
ಸುಳ್ಯದ ವಿದ್ಯುತ್ ಸಮಸ್ಯೆ ನಿವಾರಣೆಗೆ ತುರ್ತಾಗಿ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣವಾಗಿಬೇಕಿದ್ದು, ಇದೀಗ ಲೈನ್ ನಿರ್ಮಾಣಕ್ಕೆ ರೈತರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು ರೈತರಿಗೆ ನೊಟೀಸ್ ನೀಡದೇ ಕೃಷಿ ಜಾಗಗಳಿಗೆ ಅಧಿಕಾರಿಗಳು ಬಂದು ದಬ್ಬಾಳಿಕೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳು ಜಂಟಿ ಸರ್ವೆಗೆ ಯಾಕೆ ಒಪ್ಪಿಲ್ಲ. ಅವರು ತೋಟ ಕಡಿದೇ ಲೈನ್ ಮಾಡಬೇಕೆಂದು ಹಠ ಹಿಡಿದಿದ್ದಾರೆ.
ಜಂಟಿ ಸರ್ವೆ ಮಾಡಿಸಿ ಹಾಗೂ ಇಂಜಿನಿಯರ್ ಗಳು ಹೇಳಿದ್ದನ್ನೆಲ್ಲಾ ನಂಬಬೇಡಿ, ನೀವೇ ಪರಿಶೀಲನೆ ಮಾಡಿ ಎಂದು ಶಾಸಕರಿಗೆ ರೈತರು ಮನವಿ ಮಾಡಿದರು.
ಹಳೆಯ 33ಕೆವಿ. ಲೈನ ನ್ನು 110 ಕೆವಿ ಲೈನನ್ನಾಗಿ ಮಾಡಿ, ಅದು ಅರಣ್ಯದ ಬದಿಯಲ್ಲಿ ಹಾದು ಹೋಗುವುದರಿಂದ ಅರಣ್ಯಕ್ಕೆ ಕೂಡ ಜಾಸ್ತಿ ಹಾನಿಯಾಗುವುದಿಲ್ಲ ಎಂದರು. ಪುತ್ತೂರು ಶಾಸಕರನ್ನು ಸೇರಿಸಿಕೊಂಡು ಇನ್ನೊಮ್ಮೆ ಸಭೆ ನಡೆಸಿ ಎಂದು ಸಲಹೆ ನೀಡಿದರು.
ಈ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಗಳು ಉತ್ತರಿಸಿ ಹಳೆಯ ವಿದ್ಯುತ್ ಲೈನ್ ನಲ್ಲಿ ಅರಣ್ಯ ಜಾಸ್ತಿ ನಾಶವಾಗುತ್ತದೆ. ಈಗಿನ ಸ್ಕೆಚ್ ಪ್ರಕಾರ ಅರಣ್ಯಕ್ಕೆ ಕಡಿಮೆ ಹಾನಿಯಾಗುತ್ತದೆ. ಮಾಡಾವು ನಿಂದ ಸುಳ್ಯಕ್ಕೆ ಕಡಿಮೆ ಅಂತರ ಬರುವಂತೆ ಲೈನ್ ಸ್ಕೆಚ್ ಮಾಡಲಾಗಿದೆ ಎಂದರು.
ಸುಳ್ಯದ ಅಭಿವೃದ್ಧಿಯ ದೃಷ್ಟಿಯಿಂದ ರೈತರು ಸಹಕಾರ ನೀಡಬೇಕು, ನಾನು ನಿಮ್ಮ ಜೊತೆ ಇರುತ್ತೇನೆ ಪುತ್ತೂರು ಭಾಗದಲ್ಲಿ ಕೂಡ ಸಭೆ ನಡೆಸುವ ಎಂದು ಶಾಸಕರು ಭರವಸೆ ನೀಡಿದರು.
ಸುಳ್ಯದ ವಿದ್ಯುತ್ ಸಮಸ್ಯೆ ನಿವಾರಣೆಗೆ ಶಾಸಕಿ ಭಾಗೀರಥಿ ಅವರು ಮುತುವರ್ಜಿ ವಹಿಸಿ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದ ಹಿನ್ನೆಯಲ್ಲಿ ಮೆಸ್ಕಾಂ ಎಂ.ಡಿ. ನೇತೃದಲ್ಲಿ ಕೂಡ ಸಭೆ ನಡೆದಿತ್ತು. ರೈತರ ವಿರೋಧ ಹಿನ್ನೆಲೆಯಲ್ಲಿ ಶಾಸಕರು ರೈತರ ಸಭೆ ಕರೆದಿದ್ದರು. ಅಧಿಕಾರಿಗಳು ಹಾಗೂ ರೈತರ ನಡುವೆ ತಿಕ್ಕಾಟದಿಂದ ಸಮಸ್ಯೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಅಧಿಕಾರಿಗಳು ಬದಲಾವಣೆಗೆ ಒಪ್ಪುತ್ತಿಲ್ಲ, ರೈತರು ಬಿಡುತ್ತಿಲ್ಲವಾದ್ದರಿಂದ ಶಾಸಕರಿಗೆ ಇದು ಕಬ್ಬಿಣದ ಕಡಲೆಕಾಯಿಯಂತಾಗಿದೆ. ರೈತರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದು ಸುಳ್ಯದ 110ಕೆವಿ ಸಬ್ ಸ್ಟೇಷನ್ ವಿಳಂಬವಾಗುವ ಸಾಧ್ಯತೆಯೇ ಹೆಚ್ಚಿದೆ.
ರೈತ ಮುಖಂಡರಾದ ಶ್ರೀಧರ ಶೆಟ್ಟಿ, ವೆಂಕಟ್ರಾಯ್ ಹಾಲ್ ಮಜಲು, ಈಶ್ವರ ಭಟ್ ಕಲಾವನ, ಮುರಳೀಕೃಷ್ಣ ಸಿದ್ಧಮೂಲೆ, ಅಶ್ವಿನ್ ಬೈತಡ್ಕ, ಕಿರಣ್ ಕುರುಂಜಿ ಸಭೆಯಲ್ಲಿ ಮಾತನಾಡಿದರು. ಸಭೆಗೆ ಪುತ್ತೂರು ತಾಲೂಕಿನ ಕೆಯ್ಯೂರು, ಪಾಲ್ತಾಡು, ಕೊಳ್ತಿಗೆ ಹಾಗೂ ಸುಳ್ಯದ ಭಾಗದ ರೈತರು ಆಗಮಿಸಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಮಂಜುಳಾ, ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಚೈತನ್ಯ, ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ, ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ್ , ಅರಣ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.