ ಅಚ್ಚುಮೆಚ್ಚಿನ ಸಹೃದಯಿ ವೈದ್ಯರಾದ “ಡಾ| ನಂದಕುಮಾರ್ ಬಾಳಿಕಳ” ರವರು.
ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕಡ್ಯ ತರವಾಡು ರಾಘವ ರೇಂಜರ್ ಎಂದೇ ಖ್ಯಾತರಾಗಿದ್ದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಿವಂಗತ ಬಾಳಿಕಳ ರಾಘವ ಗೌಡ ಹಾಗೂ ಶ್ರೀಮತಿ ಯಶೋಧಾ ದಂಪತಿಗಳ ಪುತ್ರನಾಗಿ 1965 ಮಾರ್ಚ್ 23 ರಂದು ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಪುತ್ತೂರು, ಬೈಂದೂರು, ಹೆಬ್ರಿ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಜೂನಿಯರ್ ಕಾಲೇಜು ಇಲ್ಲಿ ಪೂರ್ಣಗೊಳಿಸಿದರು.
ನಂತರ 1992 ರಲ್ಲಿ ಬೆಂಗಳೂರು ಒಕ್ಕಲಿಗರ ಸಂಘದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದ ಇವರು ಬೆಂಗಳೂರಿನಲ್ಲಿ ತರಬೇತಿ ಪೂರ್ಣಗೊಳಿಸಿ ಊರಿಗೆ ಮರಳಿದರು.
ನಂತರ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಹಾಗೂ ಕಾಸರಗೋಡಿನ ಕಿಮ್ಸ್ ಆಸ್ಪತ್ರೆಯಲ್ಲಿ 02 ವರ್ಷಗಳ ಕಾಲ ಖಾಸಗಿ ಸೇವೆ ಸಲ್ಲಿಸಿ, ಸುಳ್ಯದ ಗಾರ್ಡನ್ ಆಸ್ಪತ್ರೆಯಲ್ಲಿ ಸರ್ಕಾರಿ ಸೇವೆಗೆ ನೇಮಕಗೊಂಡು 1998 ರವರೆಗೆ ಸೇವೆ ಸಲ್ಲಿಸಿ ನಂತರ ಸರ್ಕಾರದ ಆದೇಶದ ಮೇರೆಗೆ 1998 ಮೇ.01 ರಂದು ಗುತ್ತಿಗೆ ಆಧಾರದಲ್ಲಿ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರ್ಪಡೆಗೊಂಡರು. 2006ನೇ ಇಸವಿಯ ನಂತರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡ ಇವರು 2015 ರವರೆಗೆ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಎಸ್.ಎಂ.ಓ ಆಗಿ ಸುಳ್ಯದ ಸಂಚಾರಿ ಗಿರಿಜನ್ ಆರೋಗ್ಯ ಘಟಕಕ್ಕೆ ವರ್ಗಾವಣೆಗೊಂಡರು.
2021 ರಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಇವರು 2023 ರಲ್ಲಿ ಖಾಯಂ ತಾಲೂಕು ಆರೋಗ್ಯಾಧಿಕಾರಿಗಳಾಗಿ ಮುಂದುವರೆದು ಸುಧೀರ್ಘ 29 ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಮ್ಮ ಸೇವೆಯನ್ನು ನೀಡಿ ಇದೇ ತಿಂಗಳು ಮಾರ್ಚ್ 31 ರಂದು ವಯೋನಿವೃತ್ತಿ ಹೊಂದುತ್ತಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ತಾಲೂಕಿನ ಜನರ ಪ್ರೀತಿಗೆ ಪಾತ್ರರಾದ ನಿಮ್ಮ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭಹಾರೈಸುತ್ತಿದ್ದೇನೆ ಸರ್…
ಇವರ ಪತ್ನಿ ಶ್ರೀಮತಿ ಮಂಜುಳಾ ರವರು ಗೃಹಿಣಿಯಾಗಿದ್ದು, ಪುತ್ರಿ ಆತ್ಮಿಕಾ ಬೆಂಗಳೂರಿನ ಎನ್.ಎಂ.ಸಿ ಐ.ಬಿ.ಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಪುತ್ರ ಆಸ್ತಿಕ್ ರಾಘವ್ ನಿಟ್ಟೆ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದ್ವಿತೀಯ ಬಿ.ಡಿ.ಎಸ್ ವ್ಯಾಸಂಗವನ್ನು ಮಾಡುತ್ತಿದ್ದಾರೆ.
✍️ಉಲ್ಲಾಸ್ ಕಜ್ಜೋಡಿ